ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಹಿರಿಯರ ಜೊತೆ ಕಿರಿಯರು ಒಟ್ಟಾದಾಗ ಸಂಸ್ಥೆಯ ಭವಿಷ್ಯ ಭದ್ರ - ಸೌಮ್ಯ ನಿತೇಶ್

Posted On: 19-06-2023 11:56AM

ಪಡುಬಿದ್ರಿ : ಯುವವಾಹಿನಿ ಸದಸ್ಯರ ನಡುವಿನ ಬಾಂಧವ್ಯ ಗಟ್ಟಿಯಾಗಲು ಕುಟುಂಬ ಕಲರವದಂತಹ ಕಾರ್ಯಗಳು ಅನಿವಾರ್ಯ. ಹಿರಿಯರ ಜೊತೆ ಕಿರಿಯರು ಒಟ್ಟಾದಾಗ ಸಂಸ್ಥೆಯ ಭವಿಷ್ಯ ಭದ್ರವಾಗುತ್ತದೆ. ಯುವವಾಹಿನಿ ಪಡುಬಿದ್ರಿ ಘಟಕದಿಂದ ಇನ್ನಷ್ಟು ಕಾರ್ಯಗಳು ನಡೆಯಲಿ ಎಂದು ಪಡುಬಿದ್ರಿ ಕೆನರಾ ಬ್ಯಾಂಕ್ ಪ್ರಬಂಧಕಿ ಸೌಮ್ಯ ನಿತೇಶ್ ಹೇಳಿದರು. ಅವರು ರವಿವಾರ ಪಡುಬಿದ್ರಿ ಸುಜ್ಲಾನ್ ಕಾಲೋನಿಯ ಸಭಾಗೃಹದಲ್ಲಿ ಯುವವಾಹಿನಿ ಪಡುಬಿದ್ರಿ ಘಟಕದ ಕುಟುಂಬದ ಸದಸ್ಯರಿಗಾಗಿ ನಡೆದ ಕುಟುಂಬ ಕಲರವ - 2023 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರರಾದ ಡಾ. ಎನ್. ಟಿ. ಅಂಚನ್ ಮಾತನಾಡಿ ಯುವವಾಹಿನಿ ಸಂಸ್ಥೆಯ ಮೂಲ ಉದ್ದೇಶವಾದ ವಿದ್ಯೆ, ಉದ್ಯೋಗ, ಸಂಪರ್ಕದ ನೆಲೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಔದ್ಯೋಗಿಕವಾಗಿ ಯುವವಾಹಿನಿ ಸಂಸ್ಥೆ ದುಡಿಯುತ್ತಿದೆ. ಯುವವಾಹಿನಿಯ ಕಾರ್ಯಕ್ರಮಗಳಲ್ಲಿ ಕಿರಿಯರಿಂದ ಹಿರಿಯರಾದಿಯಾಗಿ ಮುತುವರ್ಜಿಯ ಭಾಗವಹಿಸುವಿಕೆ ನೋಡಲು ಸಾಧ್ಯ. ಸಮಾಜದಲ್ಲಿ ಪ್ರತಿಭೆಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದಾಗ ಸಮಾಜಕ್ಕೆ ಬೆಳಕಾಗುವ ಶಕ್ತಿ ಮೂಡಲು ಸಾಧ್ಯ. ಯುವವಾಹಿನಿ ಸಂಸ್ಥೆ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಈ ಸಂದರ್ಭ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಘಟಕದ ಸುದೀಪ್ ಎಸ್ ಕೋಟ್ಯಾನ್ ಮತ್ತು ಸ್ನೇಹರನ್ನು ಸನ್ಮಾನಿಸಲಾಯಿತು. ಘಟಕದ ಕುಟುಂಬದ ಸದಸ್ಯರಿಗಾಗಿ ನಡೆದ ವಿವಿಧ ಮನೋರಂಜನಾತ್ಮಕ ಆಟಗಳ ಬಹುಮಾನ ವಿತರಿಸಲಾಯಿತು.

ಪಡುಬಿದ್ರಿ ಘಟಕದ ಉಪಾಧ್ಯಕ್ಷರಾದ ಅಶ್ವಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಉದಯ್ ಕಾವೂರು, ಕಾರ್ಯಕ್ರಮ ಸಂಚಾಲಕ ಪ್ರಜ್ವಲ್, ಘಟಕದ ಕಾರ್ಯದರ್ಶಿ ಡಾ. ಐಶ್ವರ್ಯ ಸಿ ಅಂಚನ್ ಉಪಸ್ಥಿತರಿದ್ದರು.

ಘಟಕದ ಸದಸ್ಯೆ ಸುಗಂಧಿ ಶ್ಯಾಮ್ ಪ್ರಾರ್ಥಿಸಿ, ಮಾಜಿ ಅಧ್ಯಕ್ಷ ಸುಜಿತ್ ಕುಮಾರ್ ಪ್ರಸ್ತಾವಿಸಿದರು. ಮಾಜಿ ಅಧ್ಯಕ್ಷರಾದ ರವಿರಾಜ್ ಎನ್. ಕೋಟ್ಯಾನ್ ಮತ್ತು ಜೊತೆ ಕಾರ್ಯದರ್ಶಿ ಪೂರ್ಣಿಮ ವಿಧಿತ್ ನಿರೂಪಿಸಿದರು. ಕಾರ್ಯಕ್ರಮ ಸಂಚಾಲಕರಾದ ಪ್ರಜ್ವಲ್ ವಂದಿಸಿದರು.