ಕಾಪು : ವೈದ್ಯರ ನಿರ್ಲಕ್ಷ್ಯ ಆರೋಪ - ಕೆಮುಂಡೇಲ್ ಯುವತಿ ಸಾವು
Posted On:
22-06-2023 10:07PM
ಕಾಪು : ವಿದ್ಯಾರ್ಥಿ ಜೀವನದಲ್ಲಿದ್ದು ಮುಂದೆ ಬಾಳಿ ಬದುಕಬೇಕಾಗಿದ್ದ ಯುವತಿಯೋರ್ವಳು ವೈದ್ಯರ
ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ಘಟನೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಕಾಪು ತಾಲೂಕಿನ ಎಲ್ಲೂರು ಗ್ರಾಮದ ಕೆಮುಂಡೇಲ್ ನ ಜನಾರ್ದನ ಮೂಲ್ಯ ಹಾಗೂ ಶೋಭಾ ಅವರ ಏಕೈಕ ಪುತ್ರಿ ನಿಖಿತ ಕುಲಾಲ್ (20)ಮೃತಪಟ್ಟ ದುರ್ದೈವಿ. ಕೆಪಿಟಿಯಲ್ಲಿ ದ್ವೀತಿಯ ವರ್ಷದ ಡಿಪ್ಲೋಮ ವಿದ್ಯಾರ್ಥಿನಿಯಾಗಿದ್ದರು.
ಜೂ.13ರ ಸೋಮವಾರ ರಾತ್ರಿ ನಿಖಿತ ವಿಪರೀತ ವಾಂತಿಯಿಂದ ಬಳಲಿ ಅಸ್ವಸ್ಥಗೊಂಡಿದ್ದ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವಾರು ಸ್ಕ್ಯಾನಿಂಗ್ ನಡೆಸಿದರೂ ಸರಿಯಾದ ಕಾರಣ ಪತ್ತೆಹಚ್ಚಲಾಗಲಿಲ್ಲ, ಬೇರೆ ಆಸ್ಪತ್ರೆಗೆ ಸೇರಿಸಲು ಆಸ್ಪತ್ರೆಯವರು ಬಿಡಲಿಲ್ಲ ಎಂದು ವಿದ್ಯಾರ್ಥಿನಿಯ ಚಿಕ್ಕಮ್ಮ ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಸ್ಪತ್ರೆಯ ಬೇಜವಾಬ್ದಾರಿ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿನಿಯ ಸಾವಿನ ತನಿಖೆಗೆ ಆಗ್ರಹಿಸಿ ಶುಕ್ರವಾರ ಎಬಿವಿಪಿ ಸಂಘಟನೆ ಆಸ್ಪತ್ರೆಯ ಎದುರು ಪ್ರತಿಭಟನೆಗೆ ಕರೆ ಕೊಟ್ಟಿದೆ. ಕಾಪು ಕುಲಾಲ ಸಂಘ ಮತ್ತು ಕಾಪು ಕುಲಾಲ ಯುವವೇದಿಕೆ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ.