ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಹೆದ್ದಾರಿ ಇಲಾಖೆಯ ಅಸಮರ್ಪಕ ಕಾಮಗಾರಿ ; ಮನೆಯೊಳಗೆ ನುಗ್ಗುವ ಚರಂಡಿ ನೀರು

Posted On: 05-07-2023 05:55PM

ಪಡುಬಿದ್ರಿ : ಇಲ್ಲಿನ ಕೆಳಗಿನ ಪೇಟೆಯ ಮನೆಯೊಂದಕ್ಕೆ ಈ ವರ್ಷವೂ ಹೆದ್ದಾರಿ ಇಲಾಖೆಯ ಅವ್ಯವಸ್ಥೆಯಿಂದ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಚರಂಡಿ ನೀರು ಮನೆಯೊಳಗೆ ಸೇರುವ ಸ್ಥಿತಿ ಉಂಟಾಗಿದೆ.

ಪಡುಬಿದ್ರಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸೂಕ್ತ ಸರ್ವಿಸ್ ರಸ್ತೆ ಒಂದೆಡೆ ಇಲ್ಲ. ಇನ್ನೊಂದೆಡೆ ಅರೆಬರೆ ಕಾಮಗಾರಿಯ ದ್ಯೋತಕವಾಗಿ ಸರಾಗವಾಗಿ ಹರಿಯಲು ಸರಿಯಾದ ಪೈಪ್ ವ್ಯವಸ್ಥೆ ಮಾಡದೆ ಚರಂಡಿ ನೀರು ಮನೆ, ಬಾವಿ ಸೇರುವಂತಾಗಿದೆ.

ಕಳೆದ ವರ್ಷ ಈ ಬಗ್ಗೆ ಸ್ಥಳೀಯ ಪಂಚಾಯತ್, ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಿಲ್ಲ. ಈ ಬಾರಿ ಮತ್ತದೇ ಸಮಸ್ಯೆಯಾಗಿದೆ. ಮನೆಗೆ ನೀರು ನುಗ್ಗದಂತೆ ಆವರಣ ಗೋಡೆ ಅಥವಾ ಈ ಸಮಸ್ಯೆಗೆ ಶಾಶ್ವತವಾದ ಪರಿಹಾರ ಸಂಬಂಧಪಟ್ಟ ಇಲಾಖೆಗಳು ಮಾಡಬೇಕಾಗಿದೆ ಎಂದು ಸಮಸ್ಯೆಯೊಳಗಾದ ಮನೆಯ ವೀರೇಂದ್ರ ಎನ್ ಪೂಜಾರಿ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಸರ್ವಿಸ್ ರಸ್ತೆಯ ಇನ್ನೊಂದು ಪಾಶ್ವ೯ದಲ್ಲಿ ಚರಂಡಿ ಅವ್ಯವಸ್ಥೆಯ ಬಗ್ಗೆ ಪರಿಶೀಲಿಸಲು ಉಡುಪಿ ಜಿಲ್ಲೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಸೂಕ್ತ ಕ್ರಮವಹಿಸಲು ಸೂಚಿಸಿದ್ದರು. ಆದರೂ ಸಮಸ್ಯೆ ಬಗೆಹರಿದಂತಿಲ್ಲ.