ಕಾಪು : ತಾಲೂಕಿನಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಕೆಲವೊಂದು ಪ್ರದೇಶಗಳು ಜಲಾವೃತಗೊಂಡಿದ್ದು ಈ ಭಾಗದಲ್ಲಿದ್ದ ಕುಟುಂಬಗಳನ್ನು ತಾಲೂಕು ಆಡಳಿತ, ಗ್ರಾಮ ಪಂಚಾಯತ್ ಗಳ ಮುತುವರ್ಜಿಯಿಂದ ಸ್ಥಳಾಂತರಗೊಳಿಸಲಾಗಿದೆ.
ಕೆಲವೆಡೆ ನೀರು ರಸ್ತೆಯಲ್ಲಿ ಹರಿದ ಪರಿಣಾಮ ಸಂಚಾರಕ್ಕೆ ತೊಡಕಾಗಿತ್ತು. ಕೆಲವೆಡೆ ರಸ್ತೆ ಸಂಚಾರ ನಿರ್ಬಂಧಿಸಲಾಗಿತ್ತು.
ಕಾಪು ತಾಲೂಕಿನ ಪಾಂಗಾಳ, ಉಳಿಯಾರಗೋಳಿ, ಮಲ್ಲಾರು, ಎಲ್ಲೂರು, ನಂದಿಕೂರು, ಪಾದೆಬೆಟ್ಟು, ಮಟ್ಟು, ತೆಂಕ, ಮಜೂರು, ಮೂಡಬೆಟ್ಟು, ಏಣಗುಡ್ಡೆ, ಬೆಳಪು, 92 ಹೇರೂರು, ನಡ್ಸಾಲು, ಬೆಳ್ಳೆ, ಕುರ್ಕಾಲು ಗ್ರಾಮಗಳ 64 ಕುಟುಂಬಗಳ ಒಟ್ಟು 258 ಸದಸ್ಯರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
ಈ ಸಂದರ್ಭ ಕಾಪು ತಹಶೀಲ್ದಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯತ್ ಆಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಗೃಹ ರಕ್ಷಕ ದಳ ವಿಪತ್ತು ನಿರ್ವಹಣಾ ತಂಡ ಮತ್ತು ಕರಾವಳಿ ಪಡೆಯ ಸದಸ್ಯರುಗಳು, ಸ್ಥಳೀಯರು ಸಹಕರಿಸಿದ್ದರು.