ಬಂಟಕಲ್ಲು : ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ
Posted On:
26-08-2023 08:10PM
ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 10ನೇ ಪದವಿ ಪ್ರದಾನ ಸಮಾರಂಭವು ಶನಿವಾರ ಕಾಲೇಜಿನ ಆವರಣದಲ್ಲಿ ನಡೆಯಿತು.
ಉಡುಪಿ ಕಾಣಿಯೂರು ಮಠದ ಮಠಾಧೀಶರಾದ ಪರಮಪೂಜ್ಯ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮಿಜಿಯವರು ತಮ್ಮ ಆಶೀರ್ವಚನದಲ್ಲಿ ಸದ್ಗುಣವಂತ ಪದವೀಧರರು ಸಮಾಜದ ನಿಜವಾದ ಆಸ್ತಿ. ಜೀವನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಾಳಿ ನೈತಿಕತೆ ಮತ್ತು ಉತ್ತಮ ಚಾರಿತ್ರ್ಯ ವನ್ನು ಮೈಗೂಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಚಂದ್ರಯಾನ -3ರ ಸಫಲತೆಯನ್ನು ಉಲ್ಲೇಖಿಸಿ ಈ ಸಂಸ್ಥೆಯ ಪದವೀಧರರು ಇಸ್ರೋದ ವಿಜ್ಞಾನಿಗಳಂತೆ ಆವಿಷ್ಕಾರ ಹಾಗೂ ಸಾಧನೆಗಳನ್ನು ಮಾಡಲಿ ಎಂದು ಆಶೀರ್ವದಿಸಿದರು.
ಮಂಗಳೂರಿನ ಪ್ರತಿಷ್ಠಿತ ಎಸ್. ಎಲ್. ಶೇಟ್ ಜ್ಯುವೆಲರ್ಸ್ ಪ್ರಶಾಂತ್ ಶೇಟ್ ಇವರಿಂದ ಪ್ರಾಯೋಜಿತವಾದ ಚಿನ್ನದ ಪದಕಗಳನ್ನು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅನ್ವಿತಾ, ಗಣಕಯಂತ್ರ ವಿಭಾಗದ ವೈಷ್ಣವಿ ಡಿ, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಕ್ಷತಾ ಅನಿಲ್ ಕುಮಾರ್ ರೆಂಜಾಲ್ ಮತ್ತು ಮೆಕ್ಯಾನಿಕಲ್ ವಿಭಾಗದ ರತನ್ ಪಾಟ್ಕರ್ ಇವರ ಶೈಕ್ಷಣಿಕ ಸಾಧನೆಗಾಗಿ ನೀಡಿ ಆಶೀರ್ವದಿಸಿದರು.
ಈ ಸಮಾರಂಭದಲ್ಲಿ ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷರಾದ ಡಾ. ಗೋಪಾಲ್ ಮುಗೆರಾಯ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪ್ರದಾನ ಸಮಾರಂಭದ ವಿಶೇಷ ಉಪನ್ಯಾಸ ನೀಡಿದರು.
ಮಂಗಳೂರಿನ ಕಂಬಳ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸೋಮನಾಥ ಜೋಗಿ ಇವರು ಸಮಾರಂಭದ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಅತಿಥಿಗಳನ್ನು ಸ್ವಾಗತಿಸಿದರು.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀರತ್ನಕುಮಾರ್,
ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಲೊಲಿಟ ಪ್ರಿಯಾ ಕ್ಯಾಸ್ತೆಲಿನೊ ಮತ್ತು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸುಬ್ಬುಲಕ್ಷ್ಮಿ ಎನ್ ಕಾರಂತ್ ಇವರು ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜಕರಾದ ಸುಧೀರ್ ಅವರು ಸ್ವಾಮಿಜಿಯವರನ್ನು ಪರಿಚಯಿಸಿದರು.
ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ಅವರು ಪದವೀಧರರಿಗೆ ಪ್ರಮಾಣವಚನ ಭೋದಿಸಿದರು.
ಡಾ. ಸುದರ್ಶನ್ ರಾವ್ ನಾಲ್ಕು ವಿಭಾಗಗಳಲ್ಲಿ ಚಿನ್ನದ ಪದಕ ಪಡೆದವರ ಹೆಸರನ್ನು ಹಾಗೂ ವಿಭಾಗ ಮುಖ್ಯಸ್ಥರು ಪದವೀಧರರ ಹೆಸರನ್ನು ಘೋಷಿಸಿದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರವೀಂದ್ರ ಹೆಚ್ ಜೆ ವಂದಿಸಿದರು. ವಿದ್ಯಾರ್ಥಿನಿ ಚಿತ್ಕಲಾ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ ಲಹರಿ ವೈದ್ಯ ಮತ್ತು ಪೂಜಶ್ರೀ ನಿರೂಪಿಸಿದರು.