ಜುಲೈ 9 (ನಾಳೆ) : ಕಾಪು ಹೊಸಮಾರಿಗುಡಿ ದೇವಸ್ಥಾನ - ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆಗೊಳಿಸುವ ಮಹಾಅಭಿಯಾನಕ್ಕೆ ಚಾಲನೆ
Posted On:
08-07-2023 04:28PM
ಕಾಪು : ಇಲ್ಲಿನ ಹೊಸಮಾರಿಗುಡಿ ದೇವಸ್ಥಾನವು ಸಂಪೂರ್ಣ ಇಳಕಲ್ ಕೆಂಪು ಶಿಲೆಯೊಂದಿಗೆ ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು ಪ್ರಥಮ ಹಂತದ ಕಾಮಗಾರಿಯು ಭರದಿಂದ ಸಾಗುತ್ತಿದ್ದು ಜೀರ್ಣೋದ್ಧಾರದ ಅಂಗವಾಗಿ 9 ಶಿಲಾಸೇವೆ ಸಮರ್ಪಿಸಿ ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸದಸ್ಯರನ್ನು ಸೇರ್ಪಡೆ ಗೊಳಿಸುವ ಮಹಾಅಭಿಯಾನಕ್ಕೆ ಜುಲೈ 9 ರಂದು ಅಮ್ಮನ ಸನ್ನಿಧಿಯಲ್ಲಿ ಚಾಲನೆ ನೀಡಲಾಗುವುದು.
ಮಹಾಅಭಿಯಾನದ ಮೂಲಕ 9 ಶಿಲಾ ಸೇವೆ ಸಮರ್ಪಿಸುವ ಕನಿಷ್ಟ ಒಂಭತ್ತು ಸದಸ್ಯರನ್ನು ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆಗೊಳಿಸುವ ಸಮಿತಿ ಸದಸ್ಯರು ದೀಕ್ಷಾ ದೀಪ ಪ್ರಜ್ವಲನೆ ನಡೆಸಿ ಸಂಕಲ್ಪ ಸ್ವೀಕರಿಸಲಿದ್ದಾರೆ.
ಪ್ರಪಂಚದಾದ್ಯಂತ 99,999 ಸದಸ್ಯರನ್ನು ಸೇರ್ಪಡೆಗೊಳಿಸಿ 9,99,999 ಶಿಲಾ ಸೇವೆ ಸಮರ್ಪಿಸುವ ಗುರಿಯೊಂದಿಗೆ ಅಮ್ಮನ ಸಂಪೂರ್ಣ ಶಿಲಾಮಯ ಮಾರಿಗುಡಿ ನಿರ್ಮಾಣದ ಗುರಿ ಹೊಂದಲಾಗಿದೆ. ಈ ಅಭಿಯಾನವು ಜುಲೈ 9 ರಿಂದ ಅಕ್ಟೋಬರ್ 15ರವರೆಗೆ ಅಂದರೆ 99 ದಿನಗಳವರೆಗೆ ನಡೆಯಲಿದೆ.
ಪೂರ್ವಭಾವಿಯಾಗಿ ಮುಂಬಯಿ - ಪುಣೆ - ಬೆಂಗಳೂರು ಹಾಗೂ 18 ದೇಶಗಳಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ಮೂಲಕವಾಗಿ ಪ್ರಪಂಚದಾದ್ಯಂತ ಇರುವ ಅಮ್ಮನ ಭಕ್ತರು 9 ಶಿಲಾಸೇವೆಯ ಬಾಬ್ತು 9,999 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಶಿಲೆಯನ್ನು ನೀಡಿ, ಶಿಲಾಪುಷ್ಪವನ್ನು ಅರ್ಪಿಸಿ, “ಕಾಪುವಿನ ಅಮ್ಮನ ಮಕ್ಕಳು” ತಂಡಕ್ಕೆ ಸೇರ್ಪಡೆಗೊಳಿಸುವ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ.
ಕಳೆದ ಜೂನ್ 12 ರಂದು ಕಾಪು ಹೊಸಮಾರಿಗುಡಿಯ ಮಾರಿಯಮ್ಮ ದೇವಿಯ ಸಾನಿಧ್ಯ ಚಲನೆ ಮತ್ತು ತಾತ್ಕಾಲಿಕ ಗುಡಿಯಲ್ಲಿ ಸಾನಿಧ್ಯ ಪ್ರತಿಷ್ಟೆ ಕಾರ್ಯಕ್ರಮ ನಡೆದಿರುತ್ತದೆ. ಮುಂದಿನ ನವರಾತ್ರಿ ಸಂದರ್ಭ ಅಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಾಗುವುದು.
ಮಾರ್ಚ್ ನಲ್ಲಿ ನಡೆಯುವ ಸುಗ್ಗಿ ಮಾರಿಪೂಜೆಗೆ ಮೊದಲು ಮಾರಿಯಮ್ಮನ ಗುಡಿ ಸಮರ್ಪಣೆಗೆ ಯೋಜನೆ ರೂಪಿಸಲಾಗಿದೆ.
ಕಾಪು ಶಾಸಕ, ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಅವರು ಎಲ್ಲ ಸಮಾಜದ ಗಣ್ಯರೊಂದಿಗೆ ದೀಪ ಪ್ರಜ್ವಲನೆಗೊಳಿಸಿ, ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆ ಮಹಾಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಸಮಿತಿಯ ಗೌರವಾಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಹಾಗೂ ದೀಕ್ಷೆ ಸ್ವೀಕರಿಸಲಿರುವ ಸಂಯೋಜಕರು ಪಾಲ್ಗೊಳ್ಳಲಿದ್ದಾರೆ ಎಂದು ಕಾಪು ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ ಹಾಗೂ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.