ಕಟಪಾಡಿ : ನಾವು ನಡೆಸುವ ಧರ್ಮ ಕಾರ್ಯಗಳೇ ನಮ್ಮನ್ನು ರಕ್ಷಿಸುತ್ತವೆ ಮತ್ತು ಆಧರಿಸುತ್ತವೆ. ನಮ್ಮ ಮನಸ್ಥಿತಿ ನಡೆಯನ್ನು ನಿರ್ಧರಿಸುತ್ತದೆ. ಧರ್ಮ ಕಾರ್ಯ ನಡೆಸುವಾಗ ಪ್ರತಿಫಲಾಪೇಕ್ಷೆ ಬಯಸಬಾರದು ಎಂದು ಕಟಪಾಡಿ ಶ್ರೀಮತ್ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಪೀಠಾಧಿಪತಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
ಪಡುಕುತ್ಯಾರು ಆನೆಗುಂದಿ ಮೂಲಮಠದಲ್ಲಿ ಗುರುವಾರ ನಡೆದ ಧರ್ಮ ದಂಡ ಸಮರ್ಪಣೆ ಹಾಗೂ ಧರ್ಮ ದಂಡ ಪ್ರತಿಷ್ಠೆ ಧಾರ್ಮಿಕ ಕಾರ್ಯಕ್ರಮದಲ್ಲಿ ಧರ್ಮ ದಂಡವನ್ನು ಸ್ವೀಕರಿಸಿ ಆಶೀರ್ವಚನ ನೀಡಿದರು.
ಆಸೆ ಆಕಾಂಕ್ಷೆಗಳ ಲಾಲಸೆಯಿಲ್ಲದೇ ನಡೆಯಂತೆ ನುಡಿದು, ಅದರಂತೆ ಜೀವನ ನಡೆಸಿದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ. ಶಿಷ್ಯ ವೃಂದವನ್ನು ಧರ್ಮದ ಹಾದಿಯಲ್ಲಿ ನಡೆಯುವಂತೆ ಆಶೀರ್ವದಿಸಲು ಮತ್ತು ಪರಂಪರೆಯನ್ನು ರಕ್ಷಣೆ ಮಾಡುವ ಪ್ರತೀಕವಾಗಿ ಧರ್ಮ ದಂಡ ಬಳಕೆಯಾಗಲಿದೆ ಎಂದರು.
ಧರ್ಮ ದಂಡ ತಯಾರಿಗೆ 1.08 ಕೆಜಿ ಬೆಳ್ಳಿ, 23 ಗ್ರಾಂ ಚಿನ್ನ ಬಳಕೆಯಾಗಿದ್ದು, ಸಂಪೂರ್ಣ ಬೆಳ್ಳಿಯಿಂದ ತಯಾರು ಮಾಡಿರುವ ಧರ್ಮ ದಂಡವು 1.5 ಮೀ ಎತ್ತರವಿದೆ. 1.08 ಕಿ. ಗ್ರಾಂ. ಶುದ್ಧ ಬೆಳ್ಳಿಯಲ್ಲಿ ತಯಾರಿಸಿದ ದಂಡದ ಮೇಲ್ಬಾಗದಲ್ಲಿ 23 ಗ್ರಾಂ. ಅಪ್ಪಟ ಚಿನ್ನ ಬಳಸಿದ ನಂದೀಶ್ವರನ ಪ್ರತಿಮೆಯಿದ್ದು ಅಭಯ, ಪರಿಶುದ್ಧ ಜ್ಞಾನ ಮಾರ್ಗದ ಧರ್ಮದ ಪ್ರತಿರೂಪವಾಗಿ ಬಳಕೆಯಾಗಲಿದೆ. ಶ್ರೀಗಳ 19ನೇ ವರುಷದ ಚಾತುರ್ಮಾಸ್ಯ ವೃತಾಚರಣೆಯ ಸವಿನೆನಪಿಗಾಗಿ ಅವರ ಶಿಷ್ಯಂದಿರಾದ ಮಂಚಕಲ್ಲು ದಿ| ಚಂದ್ರಾವತಿ ವಾಸುದೇವ ಆಚಾರ್ಯ ಅವರ ಪುತ್ರರಾದ ಉಡುಪಿ ತಿರುಮಲ ಪಿ.ವಿ. ಗಂಗಾಧರ ಆಚಾರ್ಯ ಉಡುಪಿ, ಶ್ರೀಧರ ವಿ. ಆಚಾರ್ಯ ಮುಂಬಯಿ, ಪಿ.ವಿ. ಅಚ್ಯುತ ಆಚಾರ್ಯ ಉಡುಪಿ ಮತ್ತು ಕುಟುಂಬಸ್ಥರು ಧರ್ಮ ದಂಡವನ್ನು ಕೊಡುಗೆ ರೂಪದಲ್ಲಿ ಸಮರ್ಪಿಸಿದ್ದು ಪೃಥ್ವಿರಾಜ್ ಆಚಾರ್ಯ ಕಿನ್ನಿಗೋಳಿ ಇದನ್ನು ತಯಾರಿಸಿದ್ದಾರೆ.
ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ವೇ.ಬ್ರ. ಶಂಕರಾಚಾರ್ಯ ಗುರುನಾಥಾಚಾರ್ಯ ಕಡ್ಲಾಸ್ಕರ್ ಪಂಡಿತ್ ಹುಬ್ಬಳ್ಳಿ ಅವರ ಮಾರ್ಗದರ್ಶನದಲ್ಲಿ ತಂತ್ರಿವರ್ಯರಾದ ಬ್ರಹ್ಮಶ್ರೀ ಅಕ್ಷಯ ಶರ್ಮಾ ಕಟಪಾಡಿ ಅವರ ನೇತೃತ್ವದಲ್ಲಿ ಮಹಾಸಂಸ್ಥಾನದ ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ಪೂರ್ವ ಮತ್ತು ಪ್ರಸ್ತುತ ವಿದ್ಯಾರ್ಥಿಗಳ ಸಹಕಾರದೊಂದಿಗೆ ವೈದಿಕ ಕಾರ್ಯಕ್ರಮಗಳು ಜರಗಿದವು.
ಶ್ರೀಮದ್ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ಹಾಗೂ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಮತ್ತು ಧಾರ್ಮಿಕ ಮುಖಂಡ ಜಿ. ಟಿ. ಆಚಾರ್ಯ ಮುಂಬೈ ಶುಭಾಶಂಸನೆಗೈದರು.
ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ಅಸೆಟ್ ಅಧ್ಯಕ್ಷ ಬಿ. ಸೂರ್ಯಕುಮಾರ ಹಳೆಯಂಗಡಿ, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪ್ರಮುಖರಾದ ತ್ರಾಸಿ ಸುಧಾಕರ ಆಚಾರ್ಯ, ರೂಪೇಶ್ ಆಚಾರ್ಯ ಶಿರ್ವ, ಗುರುರಾಜ್ ಕೆ.ಜೆ. ಮಂಗಳೂರು, ಬಂಬ್ರಾಣ ಯಜ್ಞೇಶ ಆಚಾರ್ಯ ಮಂಗಳೂರು, ಕೆ. ಪ್ರಭಾಕರ ಆಚಾರ್ಯ ಕೋಟೆಕಾರು, ದಿನೇಶ್ ಆಚಾರ್ಯ ಪಡುಬಿದ್ರಿ, ಕೆ. ನಾಗರಾಜ ಆಚಾರ್ಯ ಉಡುಪಿ, ಬಿ. ಸುಂದರ ಆಚಾರ್ಯ ಮಂಗಳೂರು, ಆನೆಗುಂದಿ ಗುರು ಸೇವಾ ಪರಿಷತ್ ಅಧ್ಯಕ್ಷ ಕೆಮ್ಮಣ್ಣು ಗಣೇಶ ಆಚಾರ್ಯ, ವೈ. ಧರ್ಮೇಂದ್ರ ಆಚಾರ್ಯ ಕಾಸರಗೋಡು, ಹರ್ಷ ಆಚಾರ್ಯ ಮಂಚಕಲ್, ಅಚ್ಯುತ ಆಚಾರ್ಯ ಉಡುಪಿ, ಎಂ.ಪಿ. ಮೋಹನ ಆಚಾರ್ಯ ಉಡುಪಿ, ರಾಘವೇಂದ್ರ ಆಚಾರ್ಯ ಉಡುಪಿ, ರತ್ನಾಕರ ಆಚಾರ್ಯ ಉದ್ಯಾವರ, ಜನಾರ್ದನ ಆಚಾರ್ಯ ಕನ್ಯಾನ, ವಾದಿರಾಜ ಆಚಾರ್ಯ ಮಂಗಳೂರು, ಉಮೇಶ್ ಆಚಾರ್ಯ ಮುಂಬೈ, ಲೋಲಾಕ್ಷ ಶರ್ಮ ಪಡುಕುತ್ಯಾರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಕಾರ್ಯಕ್ರಮ ನಿರೂಪಿಸಿದರು.