ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ 2022-23 ನೇ ವಾರ್ಷಿಕ ಮಹಾಸಭೆ ; ಶೇ. 25 ಡಿವಿಡೆಂಡ್ ಘೋಷಣೆ
Posted On:
27-07-2023 05:12PM
ಪಡುಬಿದ್ರಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸೊಸೈಟಿಯ 2022-23 ನೇ ವಾರ್ಷಿಕ ಮಹಾಸಭೆಯು ಜುಲೈ 26 ರಂದು ವೈ ಲಕ್ಷ್ಮಣ್ ಸಭಾಂಗಣ ಸಹಕಾರ ಸಂಗಮ, ಪ್ರಧಾನ ಕಚೇರಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇಲ್ಲಿ ಜರಗಿತು.
ಸೊಸೈಟಿಯು 2022-23 ನೇ ಸಾಲಿನಲ್ಲಿ ಸಾಧಿಸಿರುವ ವಾರ್ಷಿಕ ವಹಿವಾಟಿನ ಬಗ್ಗೆ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ತಿಳಿಸಿದರು. ಈ ಸಂದರ್ಭ ಶೇ. 25 ಡಿವಿಡೆಂಡ್ ಅನ್ನು ಘೋಷಿಸಿದರು. ಸೊಸೈಟಿಯು 96.03% ಸಾಲ ವಸೂಲಾತಿಯೊಂದಿಗೆ ಸಮಗ್ರ ಅಭಿವೃದ್ಧಿಗಾಗಿ ಉಡುಪಿ ವಲಯದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. 100 % ಸಾಲ ವಸೂಲಾತಿಯನ್ನು ಸಾಧಿಸುವಲ್ಲಿ ಸದಸ್ಯರ ಸಹಕಾರವನ್ನು ಕೋರಲಾಯಿತು. 2022-23 ನೇ ಸಾಲಿನಲ್ಲಿ ನಡೆಸಿರುವ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಸದಸ್ಯರಿಗೆ ವಿವರ ನೀಡಿದರು.
ಸಹಕಾರ ಸಪ್ತಾಹದ ಅಂಗವಾಗಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಮಾರು 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಕೊಟ್ಟ 4 ಶವಗಳನ್ನು ಇಡುವ ಶೀತಲೀಕೃತ ಶವಗಾರ, ಪಡುಬಿದ್ರಿ ಆರಕ್ಷಕರ ಠಾಣೆಗೆ ಸಂಚಾರ ನಿರ್ವಹಣೆಗೆ ಅನುಕೂಲವಾಗುವಂತೆ ಧ್ವನಿವರ್ಧಕ ಹಾಗೂ ಸಂಚಾರ ನಿರ್ವಹಣಾ ಬೂತ್ ನೀಡಿರುವ ಬಗ್ಗೆ ತಿಳಿಸಿದರು. ಸುಮಾರು 1.5 ಎಕ್ರೆಗಿಂತ ಹೆಚ್ಚಿನ ಜಾಗದಲ್ಲಿ ಭತ್ತದ ಕೃಷಿ ಮಾಡುತ್ತಿರುವ 180 ಕ್ಕೂ ಹೆಚ್ಚು ರೈತರಿಗೆ ರೂ. 3000/- ದಂತೆ ಕೃಷಿ ಸಹಾಯಧನ ವಿತರಿಸಿರುವ ಬಗ್ಗೆ ತಿಳಿಸಿದರು. ಮುಂದಿನ ದಿನಗಳಲ್ಲಿ ತೋಟಗಾರಿಕೆ ಕೃಷಿಯನ್ನು ನಿರ್ವಹಿಸುತ್ತಿರುವವರಿಗೂ ಕೂಡ ವಿಶೇಷ ಯೋಜನೆಯನ್ನು ರೂಪಿಸುವುದಾಗಿ ತಿಳಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಸಾಯನಿಕ ಗೊಬ್ಬರ ಖರೀದಿಸುವ ರೈತ ಸದಸ್ಯರಿಗೆ 15% ರಿಯಾಯಿತಿಯನ್ನು ನೀಡುವುದಾಗಿ ಘೋಷಿಸಿದರು. ಪಲಿಮಾರು ಹಾಗೂ ಹೆಜಮಾಡಿ ಶಾಖಾ ನವೀಕರಣ ಮಾಡುತ್ತಿದ್ದು, 5, 6 ತಿಂಗಳುಗಳಲ್ಲಿ ಕಾಮಗಾರಿಯು ಮುಗಿಯಲಿದ್ದು ಹವಾನಿಯಂತ್ರಿತ ಸುಸಜ್ಜಿತ ಹವಾನಿಯಂತ್ರಿತ ಶಾಖೆಯನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಸೊಸೈಟಿಯು ಲಾಭದಾಯಕ ಕೃಷಿಯ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಿದ್ದು, ಈ ಮಾಹಿತಿಯಿಂದ ಕೃಷಿಯಲ್ಲಿ ಉತ್ತಮ ಸಾಧನೆಯನ್ನು ಪಡೆಯುವ 5 ಮಂದಿಗೆ ವಿಶೇಷ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು. ಈ ಬಗ್ಗೆ ಆಸಕ್ತರು ಹೆಸರು ನೋಂದಾಯಿಸಬೇಕಾಗಿ ವಿನಂತಿಸಿದರು. ಸೊಸೈಟಿಯು ನೀಡುತ್ತಿರುವ ವಿವಿಧ ಸೇವೆಗಳ ಬಗ್ಗೆ ಸದಸ್ಯರಿಗೆ ತಿಳಿಸಿದರು. ಪಡುಬಿದ್ರಿಯ ಸಿಟಿ ಶಾಖೆಯಲ್ಲಿ ಕೃಷಿ ಉಪಕರಣದೊಂದಿಗೆ ಕೃಷಿ ಬಳಕೆಗೆ ಅಗತ್ಯವಿರುವ ಪೈಪ್ ಹಾಗೂ ಫಿಟ್ಟಿಂಗ್ಸ್ ಗಳನ್ನು ಕೂಡ ಮಾರಾಟ ಮಾಡಲಾಗುತ್ತಿದ್ದು, ಇದರೊಂದಿಗೆ ಚಿನ್ನಾಭರಣ ಶುದ್ಧತಾ ಪರಿಶೀಲನಾ ಸೇವೆಯನ್ನು ಕೂಡ ಸಿಟಿ ಶಾಖೆಯಲ್ಲಿ ನೀಡಲಾಗುವುದು ಎಂದು ತಿಳಿಸಿದರು. ಪಲಿಮಾರಿನಲ್ಲಿ ಹಾಗೂ ಹೆಜಮಾಡಿಯಲ್ಲಿ ಮುಂದಿನ ದಿನಗಳಲ್ಲಿ ಸುಸಜ್ಜಿತ ಕೃಷಿ ಉಪಕರಣ ಮಾರಾಟ ಮಳಿಗೆಯನ್ನು ಪ್ರಾರಂಭಿಸಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಪೂರೈಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಉಪಾಧ್ಯಕ್ಷರಾದ ಗುರುರಾಜ ಪೂಜಾರಿ, ನಿರ್ದೇಶಕರಾದ ರಸೂಲ್ ವೈ. ಜಿ, ಗಿರೀಶ್ ಪಲಿಮಾರು, ಶಿವರಾಮ ಎನ್. ಶೆಟ್ಟಿ, ವಾಸುದೇವ ದೇವಾಡಿಗ, ಯಶವಂತ ಪಿ.ಬಿ, ರಾಜಾರಾಮ್ ರಾವ್, ಮಾಧವ ಆಚಾರ್ಯ, ಸ್ಟೇನಿ ಕ್ವಾಡ್ರಸ್, ಸುಚರಿತ ಎಲ್. ಅಮೀನ್, ಕುಸುಮ ಎಂ. ಕರ್ಕೇರ, ಕಾಂಚನ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಬಾಲಕೃಷ್ಣರಾವ್, ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಷ್ಮಿತ ಪಿ. ಹೆಚ್ ಉಪಸ್ಥಿತರಿದ್ದರು.
ಸೊಸೈಟಿಯ ನಿರ್ದೇಶಕಿ ಸುಚರಿತಾ ಎಲ್ ಅಮೀನ್ ಪ್ರಾರ್ಥಿಸಿದರು. ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಸ್ವಾಗತಿಸಿ, ವರದಿ ವಾಚಿಸಿದರು. ನಿರ್ದೇಶಕ ಗಿರಿಶ್ ಪಲಿಮಾರು ವಂದಿಸಿದರು.