ಮುದರಂಗಡಿ ಅಂಗನವಾಡಿ ಎದುರು ಅಪಾಯಕಾರಿ ಸ್ಥಿತಿಯಲ್ಲಿ ಮರಗಳು ; ಅರಣ್ಯ ಇಲಾಖೆಯ ವಿಳಂಬ ನೀತಿ ; ಶೀಘ್ರ ತೆರವಿಗೆ ಆಗ್ರಹ
Posted On:
26-08-2023 07:02AM
ಕಾಪು : ತಾಲೂಕಿನ ಮದರಂಗಡಿ ಗ್ರಾಮ ಪಂಚಾಯಿತಿಯ ಸಾಂತೂರು ಗ್ರಾಮದ ಚರ್ಚ್ ಎದುರಿರುವ ಅಂಗನವಾಡಿಯ ಎದುರು ನಾಲ್ಕು ಬೃಹತ್ ಮರಗಳಿದ್ದು, ಮರ ತೆರವುಗೊಳಿಸಲು ಅರಣ್ಯ ಇಲಾಖೆ ವಿಳಂಬವಹಿಸುತ್ತಿರುವ ಹಿನ್ನೆಲೆಯಲ್ಲಿ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ.
ಇಪ್ಪತ್ತಕ್ಕೂ ಅಧಿಕ ಮಕ್ಕಳಿದ್ದ ಅಂಗನವಾಡಿಯಲ್ಲಿ ಈಗ ಕೇವಲ 10 ಮಕ್ಕಳು ಮಾತ್ರ ಇದ್ದಾರೆ.
ಮುದರಂಗಡಿ ಗ್ರಾಮ ಪಂಚಾಯತ್ ಹಲವಾರು ಬಾರಿ ಈ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ, ಅರಣ್ಯ ಇಲಾಖಾಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕೆಲಸ ಬಾಕಿ ಉಳಿದಿದೆ. ಗಾಳಿ, ಮಳೆಗೆ ಯಾವ ಹೊತ್ತಿನಲ್ಲೂ ಮರ ಅಂಗನವಾಡಿ ಕೇಂದ್ರದ ಮೇಲೆ ಉರುಳಿ ಬೀಳುವ ಸಾಧ್ಯತೆ ಇದೆ.
ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯ ಶರತ್ ಶೆಟ್ಟಿ ಹಾಗೂ ಶಿವರಾಮ್ ಭಂಡಾರಿ ಅವರು ಆಕ್ರೋಶಿತರಾಗಿ ಮಾತನಾಡಿದ್ದಾರೆ.
ಮುದರಂಗಡಿ ಗ್ರಾಮ ಪಂಚಾಯತ್ ಪಿಡಿಓ ಮುತ್ತುರವರು ಪ್ರತಿಕ್ರಿಯಿಸಿ, ಈಗಾಗಲೇ ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ಅವರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದರು. ಅಂಗನವಾಡಿಯಲ್ಲಿರುವ ಮಕ್ಕಳ ಪಾಲಕರು ಶೀಘ್ರ ಮರ ತೆರವಿಗೆ ಆಗ್ರಹಿಸಿದ್ದಾರೆ.