ಉಚ್ಚಿಲ : ದ.ಕ. ಮೊಗವೀರ ಮಹಾಜನ ಸಂಘದ ವತಿಯಿಂದ ವಿದ್ಯಾರ್ಥಿವೇತನ ಮತ್ತು ಗುರಿಕಾರರಿಗೆ ಗೌರವಧನ ವಿತರಣೆ
Posted On:
27-08-2023 08:12PM
ಉಚ್ಚಿಲ : ದ.ಕ. ಮೊಗವೀರ ಮಹಾಜನ ಸಂಘ
ಮತ್ತು ಮಹಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಉಪ್ಪಳದಿಂದ ಶೀರೂರುವರೆಗಿನ ಮೊಗವೀರ ಗುರಿಕಾರರಿಗೆ ಗೌರವಧನ ವಿತರಣೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ ಭಾನುವಾರ ಉಚ್ಚಿಲದ ಮೊಗವೀರ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಜಿ. ಶಂಕರ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಮೊಗವೀರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಸರಕಾರವನ್ನು ಒತ್ತಾಯಿಸುವ ಪ್ರಥಮ ಹಂತದ ಹೋರಾಟ ನಡೆಯುತ್ತಿದೆ. ನಮ್ಮ ಹೋರಾಟಕ್ಕೆ ಮತ್ತಷ್ಟು ಶಕ್ತಿ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳ ಬೆಂಬಲ ಕೋರಿ ಲೋಕಸಭಾ ಚುನಾವಣೆಗೆ ಮೊದಲು ಬೃಹತ್ ಮಟ್ಟದ ಹೋರಾಟ ನಡೆಸಲಾಗುವುದು ಎಂದರು.
ರಾಜ್ಯದಲ್ಲಿರುವ ಫಿಶರೀಸ್ ಕಾಲೇಜಿನಲ್ಲಿ ಮೊಗವೀರ ಸಮಾಜದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಸಿಗುತ್ತಿಲ್ಲದ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತುಕತೆ ನಡೆಸಲಾಗಿದೆ ಎಂದರು.
2022-23 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 524 ವಿದ್ಯಾರ್ಥಿಗಳಿಗೆ 18.90 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಮತ್ತು ಬಗ್ವಾಡಿ, ಬಾರ್ಕೂರು, ಉಚ್ಚಿಲ ಮತ್ತು ಮಂಗಳೂರು ಹೋಬಳಿ ವ್ಯಾಪ್ತಿಯ 342 ಮಂದಿ ಗುರಿಕಾರರಿಗೆ 17.10 ಲಕ್ಷ ರೂ. ಗೌರವಧನ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ಕ್ಷೇತ್ರದಲ್ಲಿ ನಡೆಯುತ್ತಿರುವ ನಿತ್ಯ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಸಹಕರಿಸುತ್ತಿರುವ ಮೋಹನ್ ಬಂಗೇರ ಕಾಪು ಮತ್ತು ಬಡಾ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಮೆಂಡನ್ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು.
ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಪ್ರಧಾನ ಕಾರ್ಯದರ್ಶಿ ಸುಧಾಕರ್ ಕುಂದರ್, ಕೋಶಾಧಿಕಾರಿ ಭರತ್ ಕುಮಾರ್ ಎರ್ಮಾಳ್, ಮೊಗವೀರ ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಉಷಾ ರಾಣಿ, ಬಗ್ವಾಡಿ ಹೋಬಳಿ ಶಾಖೆ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಬಾರ್ಕೂರು ಹೋಬಳಿ ಶಾಖೆ ಅಧ್ಯಕ್ಷ ಸತೀಶ್ ಅಮೀನ್, ಮೊಗವೀರ ಯುವ ಸಂಘಟನೆ ಅಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡಕ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ದೇಗುಲದ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕೆರೆ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್ ವಂದಿಸಿದರು.