ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಹಡೀಲು ಭೂಮಿಗೆ ಕೃಷಿಯ ಜೀವಂತಿಕೆ ನೀಡಿದ ದಾರು ಶಿಲ್ಪಿ ವೈ. ಪ್ರಶಾಂತ್ ಆಚಾರ್ಯ

Posted On: 20-07-2023 05:04PM

ಕಾಪು : ಸ್ವಂತ ಕೃಷಿ ಭೂಮಿಯನ್ನು ಹೊಂದಿಲ್ಲದ ಕಾಪು ತಾಲೂಕಿನ ಎಲ್ಲೂರು ಗ್ರಾಮದ ದಾರು ಶಿಲ್ಪಿ ವೈ. ಪ್ರಶಾಂತ್ ಆಚಾರ್ಯ ಹಡೀಲು ಗದ್ದೆಯನ್ನು ಎರವಲು ಪಡೆದುಕೊಂಡು ಭತ್ತದ ಬೇಸಾಯವನ್ನು ಮಾಡುವ ಮೂಲಕ ಕೃಷಿ ಸಂಪತ್ತಿನ ಒಡೆಯನಾಗಿ ಬೆಳೆಯುತ್ತಿದ್ದಾರೆ.

ಯುವಕರು ಕೃಷಿಯಿಂದ ವಿಮುಕ್ತರಾಗುತ್ತಿರುವ ಈ ಕಾಲ ಘಟ್ಟದಲ್ಲಿ ಈ ಯುವಕನ ಕೃಷಿ ಕಾಯಕ ನಿಜಕ್ಕೂ ಮಾದರಿಯಾಗಿದ್ದು, ಈ ಬಾರಿ ಸುಮಾರು 4 ಎಕರೆಗೂ ಮಿಕ್ಕಿದ ಗದ್ದೆಯಲ್ಲಿ ಭತ್ತದ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಎಂಒ4 ಭತ್ತದ ತಳಿ ಬಳಸುತ್ತಿದ್ದು ಸ್ಥಳೀಯ 26 ಮಹಿಳಾ ಕೃಷಿ ಕೂಲಿ ಕಾರ್ಮಿಕರಿಂದ ನಾಟಿ ಕಾರ್ಯ ನಡೆದಿದೆ. ತಾನು ಎರವಲು ಪಡೆದ ಗದ್ದೆಯಲ್ಲಿ ಎಂಒ 4 ಭತ್ತದ ತಳಿಯನ್ನು ಬಿತ್ತನೆ ಮಾಡಿ ಸ್ವತಃ ಭತ್ತದ ಸಸಿಯನ್ನು ಸಿದ್ಧಪಡಿಸಿಕೊಂಡು ಇದೀಗ 22 ದಿನಗಳ ನೇಜಿಯನ್ನು ನಾಟಿ ಮಾಡಲು ತೊಡಗಿಕೊಂಡಿರುವ ಯುವ ಕೃಷಿಕ ಪ್ರಶಾಂತ್ ಅವರು ಪಡುಬಿದ್ರಿಯ ಕಂಚಿನಡ್ಕ, ಎಲ್ಲೂರಿನ ಪೆಜತ್ತಕಟ್ಟೆ, ಬಂಡಸಾಲೆ, ಮುದರಂಗಡಿಯ ವಿದ್ಯಾನಗರ ಪ್ರದೇಶದ ಮಹಿಳೆಯರ ನಾಲ್ಕು ತಂಡಗಳನ್ನು ಬಳಸಿಕೊಂಡು ಒಟ್ಟು 26 ಕೃಷಿ ಕೂಲಿ ಮಹಿಳಾ ಕಾರ್ಮಿಕರು ನೇಜಿ ತೆಗೆದು ನಾಟಿ ಮಾಡುವ ಕೆಲಸ ಕಾರ್ಯದಲ್ಲಿ ಬಳಸಿಕೊಂಡಿರುತ್ತಾರೆ.

ದಿನವಹಿ ಊಟ ಚಹಾ ತಿಂಡಿ ವಾಹನದ ಸೌಕರ್ಯದೊಂದಿಗೆ ರೂ. 400 ಕೂಲಿಯನ್ನು ಪ್ರತಿಯೋರ್ವ ಮಹಿಳಾ ಕೃಷಿ ಕಾರ್ಮಿಕರಿಗೆ ನೀಡುವ ಮೂಲಕ ಎರಡು ದಿನಗಳಲ್ಲಿ 4 ಎಕರೆ ಗದ್ದೆಯ ನಾಟಿಯನ್ನು ಪೂರೈಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕೃಷಿ ಚಟುವಟಿಕೆಗೆ ನೆರೆ ಹೊರೆಯ ಹಿರಿಯ ನುರಿತ ಕೃಷಿಕರಾದ ಹರೀಶ್ ಪೂಜಾರಿ, ಶಂಕರ್ ಮತ್ತಿತರರ ಮಾರ್ಗದರ್ಶನದೊಂದಿಗೆ ಸಹೋದರರು ಸಹಿತ ಮನೆಮಂದಿಯೂ ಕೈ ಜೋಡಿಸುವ ಮೂಲಕ ಯಶಸ್ವಿ ಕೃಷಿಕನಾಗಿ ಬೆಳೆದು ಬಂದಿದ್ದಾರೆ. ಕಳೆದ 7 ವರ್ಷಗಳ ಹಿಂದೆ ಕೃಷಿಯ ಬೆನ್ನತ್ತಿದ್ದ ಈ ದಾರು ಶಿಲ್ಪಿ ಪ್ರಶಾಂತ್ ಆಚಾರ್ಯ ಅವರು ಈ ಬಾರಿ ಟ್ರಾಕ್ಟರ್ ಮೂಲಕ ಉಳುಮೆ ನಡೆಸಿದ್ದು, ಸುಮಾರು ರೂಪಾಯಿ ಐವತ್ತು ಸಾವಿರದಷ್ಟು ಖಚರ್ುವೆಚ್ಚ ಭರಿಸಿದ್ದು, ದುಪ್ಪಟ್ಟು ಲಾಭದ ನಿರೀಕ್ಷೆಯನ್ನು ಹೊಂದಿರುತ್ತಾರೆ. ಮಳೆಯನ್ನೇ ಅವಲಂಭಿಸಿ ಕೃಷಿ ಚಟುವಟಿಕೆ ನಡೆಸಲಾಗುತ್ತಿದ್ದು, ಮಳೆ ನೀರು ಕಡಿಮೆಯಾದಲ್ಲಿ ಸಮೀಪದಲ್ಲಿ ಹರಿಯುವ ನೀರಿನ ತೋಡಿನಿಂದ ನೀರನ್ನು ಬಳಸುವುದಾಗಿ ಮಾಹಿತಿಯನ್ನು ಹೊಸದಿಗಂತಕ್ಕೆ ನೀಡಿದ್ದು, ಕೃಷಿಗೆ ಪ್ರೋತ್ಸಾಹ ನೀಡುತ್ತಿರುವ ಗದ್ದೆಯ ಮಾಲಕರು, ಹಿರಿಯ ಕೃಷಿಕರು, ಮನೆಮಂದಿಯ ಸಹಕಾರವನ್ನು ಸ್ಮರಿಸುತ್ತಿದ್ದು, ಲಭ್ಯ ಅವಕಾಶದಡಿ ಮತ್ತಷ್ಟು ಹಡೀಲು ಭೂಮಿಯನ್ನು ಕೃಷಿಗೆ ಬಳಸಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.