ಹೆಜಮಾಡಿ : ಪತ್ರಕರ್ತ ಹರೀಶ್ ಹೆಜಮಾಡಿಗೆ ಹುಟ್ಟೂರ ಸನ್ಮಾನ
Posted On:
03-09-2023 06:42AM
ಹೆಜಮಾಡಿ : ಇಂದಿನ ಕಾಲದಲ್ಲಿ ದೇವಾಲಯಗಳೆಂದರೆ ಸರಕಾರಿ ಪ್ರಾಥಮಿಕ ಶಾಲೆಗಳು. ಇದೊಂದು ಪವಿತ್ರ ಕ್ಷೇತ್ರ. ಇಂತಹ ಶಾಲೆಯಲ್ಲಿ ಕಲಿತು ಇಲ್ಲಿಯೇ ಪತ್ರಕರ್ತ ಹರೀಶ್ ಹೆಜಮಾಡಿಯವರಿಗೆ ಊರವರು ಸನ್ಮಾನಗೈಯುತ್ತಿರುವುದು ಅಭಿನಂದನೀಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕ ಕಮಲ ದೇವಿ ಪ್ರಸಾದ ಅಸ್ರಣ್ಣ ಹೇಳಿದರು.
ಅವರು ಹೆಜಮಾಡಿ ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ಹರೀಶ್ ಹೆಜಮಾಡಿ ಇವರ ಹುಟ್ಟೂರ ಸನ್ಮಾನ ಸಮಿತಿ ಹೆಜಮಾಡಿ ಇವರ ಸಹಯೋಗದಲ್ಲಿ ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪತ್ರಕರ್ತ ಹರೀಶ್ ಹೆಜಮಾಡಿ ಇವರ ಹುಟ್ಟೂರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಂಗಾರ್ ಜುಮ್ಮಾ ಮಸೀದಿಯ ಖತೀಬರಾದ ಜವಾಬ್ ಅಶ್ರಫ್ ಸಖಾಫಿ ಕಿನ್ಯ ಮಾತನಾಡಿ ಧರ್ಮ, ಅನಾಚಾರದ ಸುದ್ದಿಗಳಿಗೆ ಕಡಿವಾಣ ಹಾಕಬೇಕಾಗಿದೆ. ಸಮನ್ವಯ ಸಾಧಿಸುವ ಮೂಲಕ ಸಮಾಜದ ಹಿತಚಿಂತನೆಯ ಕಾರ್ಯ ಪತ್ರಿಕೆಗಳಿಂದ ಆಗಬೇಕಾಗಿದೆ ಎಂದರು.
ಕಾರ್ನಾಡು ಮುಲ್ಕಿ, ಅಮಲೋದ್ಭವ ಮಾತಾ ಚರ್ಚ್ ನ ಧರ್ಮ ಗುರು ವಂ| ಫಾ| ಸಿಲ್ವೆಸ್ಟರ್ ಡಿ ಕೋಸ್ತ ಮಾತನಾಡಿ ಇಂದು ಊರ ಸಂಘ ಸಂಸ್ಥೆಗಳಿಂದ ತಮ್ಮ ಊರಿನ ವ್ಯಕ್ತಿ ಎಂಬ ಪ್ರೀತಿ, ಆತ್ಮೀಯಯೆಯಿಂದ ಪಡೆಯುವ ಸನ್ಮಾನ ಅತ್ಯಂತ ಮಹತ್ವದ್ದಾಗಿದೆ ಎಂದರು.
ಸನ್ಮಾನ : ಹೆಜಮಾಡಿ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗ್ರಾಮದ ನಾಗರಿಕರು ಸೇರಿ ಪತ್ರಕರ್ತ ಹರೀಶ್ ಹೆಜಮಾಡಿಯವರನ್ನು ಸನ್ಮಾನಿಸಿದರು. ಇದೇ ಸಂದರ್ಭ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಹೆಜಮಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ರೇಶ್ಮಾ ಎ ಮೆಂಡನ್, ಉಪಾಧ್ಯಕ್ಷರಾದ ಮೋಹನ್ ಸುವರ್ಣರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಹೆಜಮಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ರೇಶ್ಮಾ ಎ ಮೆಂಡನ್, ಉಪಾಧ್ಯಕ್ಷರಾದ ಮೋಹನ್ ಸುವರ್ಣ,
ಮಾಜಿ ಅಧ್ಯಕ್ಷರಾದ ಪಾಂಡುರಂಗ ಸಿ ಕರ್ಕೇರ,
ಅಲ್ ಅಝಾರ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಹಾಜಿ ಶೇಖಬ್ಬ ಕೋಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ ಸಮಿತಿಯ ಅಧ್ಯಕ್ಷರಾದ ಪೌಲ್ ರೋಲ್ಫಿ ಡಿ ಕೋಸ್ತ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಶಿಕ್ಷಕ ಸಂಜೀವ ಟಿ ಪ್ರಾರ್ಥಿಸಿದರು.
ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವಾಮನ್ ಕೋಟ್ಯಾನ್ ಸ್ವಾಗತಿಸಿದರು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಶೇಖರ ಹೆಜಮಾಡಿ ಪ್ರಸ್ತಾವನೆಗೈದರು.
ಸನಾ ಇಬ್ರಾಹಿಂ ವಂದಿಸಿದರು.
ಸನ್ಮಾನ ಕಾರ್ಯಕ್ರಮದ ಮುನ್ನ ಗಣ್ಯರ ಸಹಿತ ಸನ್ಮಾನಿತರನ್ನು ಹೆಜಮಾಡಿ ಜಂಕ್ಷನ್ ನಿಂದ ವೇದಿಕೆಗೆ ಚಿಣ್ಣರ ಸ್ವಾಗತದ ಜೊತೆಗೆ ಚಂಡೆಯ ನಿನಾದದೊಂದಿಗೆ ಬರಮಾಡಿಕೊಳ್ಳಲಾಯಿತು. ನಂತರ ಸ.ಮಾ.ಹಿ.ಪ್ರಾ. ಶಾಲೆ ಹಾಗೂ ವಿದ್ಯಾಪ್ರಸಾರ ವಿದ್ಯಾಮಂದಿರ ಶಾಲೆಯ ವಿದ್ಯಾರ್ಥಿನಿಯರಿಂದ ನೃತ್ಯ ಕಾರ್ಯಕ್ರಮ ಜರಗಿತು.