ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜುಲೈ 29 : ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ

Posted On: 26-07-2023 07:10PM

ಕಾಪು : ಭಾರತದ ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವ ಮಣಿಪುರ ರಾಜ್ಯದಲ್ಲಿ ಎರಡು ಪಂಗಡಗಳ ನಡುವೆ ನಡೆಯುತ್ತಿರುವ ಜನಾಂಗೀಯ ಘರ್ಷಣೆಯು ತಾರಕಕ್ಕೇರಿ, ತೀವ್ರ ಹಿಂಸಾಚಾರಕ್ಕೆ ತಿರುಗಿ, ಅಲ್ಲಿ ನಡೆಯುತ್ತಿರುವ ಅಮಾನವೀಯ ಘಟನೆಗಳು, ಅದರಲ್ಲಿಯೂ ವಿಶೇಷವಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹಿಂಸಾಕೃತ್ಯಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಮಸಿ ಬಳಿದಂತಾಗಿ, ಭಾರತೀಯರೆಲ್ಲರೂ ನಾಚಿಕೆಯಿಂದ ತಲೆತಗ್ಗಿಸುವಂತಾಗಿರುವುದು ವಿಪರ್ಯಾಸ. ಇಬ್ಬರು ಮಹಿಳೆಯರನ್ನು ಬಲಾತ್ಕಾರವಾಗಿ ಕೊಂಡೊಯ್ದು, ಸಾಮೂಹಿಕ ಅತ್ಯಾಚಾರ ನಡೆಸಿ, ವಿವಸ್ತ್ರಗೊಳಿಸಿ ಬಹಿರಂಗವಾಗಿ ಬೀದಿಯಲ್ಲಿ ಮೆರವಣಿಗೆ ನಡೆಸಿರುವ ವಿಡಿಯೋ ತುಣುಕು ಘಟನೆ ನಡೆದ ಬಹಳ ದಿನಗಳ ನಂತರ ಬೆಳಕಿಗೆ ಬಂದಿದೆ. ಆದರೆ ಆ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿ.ಜೆ.ಪಿ ಸರ್ಕಾರ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ, "ಬೇಟಿ ಪಢಾವೋ- ಬೇಟಿ ಬಚಾವೋ" ಎಂಬ ಡೋಂಗಿ ಘೋಷಣೆಯ ಬಿ.ಜೆ.ಪಿ ನೇತೃತ್ವದ ಸರ್ಕಾರದ ಬೇಜವಾಬ್ದಾರಿ ಧೋರಣೆ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆ ತೀರಾ ಖಂಡನೀಯ.

ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಈ ಘಟನೆಯಿಂದಾಗಿ ದೇಶದ ಮಾನ ಹರಾಜಾಗುತ್ತಿದ್ದರೂ ಮೂಕ ಪ್ರೇಕ್ಷಕನಾಗಿ ಕುಳಿತಿರುವ ಸರ್ಕಾರದ ಬೇಜವಾಬ್ದಾರಿ ನಡೆಯನ್ನು, ತೀವ್ರ ತರಾಟೆಗೆ ತೆಗೆದುಕೊಂಡು, ಸರ್ಕಾರಕ್ಕೆ ತಪರಾಕಿ ಹಾಕಿದ ನಂತರ, ಚುನಾವಣಾ ಸಭೆಯಲ್ಲಿ, ವಿದೇಶ ಪ್ರವಾಸದಲ್ಲಿ ನಿರತರಾಗಿದ್ದ ಭಾರತದ ಪ್ರಧಾನಿಯು 78 ದಿವಸಗಳ ನಂತರ ಮೌನ ಮುರಿದಿರುವುದು, 'ಕೋಟೆ ದೋಚಿದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ' ಆಗಿರುವುದು ಮಹಿಳಾ ವಿರೋಧಿ ನಡೆಯ ಜೀವಂತ ಉದಾಹರಣೆ. ಸರ್ಕಾರದ ಈ ಅಮಾನವೀಯ ನಡೆಯನ್ನು ಖಂಡಿಸಿ, ರಾಕ್ಷಸೀ ಪ್ರವೃತ್ತಿ ಮೆರೆದು ಮಹಿಳೆಯರ, ಹಿರಿಯ ನಾಗರಿಕರ ಹಾಗೂ ಮಕ್ಕಳ ಮೇಲೆ ಮೃಗೀಯ ರೀತಿಯಲ್ಲಿ ದೌರ್ಜನ್ಯವೆಸಗಿದ ಚಾಂಡಾಲರ ಮೇಲೆ ಕಠಿಣವಾದ ಶಿಕ್ಷೆ ವಿಧಿಸುವಂತೆ ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಿ, ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜುಲೈ 29, ಶನಿವಾರದಂದು ಪೂರ್ವಾಹ್ನ ಗಂಟೆ 10ಕ್ಕೆ ಕಾಪು ಪೇಟೆಯಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿದೆ.

ಕಾಪು ಕಾಂಗ್ರೆಸ್ ಕಚೇರಿ ರಾಜೀವ್ ಭವನದಿಂದ ಕಾಲ್ನಡಿಗೆ ಮೂಲಕ ಕಾಪು ಪೇಟೆಯವರೆಗೆ ಮೆರವಣಿಗೆಯಲ್ಲಿ ಸಾಗಿ, ಕಾಪು ಪೇಟೆಯಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಮತ್ತು ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.