ಎಲ್ಲೂರು : ಮೂವತ್ತೈದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ಲಕ್ಷದ ಹತ್ತುಸಾವಿರ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ
Posted On:
19-07-2023 07:27PM
ಎಲ್ಲೂರು : ಅಭಿವೃದ್ಧಿಯ ಸಾಧನೆಯಲ್ಲಿ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದುದನ್ನು ಆಧಾರವಾಗಿಟ್ಟುಕೊಂಡು ಯಥಾಸಾಧ್ಯ ಪ್ರವೃತ್ತರಾಗಿ ಮಹತ್ತನ್ನು ಸಾಧಿಸಿರಿ ಎಂದು ಬೆಂಗಳೂರಿನ 'ಟೆಕ್ ಸೆಲ್ 'ಅಟೋಮೇಶನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಆರ್.ಹರೀಶ ರಾವ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಸ್ಥಳೀಯ ಶ್ರೀ ಪಂಚಾಕ್ಷರಿ ಯಕ್ಷಗಾನ ಮಂಡಳಿಯು ಬೆಂಗಳೂರಿನ "ಟೆಕ್ ಸೆಲ್" ಅಟೋಮೇಶನ್ ಪ್ರೈ.ಲಿ.ಇವರ ಸಹಯೋಗದಲ್ಲಿ ಎಲ್ಲೂರು ಪರಿಸರದ ಹತ್ತು ಕನ್ನಡ ಮಾಧ್ಯಮ ಶಾಲೆಗಳ ಏಳನೇ ತರಗತಿ,ಹತ್ತನೇ ತರಗತಿ ಹಾಗೂ ಪದವಿ ಪೂರ್ವ ತರಗತಿಗಳ ಮೂವತ್ತೈದು ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ಒಂದು ಲಕ್ಷದ ಹತ್ತುಸಾವಿರ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡುತ್ತಿದ್ದರು.
ಬೆಳಪು ಕಾನ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ, ಅವರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೂಪಾ ಹರೀಶ ರಾವ್ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಪಂಚಾಕ್ಷರೀ ಯಕ್ಷಗಾನ ಮಂಡಳಿಯ ಅಧ್ಯಕ್ಷ ಕೆ.ಶ್ರೀನಿವಾಸ ಉಪಾಧ್ಯಾಯ ವಹಿಸಿದ್ದರು.ಕುಂಜೂರು ದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಮನೆ ದೇವರಾಜ ರಾವ್,ಕಾನ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಪಟೇಲ್ ಪ್ರಕಾಶ ರಾವ್,ಬೆಳಪು ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷ ನಡಿಮನೆ ವಾದಿರಾಜ ರಾವ್ ಅವರು ಭಾಗವಹಿಸಿದ್ದರು.
ರಾಘವೇಂದ್ರ ರಾವ್ ಎಲ್ಲೂರು ಸ್ವಾಗತಿಸಿದರು. ಕೆ.ಎಲ್.ಕುಂಡಂತಾಯ
ಪ್ರಸ್ತಾವಿಸಿದರು. ಎಲ್ಲೂರು ಗಣೇಶ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಅನಂತ ಪದ್ಮನಾಭ ಜೆನ್ನಿ ವಂದಿಸಿದರು.
ಈ ಸಂದರ್ಭದಲ್ಲಿ ಎಲ್ಲೂರು ಶ್ರೀ ವಿಶ್ವೇಶ್ವರ ದೇವಳದ ಅರ್ಚಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವೇ.ಮೂ .ಗೋಪಾಲ ಭಟ್, ವೇ.ಮೂ.ಶ್ರೀ ಕೃಷ್ಣಮೂರ್ತಿ ಭಟ್, ಹಾಗೂ ವೇ.ಮೂ.ಸುಬ್ರಾಯ ಭಟ್ ಅವರನ್ನು ಹಾಗೂ ಶ್ರೀ ಬಡಿಕೇರಿ ಹರಿದಾಸ ರಾವ್ ಅವರನ್ನು ಅವರವರ ಮನೆಗೆ ಹೋಗಿ ಸಮ್ಮಾನಿಸಲಾಯಿತು.