ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶಿರ್ವ : ಹಿಂದೂ ಜೂನಿಯರ್‌ ಕಾಲೇಜು - ವಿದ್ಯಾರ್ಥಿಗಳ ದತ್ತು ಸ್ವೀಕಾರ, ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ

Posted On: 31-08-2023 05:30PM

ಶಿರ್ವ: ಇಲ್ಲಿನ ಹಿಂದೂ ಜೂನಿಯರ್‌ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ಮುದ್ದು ಶೆಟ್ಟಿ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿಗಳ ದತ್ತು ಸ್ವೀಕಾರ‌ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಶಿರ್ವ ವಿದ್ಯಾವರ್ಧಕ ಸಂಘದ ಸಂಚಾಲಕ ವಿ. ಸುಬ್ಬಯ್ಯ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಹಳೆ ವಿದ್ಯಾರ್ಥಿಗಳಿಂದ ಕೊಡುಗೆ : ವಿದ್ಯಾರ್ಥಿಗಳಿಗೆ 2 ಲ.ರೂ. ವಿದ್ಯಾರ್ಥಿ ವೇತನ ಸೇರಿದಂತೆ ಕಾಲೇಜಿನಲ್ಲಿ ನಡೆಯುವ ಕ್ರೀಡಾಕೂಟ, ವಾರ್ಷಿಕೋತ್ಸವ ಮತ್ತು ನಿರ್ವಹಣಾ ಕೆಲಸಗಳಿಗೆ ಒಟ್ಟು 4 ಲಕ್ಷ ರೂಪಾಯಿಗಳ ಕೊಡುಗೆಗಳನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನೀಡಲಾಯಿತು. ಸಮ್ಮಾನ : ನಿವೃತ್ತ ಉಪನ್ಯಾಸಕ ವಿಷ್ಣು ಭಟ್‌ ದಂಪತಿ ಮತ್ತು ಕಳೆದ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ನೇ ರ್‍ಯಾಂಕ್‌ ಗಳಿಸಿದ ಅಂಶಿ ಎಸ್‌. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಜೇಸಿಐ ರಾಷ್ಟ್ರೀಯ ತರಬೇತುದಾರ ಇನ್ನಾ ರಾಜೇಂದ್ರ ಭಟ್‌ ದಿಕ್ಸೂಚಿ ಭಾಷಣ ಮಾಡಿದರು. ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿಗಾರ್‌ ಅಧ್ಯಕ್ಷತೆ ವಹಿಸಿದ್ದರು. ಹಳೆವಿದ್ಯಾರ್ಥಿ ಸಂಘದ ಮುಂಬೈ ಸಮಿತಿಯ ಗೌರವ ಸಲಹೆಗಾರ ಕುತ್ಯಾರು ಕಿಶೋರ್‌ ಕುಮಾರ್‌ ಶೆಟ್ಟಿ, ಮುಂಬೈ ಸಮಿತಿಯ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಸೊರ್ಕಳ, ಉಪಾಧ್ಯಕ್ಷ ಶಿರ್ವ ಕೋಡು ಜಯಪ್ರಕಾಶ ಹೆಗ್ಡೆ, ಕೋಶಾಧಿಕಾರಿ ಉಮೇಶ್‌ ಆಚಾರ್ಯ, ಸಂಸ್ಥೆಯ ಪ್ರಾಂಶುಪಾಲ ಭಾಸ್ಕರ ಎ. ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಸಂತಿ ಬಾಯಿ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಹಳೆವಿದ್ಯಾರ್ಥಿ ಸಂಘದ ಹಿರಿಯ ಸದಸ್ಯರು, ಕಾಲೇಜಿನ ಸಹ ಸಂಸ್ಥೆಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಹಾಗೂ ಹೆತ್ತವರು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸಚ್ಚಿದಾನಂದ ಹೆಗ್ಡೆ ಪ್ರಸ್ತಾವನೆಗೈದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿಗಾರ್‌ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಪ್ರಶಾಂತ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೇಂಜ ಪವನ್‌ ಶೆಟ್ಟಿ ವಂದಿಸಿದರು.