ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಚ್ಚಿಲ : ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್ ವೈದ್ಯರಿಗೆ ಅಭಿನಂದನೆ

Posted On: 16-06-2023 08:53PM

ಉಚ್ಚಿಲ : ಮೊಗವೀರ ಮಹಾಜನ ಸಂಘದ ವತಿಯಿಂದ ಕರ್ನಾಟಕ ಸರಕಾರದ ನೂತನ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಮಂಕಾಳ ಎಸ್ ವೈದ್ಯರಿಗೆ ಶುಕ್ರವಾರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಜರಗಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಮಂಕಾಳ ಎಸ್ ವೈದ್ಯ, ಜಿ ಶಂಕರ್ ರವರ ದಾನ ಧರ್ಮದಿಂದ ಸಮಾಜದ ಆಶೀರ್ವಾದ ಅವರ ಮೇಲಿದೆ. ಹೆಜಮಾಡಿ ಬಂದರು ಕಾಮಗಾರಿಗೆ ಬಾಕಿ ಅನುದಾನ ಬಿಡುಗಡೆ ಮಾಡಿ ಸಂಪೂರ್ಣ ಮಾಡಲು ಸರಕಾರ ಬದ್ಧವಾಗಿದೆ. ಪಕ್ಷ ಬೇಧ ಮರೆತು ಕರಾವಳಿಯ ಅಭಿವೃದ್ಧಿಗೆ ಶ್ರಮವಹಿಸೋಣ ಎಂದರು.

ಈ ಸಂದರ್ಭ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರನ್ನು ಅಭಿನಂದಿಸಲಾಯಿತು. ಈ ಸಂದರ್ಭ ಮಾತನಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮೀನುಗಾರರಿಗೆ ಸರಿಯಾದ ಸವಲತ್ತು ಸರಕಾರದಿಂದ ಲಭಿಸಲು ಸಚಿವರು ಶ್ರಮಿಸಬೇಕು. ಮೀನುಗಾರಿಕಾ ಸಮುದಾಯದವರಾದ ಸಚಿವರಿಗೆ ಮೀನುಗಾರರ ಸಮಸ್ಯೆಗಳ ಬಗ್ಗೆ ತಿಳಿಸಿ ಹೇಳಬೇಕಾಗಿಲ್ಲ. ಅತಿ ಹೆಚ್ಚು ಮೀನುಗಾರರಿರುವ ಜಿಲ್ಲೆ ಉಡುಪಿ. ಮೀನುಗಾರರ ಶ್ರೇಯೋಭಿವೃದ್ಧಿಗೆ ಸರಕಾರ ಸಹಕರಿಸಬೇಕು. ಕರಾವಳಿಯ ೩ ಜಿಲ್ಲೆಯ ಮೀನುಗಾರರಿಗೆ ಸಿಗುವ ಎಲ್ಲಾ ಸೌಲಭ್ಯಗಳ ಮಾಹಿತಿ ಸಿಗುವಂತಾಗಬೇಕು. ಡ್ರೆಜ್ಜಿಂಗ್, ಸೀ ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಡಾ‌‌ ಜಿ. ಶಂಕರ್ ವಹಿಸಿದ್ದರು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ಆನಂದ ಸಿ. ಕುಂದರ್, ಪ್ರಸಾದ್ ರಾಜ್ ಕಾಂಚನ್, ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ ಅಮೀನ್, ಕ್ಷೇತ್ರಾಡಳಿ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಜಯ ಸಿ. ಕೋಟ್ಯಾನ್ ಸ್ವಾಗತಿಸಿದರು. ಸತೀಶ್ ಅಮೀನ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು.