ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣೆ, ಕುಟುಂಬ ಸಮ್ಮಿಲನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Posted On: 28-05-2023 07:51AM

ಕಾಪು : ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣೆ ಹಾಗೂ ಕುಟುಂಬ ಸಮ್ಮಿಲನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶನಿವಾರ ಕಾಪುವಿನಲ್ಲಿ ಜರಗಿತು.

ಕಾರ್ಯಕ್ರಮವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ‌ಮಾತನಾಡಿದ ಅವರು ಕಾಪು ಕ್ಷೇತ್ರವನ್ನು ಮಾದರಿಯಾಗಿಸುವ ಗುರಿಯಿದೆ. ಈ ನಿಟ್ಟಿನಲ್ಲಿ ಪತ್ರಕರ್ತರ ಸಲಹೆ ಅವಶ್ಯ. ಸಾಮಾಜಿಕ ಬದ್ಧತೆಯ ಮೂಲಕ ಕ್ಷೇತ್ರದ ಬಗೆಗೆ ಕಾಳಜಿಯಿರುವವರು ಪತ್ರಕರ್ತರು. ನಾಗರಿಕರ ಧ್ವನಿಯಾಗಿ ಸಮಾಜದ ಬೇಕು ಬೇಡಗಳನ್ನು ಸುದ್ದಿಯ ಮೂಲಕ ಜನಪ್ರತಿನಿಧಿಗಳಿಗೆ, ಸರಕಾರಕ್ಕೆ ತಲುಪಿಸುವ ಕಾರ್ಯವನ್ನು ಮಾಡುತ್ತಾರೆ. ಕಾಪು ಪತ್ರಕರ್ತರ ಸಂಘಕ್ಕೆ ಶಾಶ್ವತ ಕಟ್ಟಡಕ್ಕಾಗಿ ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗುವುದು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾರ್ಪೋರೇಟ್ ವ್ಯವಹಾರಗಳು ಯುಪಿಸಿಎಲ್, ಅದಾನಿ ಗ್ರೂಪ್ ಕಾರ್ಯನಿರ್ವಾಹಕ‌ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ ಮಾಧ್ಯಮಗಳ ಜೀವಂತಿಕೆಯಿಂದ ಸಮಾಜದ ಉನ್ನತಿ ಸಾಧ್ಯ. ಅದಾನಿ ಸಂಸ್ಥೆಯ ಮೂಲಕ ಸಾಮಾಜಿಕ ಜವಾಬ್ದಾರಿಯುತ ಕಾರ್ಯಗಳು ನಡೆದಿದೆ. ಸೂಕ್ತ ಕಟ್ಟಡ ಸೌಲಭ್ಯಕ್ಕಾಗಿ ಸಿ ಎಸ್ ಆರ್ ಯೋಜನೆ ಮೂಲಕ ಕಾಪು ಪತ್ರಕರ್ತರ ಸಂಘಕ್ಕೂ ಆರ್ಥಿಕ ನೆರವು ನೀಡಲಾಗುವುದು ಎಂದರು.

ಸಮ್ಮಾನ/ ಪ್ರತಿಭಾ ಪುರಸ್ಕಾರ/ಬಹುಮಾನ ವಿತರಣೆ : ಕಾಪು ಪತ್ರಕರ್ತರ ಸಂಘದ ವತಿಯಿಂದ ನೂತನ ನೂತನ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರನ್ನು, ಕಲಿಕೆ/ಸಾಧನೆಗೈದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯು ನಡೆಯಿತು.

ಈ ಸಂದರ್ಭ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕರಾದ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ, ಝಿಯಾನ್ ಕನ್ ಸ್ಟ್ರಕ್ಷನ್ಸ್ ಪ್ರೈ.ಲಿ. ಆಡಳಿತ ನಿರ್ದೇಶಕ ಗುಲಾಂ ಮೊಹಮ್ಮದ್ , ಉದ್ಯಮಿ ಹರೀಶ್ ನಾಯಕ್, ಸಂಘದ ಕೋಶಾಧಿಕಾರಿ ಅಬ್ದುಲ್ ಹಮೀದ್, ಜೊತೆ ಕಾರ್ಯದರ್ಶಿ ವಿಜಯ ಆಚಾರ್ಯ ಉಚ್ಚಿಲ ಮತ್ತಿತರರು ಉಪಸ್ಥಿತರಿದ್ದರು. ಕಾಪು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳು ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಸಂತೋಷ್ ಕಾಪು ಕ್ರೀಡಾ ವಿಜೇತರ ಪಟ್ಟಿ ವಾಚಿಸಿದರು. ಉಪಾಧ್ಯಕ್ಷರಾದ ಹರೀಶ್ ಕಟಪಾಡಿ ನಿರೂಪಿಸಿದರು. ಕಾರ್ಯದರ್ಶಿ ಪುಂಡಲೀಕ ಮರಾಠೆ ವಂದಿಸಿದರು.