ಪಡುಬಿದ್ರಿ: ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕವಾಗಿ ರೋಟರಿ ಸಂಸ್ಥೆಯು ಸೇವೆ ನೀಡುತಿದ್ದು, ಯುವ ಸಮುದಾಯ ರೋಟರಿ ಸಂಸ್ಥೆಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು ಎಂದು ರೋಟರಿ ಜಿಲ್ಲಾ ಮಾಜಿ ವೈಸ್‌ಚಯರ್ಮೆನ್ ಇಬ್ರಾಹಿಂ ಸಾಹೇಬ್ ಕರೆ ನೀಡಿದ್ದಾರೆ.
ಅವರು ಶನಿವಾರ ಪಡುಬಿದ್ರಿ ಸಾಯಿ ಆರ್ಕೇಡ್ ಸಭಾಭವನದಲ್ಲಿ ಪಡುಬಿದ್ರಿ ರೋಟರಿ ಸಂಸ್ಥೆಯ ೨೦೨೦- ೨೧ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ರೋಟರಿಯ ಗೃಹಪತ್ರಿಕೆ ಸ್ಪಂಧನ ಬಿಡುಗಡೆಗೊಳಿಸಿದ ರೋಟರಿ ವಲಯ ಸಹಾಯಕ ಗವರ್ನರ್ ನವೀನ್ ಅಮೀನ್ ಶಂಕರ್‌ಪು, ಮಾತನಾಡಿ, ಸಮಯವನ್ನು ನಾವು ಕೈಯಲ್ಲಿ ಹಿಡಿದು ಕೊಂಡು, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಬೇಕು. ಆಗ ಸಮಾಜ ಸುಧಾರಣೆ ಸಾಧ್ಯ ಎಂದರು.
೨೦೨೦-೨೧ನೇ ಸಾಲಿನ ಅಧ್ಯಕ್ಷ ಕೇಶವ ಸಿ. ಸಾಲ್ಯಾನ್, ಕಾರ್ಯದರ್ಶಿ ನಿಯಾಝ್ ತಂಡದ ಪದಗ್ರಹಣವನ್ನು ಅಮೀನ್ ಮತ್ತು ಅವರ ತಂಡದ ಪದಪ್ರಧಾನ ನಡೆಯಿತು.
ಪಡುಬಿದ್ರಿ ಗ್ರಾಮ ಪಂಚಾಯತಿಯ ಸ್ವಚ್ಛತಾ ಕರ್ಮಚಾರಿಗಳಾದ ಶಶಿ ಹಾಗೂ ಸುಶಾಂತ್, ರೋಟರಿ ವಲಯ ಮಾಜಿ ಸಹಾಯಕ ಗವರ್ನರ್ ಗಣೇಶ್ ಆಚಾರ್ಯ, ವಲಯ ಮಾಜಿ ಸೇನಾನಿ ರಮೀಝ್ ಹುಸೈನ್, ನಿಕಟಪೂರ್ವ ಅಧ್ಯಕ್ಷ ರಿಯಾಝ್ ಮುದರಂಗಡಿ, ಕಾರ್ಯದರ್ಶಿ ಸಂತೋಷ್, ಕೃಷ್ಣ ಬಂಗೇರ ಮುಂತಾದವರನ್ನು ಸನ್ಮಾನಿಸಲಾಯಿತು.
ವಲಯ ಸೇನಾನಿ ಹರೀಶ್ ಶೆಟ್ಟಿ ಪೊಲ್ಯ ಉಪಸ್ಥಿತರಿದ್ದರು. ರಿಯಾಝ್ ಮುದರಂಗಡಿ ಸ್ವಾಗತಿಸಿದರು. ಸಂತೋಷ್ ಪಡುಬಿದ್ರಿ ವರದಿ ವಾಚಿಸಿದರು. ಬಿ.ಎಸ್. ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.