ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸೆಪ್ಟೆಂಬರ್‌ 2 : ಬೆಳಪು ಸಹಕಾರಿ ಸಂಘದ ಅಮೃತ ಮಹೋತ್ಸವ ; ಸಹಕಾರಿ ಮಹಲ್ ಉದ್ಘಾಟನೆ

Posted On: 26-08-2023 05:38PM

ಉಚ್ಚಿಲ : ಬಡಾ, ಎಲ್ಲೂರು, ಬೆಳಪು ಗ್ರಾಮಸ್ಥರ ಆರ್ಥಿಕ ಸಬಲೀಕರಣದ ಉದ್ದೇಶ ಹೊಂದಿ 1948ರಲ್ಲಿ ಸ್ಥಾಪಿತವಾದ ಬೆಳಪು ವ್ಯವಸಾಯ ಸಹಕಾರಿ ಸಂಘವು ಈಗಾಗಲೇ 5 ಶಾಖೆಗಳನ್ನು ಹೊಂದಿದ್ದು ಅಮೃತ ಮಹೋತ್ಸವ ವರ್ಷಾಚರಣೆಯ ಸಂಭ್ರಮದಲ್ಲಿದೆ. ಈ ನಿಮಿತ್ತ ಸೆಪ್ಟೆಂಬರ್ 2, ಶನಿವಾರದಂದು ಬಡಾ ಗ್ರಾಮ ಉಚ್ಚಿಲ ಶಾಖೆಯ ಸಹಕಾರಿ ಮಹಲ್ ನಲ್ಲಿ ಜರಗಲಿರುವ ಅಮೃತ ಮಹೋತ್ಸವ ಸಂಭ್ರಮಾಚರಣೆ, ನವೀಕೃತ ಶಾಖೆ ಹಾಗೂ ಸಹಕಾರಿ ಮಹಲ್ ಉದ್ಘಾಟನಾ ಸಮಾರಂಭ ಮತ್ತು ಸಹಕಾರಿ ರಂಗದ ಅಗ್ರಗಣ್ಯ ನಾಯಕ ಡಾ| ಎಂ.ಎನ್. ಆರ್ ರವರಿಗೆ ಸಹಕಾರಿ ಧ್ರುವ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಹೇಳಿದರು. ಅವರು ಬೆಳಪು ಪಣಿಯೂರು ಸಹಕಾರಿ ಸಂಘದಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಂಘದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಉಚಿಲದಲ್ಲಿ, ನಿರ್ಮಿಸಲಾಗಿರುವ ಸಂಘದ ನವೀಕೃತ ಶಾಖೆ ಮತ್ತು ನೂತನ ಸಹಕಾರಿ ಮಹಲ್ ಕಟ್ಟಡ ಹಾಗೂ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಕಾನ್ಫರೆನ್ಸ್ ಹಾಲ್, ಸಮೃದ್ಧಿ ಸಭಾಂಗಣ, ರೈತ ಬಂಧು ಕೃಷಿ ಸಲಕರಣೆ ಕೇಂದ್ರ, ರೈತ ಮಾರುಕಟ್ಟೆ ಮತ್ತು ಗೋದಾಮು ಹಾಗೂ ಪಡಿತರ ವಿತರಣಾ ವಿಭಾಗ, ಸಹಕಾರಿ ಸಭಾಂಗಣ, ನವೋದಯ ಸಭಾಂಗಣ, ನವೀಕೃತ ಹವಾನಿಯಂತ್ರಿತ ಬ್ಯಾಂಕಿಂಗ್ ಶಾಖೆ, ಸೇಫ್ ಲಾಕರ್ - ಭದ್ರತಾ ಕೊಠಡಿಯು ಸೆ. 2ರಂದು, ಬೆಳಗ್ಗೆ 9.30ಕ್ಕೆ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಿಂದ ಉಚ್ಚಿಲ ಸಹಕಾರಿ ಮಹಲ್‌ವರೆಗೆ ಸಹಕಾರಿ ಮೆರವಣಿಗೆ ನಡೆಯಲಿದೆ.

ಮಹೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸಹಕಾರ ರತ್ನ ಡಾ|ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ನೂತನ ಸಹಕಾರಿ ಮಹಲ್‌ನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸಹಕಾರಿ ಸಭಾಂಗಣವನ್ನು ನಬಾರ್ಡ್‌ ಮುಖ್ಯ ಮಹಾಪ್ರಬಂಧಕ ಟಿ. ರಮೇಶ್, ನವೋದಯ ಸಭಾಂಗಣವನ್ನು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಡಾ|ಎಂ.ಎನ್.ಆರ್ ಕಾನ್ಫರೆನ್ಸ್ ಹಾಲ್‌ನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಅಮೃತ ದರ್ಪಣ ಸ್ಮರಣ ಸಂಚಿಕೆಯನ್ನು ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ| ಜಿ. ಶಂಕರ್ ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ, ಇಂದ್ರಾಳಿ, ನಬಾರ್ಡ್‌ ಡಿಡಿಎಂ ಸಂಗೀತಾ ಎಸ್ ಕರ್ತ, ಸಹಕಾರಿ ಸಂಘಗಳ ಉಪನಿಬಂಧಕ ಹೆಚ್‌.ಎನ್‌. ರಮೇಶ್, ದ.ಕ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್ ಪಾಂಗಾಳ, ಬಡಾ ಗ್ರಾ. ಪಂ. ಅಧ್ಯಕ್ಷ ಶಿವ ಕುಮಾರ್ ಮೆಂಡನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ನಬಾರ್ಡ್ ಸಹಭಾಗಿತ್ವದಲ್ಲಿ ಸುಮಾರು 3.70 ಕೋಟಿ ವೆಚ್ಚದಲ್ಲಿ, ನಿರ್ಮಾಣಗೊಂಡಿರುವ ಸಹಕಾರಿ ಮಹಲ್ ಬೆಳಪು ವ್ಯವಸಾಯ ಸಹಕಾರಿ ಸಂಘದ ಕೀರ್ತಿಯನ್ನು ಹೆಚ್ಚಿಸಲಿದೆ. ಸದ್ರಿ ಮಹಲ್‌ನಲ್ಲಿ ಶಾಪಿಂಗ್ ಮಹಲ್, ಸಹಕಾರಿ ಸಭಾಂಗಣ, ರೈತರ ದಾಸ್ತಾನು ಕೊಠಡಿ ಮತ್ತು ವಿವಿಧ ರೈತ ಸಲಕರಣೆಗಳ ಮಾರಾಟ ಮಳಿಗೆ ಹಾಗೂ ಗ್ರಹೋಪಯೋಗಿ ವಸ್ತುಗಳ ಮಳಿಗೆ ಸ್ಥಾಪನೆಗೊಳ್ಳಲಿದ್ದು ಸಾರ್ವಜನಿಕ ಸೇವಾ ಮನೋಭಾವನೆಯೊಂದಿಗೆ ಪ್ರಧಾನ ಮಂತ್ರಿ ಜನೌಷಧಾಲಯ ಪ್ರಾರಂಭಗೊಳ್ಳಲಿದೆ ಎಂದರು.

ಈ ಸಂದರ್ಭ ಆಡಳಿತ ಮಂಡಳಿಯ ನಿರ್ದೇಶಕರಾದ ಪಾಂಡು ಶೆಟ್ಟಿ, ಗೋಪಾಲ ಪೂಜಾರಿ, ಸೈಮನ್ ಡಿ ಸೋಜ, ಪಾಂಡು ಎಂ. ಶೇರಿಗಾರ್, ಅಲಿಯಬ್ಬ, ದ್ಯುಮಣಿ ಆರ್. ಭಟ್, ಬಾಲಕೃಷ್ಣ, ಎಸ್‌. ಆಚಾರ್ಯ, ಶೋಭಾ ಬಿ, ಭಟ್, ಮೀನಾ ಪೂಜಾರ್ತಿ, ವಿಮಲ ಅಂಚನ್‌, ಅನಿತಾ ಆನಂದ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಪ್ರತಿನಿಧಿ ಬಾಲಕೃಷ್ಣ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನಾ ದೇವಾಡಿಗ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.