ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶಿವಕುಮಾರ್ ಮೆಂಡನ್, ಉಪಾಧ್ಯಕ್ಷರಾಗಿ ದೀಪಕ್ ಕುಮಾರ್ ಆಯ್ಕೆ

Posted On: 18-08-2023 06:47PM

ಉಚ್ಚಿಲ : ಬಡಾ ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಶಿವಕುಮಾರ್ ಮೆಂಡನ್ ಮತ್ತು ಉಪಾಧ್ಯಕ್ಷರಾಗಿ ದೀಪಕ್ ಕುಮಾರ್ ಆಯ್ಕೆಯಾಗಿದ್ದಾರೆ. 21 ಸದಸ್ಯ ಬಲದ ಬಡಾ ಗ್ರಾ.ಪಂ. ನಲ್ಲಿ 11 ಬಿಜೆಪಿ, 6 ಕಾಂಗ್ರೆಸ್, 4 ಎಸ್.ಡಿ‌.ಪಿ.ಐ ಸದಸ್ಯರಿದ್ದಾರೆ.

ಅಧ್ಯಕ್ಷ ಸ್ಥಾನವು ಸಾಮಾನ್ಯ ಪುರುಷ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಪುರುಷ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಹುದ್ದೆಗೆ ಬಿಜೆಪಿ ಬೆಂಬಲಿತರಾಗಿ ಎ. ಶಿವ ಕುಮಾರ್ ಮೆಂಡನ್ ಮತ್ತು ಕಾಂಗ್ರೆಸ್ ಬೆಂಬಲಿತರಾದ ಮಹಮ್ಮದ್ ರಫೀಕ್ ದೀವ್ ಹಾಗೂ ಉಪಾಧ್ಯಕ್ಷ ಹುದ್ದೆಗೆ ಬಿಜೆಪಿ ಬೆಂಬಲಿತ ದೀಪಕ್ ಕುಮಾರ್ ಮತ್ತು ಕಾಂಗ್ರೆಸ್ ಬೆಂಬಲಿತ ಅಬ್ದುಲ್ ಮಜೀದ್ ಸ್ಪರ್ಧಿಸಿದ್ದರು.

ಚುನಾವಣೆ ನಡೆದು ಅಂತಿಮವಾಗಿ ಬಿಜೆಪಿ ಬೆಂಬಲಿತರಾದ ಶಿವಕುಮಾರ್ ಮೆಂಡನ್ ಅವರಿಗೆ 12 ಮತ್ತು ಉಪಾಧ್ಯಕ್ಷ ದೀಪಕ್ ಕುಮಾರ್ ಅವರು 11 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಒಂದು ಮತ ಅಸಿಂಧು ಆಗಿದ್ದು, ಮತ್ತೋರ್ವ ಸದಸ್ಯೆ ಮತದಾನ ನಡೆಸಲು ತಡವಾಗಿ ಆಗಮಿಸಿ, ಮತದಾನ ಪ್ರಕ್ರಿಯೆಯಿಂದ ವಂಚಿತರಾಗಿದ್ದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಿಧೀಶ್ ಹೊಳ್ಳ ಚುನಾವಣಾಧಿಕಾರಿಯಾಗಿದ್ದು, ಪಿಡಿಒ ಸತೀಶ್ ಸಹ ಚುನಾವಣಾಧಿಕಾರಿಯಾಗಿ ಸಹಕರಿಸಿದ್ದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶಿಲ್ಪಾ ಜಿ. ಸುವರ್ಣ, ಗಂಗಾಧರ್ ಸುವರ್ಣ, ನಿಕಟಪೂರ್ವ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷೆ ಶಕುಂತಳ ಮೊದಲಾದವರು ಉಪಸ್ಥಿತರಿದ್ದರು.