ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ : ಯುಎಸ್‌ಎ ಘಟಕ ಉದ್ಘಾಟನೆ

Posted On: 22-05-2023 11:05AM

ಕಾಪು : ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಂತಾರಾಷ್ಟ್ರೀಯ ಘಟಕವನ್ನು ಯುಎಸ್‌ಎ ಸಮಿತಿಯ ಅಧ್ಯಕ್ಷ ಅಖಿಲ ಅಮೇರಿಕಾ ತುಳು ಅಸೋಸಿಯೇಶನ್‌ನ ಸಂಸ್ಥಾಪಕ ಭಾಸ್ಕರ ಶೇರಿಗಾರ್ ಬೋಸ್ಟನ್, ಶೈಲಶ್ರೀ ಶೇರಿಗಾರ್, ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅವರು ಅಮೆರಿಕದ ಬೋಸ್ಟನ್‌ನಲ್ಲಿ ಮೇ 14 ರಂದು ಉದ್ಘಾಟಿಸಿದರು.

ಪ್ರಸ್ತವಾನೆಗೈದ ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ಪ್ರಪಂಚದಾದ್ಯಂತ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನವು ಸಮಗ್ರವಾಗಿ ಜೀರ್ಣೋದ್ದಾರಗೊಳ್ಳುತ್ತಿದೆ. 17ನೇ ಶತಮಾನದ ಕೆಳದಿ ಅರಸರ ಕಾಲದ ಇತಿಹಾಸವನ್ನು ಹೊಂದಿರುವ ಮಾರಿಗುಡಿಯ ಪುನರುತ್ಥಾನ ಯೋಜನೆಗಳು ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಳ್ಳುತ್ತಿವೆ. ಜೀರ್ಣೋದ್ಧಾರಕ್ಕೆ ಪೂರಕವಾಗಿ 18 ಕ್ಕೂ ಅನೇಕ ದೇಶಗಳಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಸಹಸ್ರಮಾನದಲ್ಲೊಮ್ಮೆ ಸಿಗಬಹುದಾದ ಮಾರಿಗುಡಿ ಜೀರ್ಣೋದ್ದಾರ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸುವಂತೆ ಅವರು ವಿನಂತಿಸಿದರು. ಅಧ್ಯಕ್ಷತೆ ವಹಿಸಿದ್ದ ಯುಎಇ ಸಮಿತಿ ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಮಾತನಾಡಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕದಾದ್ಯಂತ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿಯ ಸಂದೇಶವನ್ನು ಹರಡುವುದರ ಜತೆಗೆ ಜೀರ್ಣೋದ್ಧಾರ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮತ್ತು ಬೆಂಬಲಿಸುವುದಾಗಿ ಭರವಸೆ ನೀಡಿದರು.

ಅಮೇರಿಕಾ ಸಮಿತಿಯ ಸದಸ್ಯ ಶರತ್ ಅಮೀನ್, ಬೋಸ್ಟನ್ ತುಳುಕೂಟದ ಸಂಸ್ಥಾಪಕ ಅಧ್ಯಕ್ಷ ಮತ್ತು ಬೋಸ್ಟನ್ ಕನ್ನಡ ಕೂಟದ ಮಾಜಿ ಅಧ್ಯಕ್ಷ ಡಾ| ಸುಧಾಕರ ರೇವನ್, ಶಿರೀಶ್ ಶೆಟ್ಟಿ ಅಟ್ಲಾಂಟಾ, ಡಿಜಿಟಲ್ ಕ್ಯೂಬ್ಸ್‌ನ ಸಿಇಒ ಸಂತೋಷ್ ಉಡುಪಿ ಮಿಚಿಗನ್, ರಾಮದಾಸ್ ಕುಲಾಲ್ ನ್ಯೂಯಾರ್ಕ್, ಆಟಾದ ಅಧ್ಯಕ್ಷೆ ಶ್ರೀವಲ್ಲಿ ರೈ ಫ್ಲೋರಿಡಾ, ಸಿದ್ಧಾರ್ಥ್ ಶೆಟ್ಟಿ ಟೆಕ್ಸಾಸ್, ಸುಷ್ಮಾ ಜಯಚಂದ್ರ ಪೆನ್ಸಿಲ್ವೇನಿಯಾ, ತುಳುವೆರೆ ಚಾವಡಿ ಸಂಸ್ಥಾಪಕ ಉಮೇಶ್ ಅಸೈಗೋಳಿ ಉತ್ತರ ಕೆರೊಲಿನಾ ಉಪಸ್ಥಿತರಿದ್ದರು. ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಯುಎಇ, ಯುಎಇ ಸಮಿತಿ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ, ಹೊಸ ಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ ಸಹಿತ ವಿವಿಧ ಸಮಿತಿಗಳ ಪ್ರಮುಖರು ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.

ನವದುರ್ಗೆಯರನ್ನು ಪ್ರತಿನಿಧಿಸುವ ಒಂಬತ್ತು ಸುಮಂಗಲಿಯರಾದ ಪೂಜಾ ಶೆಟ್ಟಿ, ಡಾ| ಉಷಾ ರಾವ್, ರಮ್ಯಾ ಜೈನ್, ಲಕ್ಷ್ಮೀ ಪುರಾಣಿಕ್, ಮಧು ಗೌಡ, ಚಂದ್ರಿಕಾ ರಾವ್, ಚಂದ್ರ ಬಿಸ್ವಾಸ್, ಶೈಲಶ್ರೀ ಶೇರಿಗಾರ್ ಮತ್ತು ಸೌಮ್ಯಾ ಕರುಣಾಕರ್ ಒಂಬತ್ತು ದೀಪಗಳನ್ನು ಬೆಳಗಿಸಿದರು. ಸಂಘಟಕರಾದ ಶೈಲಶ್ರೀ ಭಾಸ್ಕರ ಶೇರಿಗಾರ್ ಸ್ವಾಗತಿಸಿದರು. ಶಿರೀಶ್ ಶೆಟ್ಟಿ ಅಟ್ಲಾಂಟಾ ವಂದಿಸಿದರು. ಡಾ| ಸುಧಾಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು.