ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನಮ್ಮೆಲ್ಲರ ಬದುಕಿಗೆ ಹೊಸ ಅಥ೯ ನೀಡಿದ ಗುರುವಿಗೆ ವಂದನೆ

Posted On: 05-09-2023 07:47AM

ಅಂದು ಹಿಂದಕ್ಕೆ ಗುರುವಿದ್ದ, ಮುಂದಕ್ಕೆ ಗುರಿಯಿತ್ತು; ಮುಂದೆ ನಡೆಯುತ್ತಿತ್ತು ಧೀರದಂಡು! ಇಂದೋ? ಹಿಂದಕ್ಕೆ ಗುರುವಿಲ್ಲ, ಮುಂದಕ್ಕೆ ಗುರಿಯಿಲ್ಲ;ಮುನ್ನುಗುತ್ತಿದೆ ಕುರಿಗಳ ಹಿಂಡು! ಇದು ರಾಷ್ಟ್ರಕವಿ ಕುವೆಂಪುರವರ ಮಾತುಗಳು. ಇದು ನೂರಕ್ಕೆ ನೂರರಷ್ಟು ಸತ್ಯ. ಪ್ರತಿಯೊಬ್ಬರ ಜೀವನದಲ್ಲಿಯೂ ಗುರಿ, ಗುರು ಬಹುಮುಖ್ಯ ಹಲವರ ಜೀವನಗಳಲ್ಲಿ ತಮ್ಮ ಗುರುಗಳು ಬೀರಿದ ಪ್ರಭಾವದಿಂದ ತಾವು ತಮ್ಮ ಜೀವನದ ದಿಕ್ಕನ್ನೇ ಬದಲಿಸಿ ಯಶಸ್ವಿಯಾದ ಹಲವಾರು ಉದಾಹರಣೆಗಳಿವೆ. ಪ್ರತಿಯೊಬ್ಬರ ಜೀವನದಲ್ಲಿ ಗುರಿ ಎಷ್ಟು ಮುಖ್ಯವೋ, ಅಷ್ಟೇ ಗುರುಗಳೂ ಮುಖ್ಯ ಏಕೆಂದರೆ, ಆ ಗುರಿ ಮುಟ್ಟಲು ಬದುಕಿಗೆ.ದಾರಿ ದೀಪವಾದ ಉತ್ತಮ ಗುರುಗಳು.

ಶಿಕ್ಷಕರಿಗೆ ಶಿಕ್ಷಕರಾದ ಮಹಾ ಗುರುವಿಗೆ ನಮೋ ನಮ: : ಡಾII ಸವ೯ಪಳ್ಳಿ ರಾಧಾಕೃಷ್ಣನ್ 1888 ಸೆಪ್ಟೆಂಬರ್ 5 ರಂದು ಚಿತ್ತೂರ್ ಜಿಲ್ಲೆಯ ತಿರುತನಿ ಪವಿತ್ರ ಕ್ಷೇತ್ರದಲ್ಲಿ ಹುಟ್ಟಿದರು. ಸರ್ವಪಲ್ಲಿ ಇದು ಇವರ ಮನೆತನದ ಹೆಸರು. ಬಾಲ್ಯದಿಂದಲೂ ದೈವರಾಧನೆಯಲ್ಲಿ, ಅಧ್ಯಾತ್ಮದಲ್ಲಿ ರಾಧಾಕೃಷ್ಣರಿಗೆ ಒಲವು. ಎಂಟು ವರ್ಷಗಳ ಕಾಲ ಕ್ರೈಸ್ತ ಸೇವಾ ಸಂಘದ ಶಾಲೆಯಲ್ಲಿ ಕಲಿತು ಅನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜನ್ನು ಸೇರಿದರು. ಎಂ.ಎ ಪದವಿಧರರಾದ ಮೇಲೆ ಮೈಸೂರು, ಕಲ್ಕತ್ತಾ ವಿಶ್ವವಿದ್ಯಾನಿಲಯಗಳಲ್ಲಿ ತತ್ವ ಶಾಸ್ತ್ರದ ಪ್ರಾಧ್ಯಾಪಕರಾದರು. ಆಂದ್ರ ಪ್ರದೇಶ ವಿಶ್ವವಿದ್ಯಾನಿಲಯದಲ್ಲಿ 1931-1936ರ ಅವಧಿಯಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ 1939-1948ರ ಅವಧಿಯಲ್ಲಿ ಉಪಕುಲಪತಿಯಾಗಿದ್ದರು. ದೆಹಲಿ ವಿಶ್ವವಿದ್ಯಾನಿಲಯದಲ್ಲಿ 1953-1962ರ ಅವಧಿಯಲ್ಲಿ ಕುಲಪತಿಯಾಗಿದ್ದರು. . ಪಾಶ್ಚಾತ್ಯ ಜಗತ್ತಿನ ಹಿಯ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಆಕ್ಸಫರ್ಡನಲ್ಲಿ ಅವರು ಪೌರಸ್ತ್ಯ ಧರ್ಮಗಳು ಮತ್ತು ನೀತಿ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು, 1946 ರಿಂದ 1952ರ ವರೆಗೆ ಯುನೆಸ್ಕೋದಲ್ಲಿ ಭಾರತ ನಿಯೋಗದ ಮುಖಂಡರಾಗಿದ್ದರು. 1949 ರಿಂದ 1952ರ ವರೆಗೆ ಸೋವಿಯತ್ ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿದ್ದರು. 1952ರಲ್ಲಿ ಭಾರತಕ್ಕೆ ಹಿಂದುರುಗಿದಾಗ ಭಾರತದ ಉಪ-ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದರು. 1962 ಮೇ 11 ರಂದು ರಾಷ್ಟ್ರಾಧ್ಯಕ್ಷರಾಗಿ ಚುನಾಯಿತರಾಗಿ ಐದು ವರ್ಷಗಳ ನಂತರ 1967ರಲ್ಲಿ ನಿವೃತ್ತಿಯಾದರು. 1967ರಲ್ಲಿ “ಭಾರತ ರತ್ನ” ಎಂಬ ಗೌರವವನ್ನು ತಮ್ಮದಾಗಿಸಿಕೊಂಡರು. 86ರ ವಯಸ್ಸಿನಲ್ಲಿ 1975 ಏಪ್ರಿಲ್ 17 ರಂದು ನಿಧನರಾದರು. ಶ್ರೇಷ್ಠ ಶಿಕ್ಷಣ ಚಿಂತಕರು ಡಾ. ರಾಧಾಕೃಷ್ಣನ್ ಇವರ ಪ್ರಕಾರ ಶಿಕ್ಷಣದ ಅರ್ಥ ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸುವುದು. ಶಿಕ್ಷಣ ಇದು ಬೌದ್ಧಿಕ ಶಕ್ತಿಯನ್ನು ಉಧೀಪನಗೊಳಿಸುವುದು,ಮಾತ್ರವಲ್ಲದೇ ಮಕ್ಕಳ ಮನಸ್ಸನ್ನು ಶುದ್ಧಗೊಳಿಸಿ, ಆಧ್ಯಾತ್ಮ ಭಾವನೆಯನ್ನು ಪ್ರಚೋದಿಸಬೇಕು.

ಡಾ. ರಾಧಾಕೃಷ್ಣನ್ ಅವರ ಶಿಕ್ಷಣದ ಗುರಿಗಳು : ಬೌದ್ಧಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಬೆಳವಣ ಗೆ, ಶಿಕ್ಷಣವು ವ್ಯಕ್ತಿ ತನ್ನನ್ನು ಮತ್ತು ಸಹಚರರನ್ನು ಪ್ರೀತಿಸಲು ಪ್ರೇರೇಪಿಸಬೇಕು. ಶಿಕ್ಷಣವು ವೈಜ್ಞಾನಿಕ ಮನೋವಿಜ್ಞಾನವನ್ನು ವೃದ್ಧಿಸಬೇಕು. ಮಾನವನ ನೆಮ್ಮದಿಯ ಜೀವನಕ್ಕೆ ಅವಶ್ಯವಾದುದು. ಮಕ್ಕಳಲ್ಲಿ ಆಲೋಚನಾ ಶಕ್ತಿ ಶಿಕ್ಷಣವು ಅಭಿವೃದ್ಧಿ ಪಡಿಸಬೇಕು. ಶಿಕ್ಷಣವು ಮಕ್ಕಳಲ್ಲಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಸಿದ್ಧತೆಯ ಸಲಹೆ ನೀಡಬೇಕು. ಪಠ್ಯಕ್ರಮವು ನಮ್ಮ ಚರ್ಚೆಯಲ್ಲಿ ಕಾರ್ಯ ಆಧಾರ, ತೀರ್ಮಾನಗಳನ್ನು ಕಂಡು ಕೊಳ್ಳಲು ಪೂರಕವಾಗುವಂತಹ ವಿಷಯಗಳಿರಬೇಕು. ವಿಜ್ಞಾನವು ಕೂಡಾ ಶಿಕ್ಷಣದ ಒಂದು ಅಂಗವಾಗಿರಬೇಕು. ಪ್ರಜಾಪ್ರಭುತ್ವದ ಗುಣಗಳನ್ನು ಅರಿಯುವ, ವೃದ್ಧಿಸುವ ವಿಷಯಗಳು ಪಠ್ಯವಸ್ತುವಿನಲ್ಲಿರಬೇಕು. ಹೀಗಾಗಿ ನೃತ್ಯ ಸಂಗೀತ ಇವುಗಳಿಗೆ ಶಿಕ್ಷಣದಲ್ಲಿ ಉನ್ನತ ಸ್ಥಾನವಿರಬೇಕು. ಪಠ್ಯವಸ್ತುವಿನ ವಿಷಯಗಳು ಮಕ್ಕಳಲ್ಲಿ ಆಲಸ್ಯವನ್ನು ಹೋಗಲಾಡಿಸಿ ಆಂತರಿಕ ಒಲವನ್ನು ವೃದ್ಧಿಸಬೇಕು. ಸಂಸ್ಕøತಿಯ ಅಭ್ಯಾಸಕ್ಕೆ ವಿಶೇಷ ಸೌಲಭ್ಯವಿರಬೇಕು. ಬೋಧನಾ ಪದ್ಧತಿ : ಮಗುವಿನಲ್ಲಿ ವೈಚಾರಿಕ ಆಶಯಗಳನ್ನು ಸೃಷ್ಠಿಸಬೇಕು. ಮುಕ್ತ ಪರಿಸರದಲ್ಲಿ ಶಿಕ್ಷಣ ಕೋಡಬೇಕು. ಸ್ವ-ಕಲಿಕೆಗೆ ಸೌಲಭ್ಯವಿರಬೇಕು. ಶಿಕ್ಷಣ ಕೇವಲ ವಿಷಯವನ್ನು ರವಾನಿಸಿದೆ ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆಗೆ ಒಳಪಡಿಸಬೇಕು. ರಾಧಾಕೃಷ್ಣನರ ಶೈಕ್ಷಣಿಕ ವಿಚಾರಗಳು : ಮನಸ್ಸು ಮತ್ತು ಆತ್ಮಗಳ ತರಬೇತಿಯೇ ಶಿಕ್ಷಣ, ವೈಜ್ಞಾನಿಕ ಪ್ರವೃತ್ತಿಯ ವಿಕಾಸವೇ ಶಿಕ್ಷಣ, ಪ್ರಜಾಪ್ರಭುತ್ವಕ್ಕಾಗಿ ಶಿಕ್ಷಣ ಮತ್ತು ಸ್ವಯಂ ಶಿಸ್ತು, ಸ್ತ್ರೀ-ಪುರುಷರಿಗೆ ಸಮಾನ ಶಿಕ್ಷಣ, ಮುಕ್ತ ಮನಸ್ಸಿನ ರಚನೆಗಾಗಿ ಶಿಕ್ಷಣವಿರಬೇಕು.

ಶಿಕ್ಷಕ ಒಬ್ಬ ಶಿಲ್ಪಿ ಇದ್ದ ಹಾಗೆ. ಅವರಿಗೆ ಕೊಟ್ಟಿರುವ ವಿದ್ಯಾರ್ಥಿ ಎಂಬ ಕಲ್ಲನ್ನು, ಅಚ್ಚುಕಟ್ಟಾಗಿ ಕೆತ್ತಿ, ಅದರಿಂದ ಒಂದು ಹೊಸ ರೂಪವನ್ನು ಹೊರತಂದಾಗ ಮಾತ್ರ ಅವರ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಆದ್ದರಿಂದ ಅವರ ವಿದ್ಯಾರ್ಜನೆ ನೀಡುವ ಮಕ್ಕಳಿಗೆ ಪ್ರೀತಿತೋರಿ ಅವರನ್ನು ಗೌರವಿಸುವುದು ಒಳಿತಾಗಿದೆ. ಹೀಗೆ ಮುಂದೊಂದು ದಿನ ಅವರು ನವ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುವಾಗ ಅವರ ಮನಸ್ಸಿನಲ್ಲಿ “ಇವನು ನನ್ನ ವಿದ್ಯಾರ್ಥಿ” ಎಂಬ ಸಾರ್ಥಕತೆಯ ಮನೋಭಾವನೆ ಅವರ ಮನಗಳಲ್ಲಿ ಮೂಡಿದರೆ ಅದು ಅವರ ಶಿಕ್ಷಕ ವೃತ್ತಿಯ ಸಾರ್ಥಕತೆಯಾಗುತ್ತದೆ ವಿನಹಾ.ದೊಡ್ಡ ದೊಡ್ದ ಪ್ರಶಸ್ತಿ ಪಡೆಯುದರಿಂದಲ್ಲ. ಪ್ರತಿ ಶಿಕ್ಷಕರನ್ನು ಗೌರವಿಸುವುದು ಪ್ರತೀ ವಿದ್ಯಾರ್ಥಿಯ ಆದ್ಯ ಕರ್ತವ್ಯ : ಗುರುಗಳಿಲ್ಲದೆ ನಮ್ಮ ಜೀವನವನ್ನು ಊಹಿಸಿಕೊಳ್ಳುವುದೂ ಅಸಾಧ್ಯವಾಗಿದೆ. ಇಂದು ಶಿಕ್ಷಕರ ದಿನ ನಾವೆಲ್ಲರೂ, ನಮ್ಮ ಜೀವನದ ಮೇಲೆ ಒಳ್ಳೆಯ ಪ್ರಭಾವ ಬೀರಿದ ಶಿಕ್ಷಕರನ್ನು ಜ್ಞಾಪಿಸಿಕೊಳ್ಳುತ್ತಾ, ಇಂದು ಮಾತ್ರವಲ್ಲ ಪ್ರತಿದಿನ ವಂದನೆಗಳನ್ನು ಸಲ್ಲಿಸೋಣ. ಅವರಿಗೆ ಚಿರಋಣಿಗಳಾಗಿರೋಣ. ಗುರು ಎಂದರೆ ಶಾಲಾ ಕಾಲೇಜುಗಳಲ್ಲಿ ಕಲಿಸುವ ಗುರು ಮಾತ್ರವಲ್ಲದೆ, ನಮ್ಮ ಜೀವನಕ್ಕೆ ದಾರಿ ತೋರಿದ ಜೀವನಕ್ಕೆ ಆಧಾರದ ವಾದ ವ್ಯಕ್ತಿಗಳು ಕೂಡ ಗುರು ಸಮಾನರು. “ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ದವೆ ಗುರು”. ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಷಯಗಳು. ಗುರುವೇ ನಮೊ ನಮ: ✍ ರಾಘವೇಂದ್ರ ಪ್ರಭು, ಕವಾ೯ಲು ಸಂ.ಕಾಯ೯ದಶಿ೯ ಕಸಾಪ ಉಡುಪಿ