ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಎರ್ಮಾಳು : 1694ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ

Posted On: 21-07-2023 06:46PM

ಎರ್ಮಾಳು : ಇಲ್ಲಿನ ಜನಾರ್ದನ ಜನ ಕಲ್ಯಾಣ ಸೇವಾ ಸಮಿತಿ ಸಭಾಂಗಣದಲ್ಲಿ ಮುಂದಿನ ಶುಕ್ರವಾರದವರೆಗೆ ನಡೆಯಲಿರುವ 1694ನೇ ಮದ್ಯವರ್ಜನ ಶಿಬಿರವನ್ನು ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ ಎರ್ಮಾಳು ಬೀಡು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ|ಡಿ. ವೀರೇಂದ್ರ ಹೆಗ್ಗಡೆ ಅವರು ಮದ್ಯವರ್ಜನ ಶಿಬಿರ ಆಯೋಜಿಸುವಲ್ಲಿ ಹೆಚ್ಚು ಶ್ರಮ ತೆಗೆದುಕೊಂಡಿದ್ದ ಯೋಜನೆಯಾಗಿದೆ. ಮದ್ಯ ವ್ಯಸನಿಗಳಿಂದ ಕುಟುಂಬವು ವಿನಾಶದಂಚಿಗೆ ವಾಲುತ್ತದೆ. ಮದ್ಯದ ಚಟವನ್ನು ಬಿಡುವ ಉತ್ಕಟ ಇಚ್ಛಾ ಶಕ್ತಿಯನ್ನು ವ್ಯಸನಿಯು ತಳೆದಲ್ಲಿ ತನ್ನ ಹಾಗೂ ಮನೆ ಮಂದಿಯಿಂದ ಪ್ರೀತ್ಯಾದರದ ಜೊತೆಗೆ ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

1694ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಉಚ್ಚಿಲ ಇದರ ಅಧ್ಯಕ್ಷ ಕೇಶವ ಮೊಯ್ಲಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಉಡುಪಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಯೋಜನೆಯ ಬಿ.ಸಿ. ಟ್ರಸ್ಟಿನ ಉಡುಪಿ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ತೆಂಕ ಗ್ರಾ.ಪಂ. ಅದ್ಯಕ್ಷೆ ಕಸ್ತೂರಿ ಪ್ರವೀಣ್, ರಾಜ್ಯ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ನವೀನ್ ಅಮೀನ್, ಕಾಪು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸತ್ಯಾನಂದ ನಾಯಕ್, ಶಂಕರ ಕುಂದರ್ ಸೂಡ ವೇದಿಕೆಯಲ್ಲಿದ್ದರು.

ಅಮಣಿ ಪ್ರಾರ್ಥಿಸಿದರು. ಶಿಬಿರದ ವ್ಯವಸ್ಥಾಪನಾ ಸಮಿತಿ ಕೋಶಾಧಿಕಾರಿ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಸ್ವಾಗತಿಸಿದರು. ಯೋಜನೆಯ ಉಚ್ಚಿಲ ವಲಯ ಮೇಲ್ವಿಚಾರಕಿ ವಿಜಯಾ ವಂದಿಸಿದರು. ಕಾಪು ತಾಲೂಕು ಯೋಜನಾಧಿಕಾರಿ ಜಯಂತಿ ನಿರೂಪಿಸಿದರು. 1694ನೇ ಮದ್ಯವರ್ಜನ ಶಿಬಿರದಲ್ಲಿ 60 ಕ್ಕೂ ಅಧಿಕ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.