ಕಟಪಾಡಿ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಹಾಗೂ ಉಡುಪಿ ವಲಯದ ಅತಿಥ್ಯದಲ್ಲಿ 14 ವಲಯಗಳ ಸದಸ್ಯರ ಜಿಲ್ಲಾಮಟ್ಟದ ಕೆಸರು ಗದ್ದೆ ಕ್ರೀಡಾಕೂಟವು ಕಟಪಾಡಿ ಬೀಡು ಕಂಬಳ ಗದ್ದೆಯ ಸಮೀಪದಲ್ಲಿ ಭಾನುವಾರ ನಡೆಯಿತು.
ಕಟಪಾಡಿಬೀಡು ಗೋವಿಂದ ರಾಜ್ ಬಳ್ಳಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣ ಭಾಗವಹಿಸಿದ್ದರು.
ಅವರು ಈ ಸಂದರ್ಭ ಮಾತನಾಡಿ, ಜಗತ್ತಿನಲ್ಲಿ ಛಾಯಾಗ್ರಾಹಕರನ್ನು ಮೀರಿಸುವ ವ್ಯಕ್ತಿ ಯಾರಿಲ್ಲ. ದೇಶದಲ್ಲಿ ಅತೀ ಹೆಚ್ಚು ಭವಿಷ್ಯ ಇರುವ ವೃತ್ತಿನಿರತರು ಛಾಯಾಗ್ರಾಹಕರಾಗಿದ್ದಾರೆ. ಪ್ರಸ್ತುತ ಸರಕಾರವನ್ನು ಗುರುತಿಸಿ, ಎಚ್ಚರಿಸುವಂತಹ ಕೆಲಸ ಮಾಡುತ್ತಿರುವ ಛಾಯಾಗ್ರಾಹಕರನ್ನು ಸರಕಾರ ಗುರುತಿಸುತ್ತಿಲ್ಲ ಎಂಬ ಕೂಗು ಕೇಳುತ್ತಿದೆ. ಛಾಯಾಗ್ರಾಹಕರಿಗೂ ಸೂಕ್ತ ಸ್ಥಾನಮಾನ ದೊರೆಯಬೇಕಿದೆ ಎಂದರು.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಡಿಜಿಟಲ್ ಕ್ರಾಂತಿಯಿಂದಾಗಿ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಛಾಯಾಗ್ರಾಹಕರು ನಮ್ಮ ನೆನಪುಗಳನ್ನು ಜೀವಂತವಾಗಿಸುವ ವ್ಯಕ್ತಿಗಳಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ಧಾವಂತದಿಂದಾಗಿ ಛಾಯಾಗ್ರಾಹಕರು ಪ್ರತಿನಿತ್ಯ ಅಪ್ ಡೇಟ್ ಆಗಬೇಕಿದೆ ಎಂದರು.
ಸಭಾಧ್ಯಕ್ಷತೆಯನ್ನು ಎಸ್ ಕೆ ಪಿಎ ಉಡುಪಿ ಜಿಲ್ಲಾಧ್ಯಕ್ಷ ಆನಂದ ಎನ್ ಕುಂಪಲ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಉಡುಪಿಯ ಸಮಾಜಸೇವಕ ವಿಶ್ವನಾಥ ಶೆಣೈ , ಅಶ್ವಿನ್ ಬಲ್ಲಾಳ್, ಶ್ರೀನಿವಾಸ್ ಬಲ್ಲಾಳ್ , ವಿನಯ ಬಲ್ಲಾಳ್, ಸುಭಾಸ್ ಬಲ್ಲಾಳ್, ನವೀನ್ ಬಲ್ಲಾಳ್, ಲಯನ್ಸ್ ಜಿಲ್ಲಾ ರೀಜನಲ್ ಚೇರ್ಮನ್ ವಿ. ಪ್ರಸಾದ್ ಶೆಟ್ಟಿ, ಕೆ. ವಾಸುದೇವ ರಾವ್, ನವೀನ್ ಕುದ್ರೋಳಿ, ಎಸ್ ಕೆಪಿಎ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ, ಕೋಶಾಧಿಕಾರಿ ನವೀನ್ ರೈ ಪಂಜಳ, ಎಸ್.ಕೆ.ಪಿ.ಎ ಉಡುಪಿ ವಲಯಾಧ್ಯಕ್ಷ ಜನಾರ್ಧನ ಕೊಡವೂರು, ರಾಜೇಶ್ ತೊಕ್ಕೊಟ್ಟು ಉಪಸ್ಥಿತರಿದ್ದರು.
ಎಸ್ ಕೆಪಿಎ ಉಡುಪಿ ವಲಯದ ಅಧ್ಯಕ್ಷ ಜನಾರ್ಧನ ಕೊಡವೂರು ಸ್ವಾಗತಿಸಿದರು. ರಾಘವೇಂದ್ರ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾ ಕಾರ್ಯದರ್ಶಿ ಶ್ರೀನಿವಾಸ ಐತಾಳ್ ಕಾಪು ವಂದಿಸಿದರು.