ಶಿರ್ವ : ಬಂಟಕಲ್ಲು ಶ್ರೀದುರ್ಗಾ ಮಹಿಳಾ ಚಂಡೆ ಬಳಗ - ಶ್ರಾವಣ ಸಂಭ್ರಮ ಸಂಪನ್ನ
Posted On:
27-08-2023 07:42PM
ಶಿರ್ವ : ಶ್ರೀದುರ್ಗಾ ಮಹಿಳಾ ಚಂಡೆ ಬಳಗ ಬಂಟಕಲ್ಲು ಇದರ ವತಿಯಿಂದ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಸಭಾಂಗಣದಲ್ಲಿ ರವಿವಾರ ಜರುಗಿದ "ಶ್ರಾವಣ ಸಂಭ್ರಮ" ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕಿ ಬೇಬಿ ಪ್ರಭು ಬೆಳಂಜಾಲೆ ಇವರು ಜ್ಯೋತಿ ಪ್ರಜ್ವಲನದ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ನಮ್ಮ ಹಿರಿಯರು ಆಚರಣೆ ಮಾಡಿಕೊಂಡು ಬರುತ್ತಿದ್ದ ಸತ್‌ಸಂಪ್ರದಾಯಗಳನ್ನು ಉಳಿಸಿ ನವಪೀಳಿಗೆಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಮಹಿಳಾ ಚಂಡೆ ಬಳಗದವರು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಅಭಿವೃದ್ಧಿ ನಿಗಮದ ಅಧೀಕ್ಷಕರಾದ ಸಂಗೀತಾ ದಯಾನಂದ ನಾಯಕ್ ಮಾತನಾಡಿ ಬಾಲ್ಯದಿಂದಲೇ ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿಯೇ ವಿವಿಧ ಕಲಾಪ್ರಕಾರಗಳಾದ ಭಜನೆ, ಸಂಗೀತ, ನಾಟ್ಯ, ಉಪಕರಣಗಳ ನುಡಿಸುವಿಕೆ, ಕಲಿಸುವುದರಿಂದ ಉತ್ತಮ ಸಂಸ್ಕಾರ ಬೆಳೆಯುತ್ತದೆ. ಈ ಬಗ್ಗೆ ತಾಯಂದಿರು ಗಮನ ಹರಿಸುವಂತೆ ಕರೆ ನೀಡಿ, ತಮ್ಮ ಇಲಾಖೆಯಿಂದ ಮಹಿಳೆಯರಿಗೆ ಸಿಗುವ ಸೌಲಭ್ಯಗಳಾದ ಉದ್ಯೋಗಿನಿ, ಧನಶ್ರೀ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಈ ವಿಷಯವನ್ನು ಪ್ರಚಾರ ಮಾಡಿ ಸಮಾಜದ ಅರ್ಹ ಮಹಿಳೆಯರಿಗೂ ಸಿಗುವಂತೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ರಘುರಾಮ ನಾಯಕ್ ಸಡಂಬೈಲು ತೊಟ್ಟಿಲುಮನೆ, ಯುನಿವರ್ಸಿಟಿ ಚಿನ್ನದ ಪದಕ ವಿಜೇತ ಪುನೀತ್ ತೆಂಡುಲ್ಕರ್, ಯಕ್ಷಗಾನ ಯುವ ಪ್ರತಿಭೆ ಸಂಧ್ಯಾ ನಾಯಕ್ ಇವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ, ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಕ್ಷೇತ್ರ ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರರಾದ ಶಶಿಧರ ವಾಗ್ಲೆ, ಆರ್‌ಎಸ್‌ಬಿ ಯುವವೃಂದದ ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್ ಮಹಿಳಾ ಚಂಡೆ ಬಳಗದ ನೇತೃತ್ವದಲ್ಲಿ ನಿರಂತರವಾಗಿ ನಡೆಯುತ್ತಿರುವ ಧಾರ್ಮಿಕ, ಸಾಸ್ಕೃತಿಕ, ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿ ಅಭಿನಂದಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಚಂಡೆಬಳಗದ ಅಧ್ಯಕ್ಷೆ ಗೀತಾ ವಾಗ್ಲೆ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಭವಾನಿ ನಾಯಕ್ ವರದಿ ಓದಿದರು. ಶೈಲಜಾ ಪಾಟ್ಕರ್, ಸಂಗೀತಾ ಪಾಟ್ಕರ್, ನಾಗವೇಣಿ ಪ್ರಭು, ಆಶಾ ನಾಯಕ್, ವಿದ್ಯಾ ಪರಿಚಯಿಸಿದರು. ಕುಸುಮಾ ಕಾಮತ್ ಕರ್ವಾಲು ಧನ್ಯವಾದವಿತ್ತರು. ಭವಾನಿ ನಾಯಕ್ ನಿರೂಪಿಸಿದರು. ಖ್ಯಾತ ಗಾಯಕರಾದ ರವೀಂದ್ರ ಪ್ರಭು ಮುಲ್ಕಿ ಇವರಿಂದ "ಭಕ್ತಿ ಸಿಂಚನ" ಕಾರ್ಯಕ್ರಮ ಜರುಗಿತು.