ಸಹಾಯಕ್ಕೆ ಜಾತಿ, ಧರ್ಮವಿಲ್ಲ : ಐವನ್ ಡಿಸೋಜ
Posted On:
20-08-2023 05:16PM
ಮುದರಂಗಡಿ : ಜನರ ಕಷ್ಟ ಅರಿತು ಅದನ್ನು ಪರಿಹರಿಸುವ ಗುಣ ಎಲ್ಲರಿಗೂ ಬರುವುದಿಲ್ಲ. ಧರ್ಮ, ಜಾತಿ ಮುಖ್ಯವಲ್ಲ ಸಹಾಯದ ನಿರೀಕ್ಷೆಯಲ್ಲಿರುವ ಜನರಿಗೆ ಉಪಕಾರ ಮಾಡಿದಾಗ ಮಾತ್ರ ದೇವರು ಮೆಚ್ಚುವನು ಎಂದು ಮಾಜಿ ವಿಧಾನಪರಿಷತ್ ಸದಸ್ಯರು, ಕೆಪಿಸಿಸಿ ಉಪಾಧ್ಯಕ್ಷರಾದ ಐವನ್ ಡಿಸೋಜ ಹೇಳಿದರು.
ಅವರು ತಮ್ಮ ಹೆತ್ತವರಾದ ದಿವಂಗತ ಸಿಂಪ್ರಿಯನ್ ಮತ್ತು ಲಿಲ್ಲಿ ಡಿಸೋಜ ದಂಪತಿಗಳ ಸ್ಮರಣಾರ್ಥವಾಗಿ ಸಹೋದರ ಮೈಕಲ್ ರಮೇಶ್ ಡಿಸೋಜರಿಂದ ಸುಮಾರು 6 ಲಕ್ಷ ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ಮನೆಯನ್ನು ಭಾನುವಾರ ಬೆಳಿಗ್ಗೆ ವಿದ್ಯಾನಗರ ಅಂಗನವಾಡಿ ರಸ್ತೆಯ ಸುರೇಖ ಆಚಾರ್ಯ ಕುಟುಂಬಕ್ಕೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಸತಿ ಮಾನವನ ಜೀವನದ ಮುಖ್ಯ ವಿಷಯ. ಸ್ವಂತ ಮನೆ ಹಲವರ ಕನಸು. ಬೇರೆಯವರ ಕನಸು ನನಸು ಮಾಡುವವರು ವಿರಳ. ಮೈಕಲ್ ಡಿಸೋಜ ಈ ಕಾರ್ಯ ಮಾಡಿದ್ದಾರೆ. ಆದರೆ ತಂದೆ ತಾಯಿ ಹಾಕಿದ ಸಮಾಜಮುಖಿ ಚಿಂತನೆಯನ್ನು ಮುಂದುವರೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಸಂತ ಫ್ರಾನ್ಸಿಸ್ ಕ್ಸೇವಿಯರ್ ಚಚ್೯ ಧರ್ಮಗುರು ರೆ|ಫಾ| ಫೆಡ್ರಿಕ್ ಡಿಸೋಜ ಹೇಳಿದರು. ಅವರು ಮನೆ ಹಸ್ತಾಂತರದ ಬಳಿಕ ಆಶೀರ್ವಚನ ನೀಡಿದರು.
ಧನಸಹಾಯ :ಕಂಪೋರ್ಶನೇಟ್ ಫ್ರೆಂಡ್ಸ್ ಅಸೋಸಿಯೇಷನ್ ಮುದರಂಗಡಿ ವತಿಯಿಂದ ಕ್ಯಾನ್ಸರ್ ಪೀಡಿತ ವ್ಯಕ್ತಿಯೋರ್ವರಿಗೆ 25 ಸಾವಿರ ರೂಪಾಯಿ ಧನ ಸಹಾಯ ನೀಡಲಾಯಿತು. ಮೈಕಲ್ ರಮೇಶ್ ಡಿಸೋಜ ವತಿಯಿಂದ ಸುರೇಖ ಆಚಾರ್ಯರ ಪುತ್ರಿಗೆ ವಿದ್ಯಾರ್ಥಿವೇತನ ನೀಡಲಾಯಿತು.
ಈ ಸಂದರ್ಭ ಸಮಾಜ ಸೇವಕ ಸಾಯಿನಾಥ್ ಶೆಟ್ಟಿ ಅಬ್ಬೆಟ್ಟು ಗುತ್ತು ಕುತ್ಯಾರು, ಸರಕಾರಿ ಪದವಿಪೂರ್ವ ಕಾಲೇಜು ಮುಚ್ಚೂರಿನ ಪ್ರಾಂಶುಪಾಲ ರಘುನಾಥ್ ನಾಯಕ್, ಶಿರ್ವ ರೋಟರಿ ಮಾಜಿ ಅಧ್ಯಕ್ಷ ವಿಠ್ಠಲ್ ನಾಯಕ್, ಉಡುಪಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಅನಿತಾ ಡಿಸೋಜ, ಎಲ್ಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ್ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶೇಖಬ್ಬ,
ಮೈಕಲ್ ರಮೇಶ್ ಡಿಸೋಜ, ಗ್ಲಾಡಿಸ್ ಐಡಾ ಡಿಸೋಜ ಉಪಸ್ಥಿತರಿದ್ದರು.
ಮೈಕಲ್ ರಮೇಶ್ ಡಿಸೋಜ ಸ್ವಾಗತಿಸಿ, ಪ್ರಸ್ತಾವನೆಗೈದರು. ಸುಧಾಕರ ಶೆಣೈ ಪಿಲಾರು ನಿರೂಪಿಸಿ, ವಂದಿಸಿದರು.