ಶಿರ್ವ ಸಂತಮೇರಿ ಕಾಲೇಜು - ಕೊಂಕಣಿ ಅಧ್ಯಯನ ಪೀಠದಿಂದ ವಿಶೇಷ ಉಪನ್ಯಾಸ
Posted On:
15-09-2023 09:49PM
ಶಿರ್ವ : ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ವತಿಯಿಂದ ಸಂತ ಮೇರಿ ಕಾಲೇಜಿನ ಸಹಯೋಗದಲ್ಲಿ " ಕೊಂಕಣಿ ಮಾತೃಭಾಷೆ -ಒಂದು ಚಿಂತನೆ" ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತರು ಹಾಗೂ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಬಿ. ಪುಂಡಲೀಕ ಮರಾಠೆಯವರು ಕೊಂಕಣಿ ಭಾಷೆಯ ಪರಂಪರೆ, ಬೆಳವಣಿಗೆ ಹಾಗೂ ಅದರ ಪ್ರಸ್ತುತ ವೈಭವವನ್ನು ವಿವರಿಸಿದರು. ಕೊಂಕಣಿ ಒಂದು ರಾಷ್ಟ್ರಭಾಷೆಯಾಗಿದ್ದು, ಶಾಲೆಗಳಲ್ಲಿಯೂ ತೃತೀಯ ಭಾಷೆಯಾಗಿ ಕಲಿಯುವ ಅವಕಾಶ ಇದೆ. ಬದಲಾಗುತ್ತಿರುವ ಸನ್ನಿವೇಶಗಳಲ್ಲಿ ಕೊಂಕಣಿ ಭಾಷೆಯಲ್ಲೂ ಅವಕಾಶಗಳು ಉಜ್ವಲವಾಗಿದ್ದು, ಕೊಂಕಣಿ ಭಾಷಿಕರು ಹಾಗೂ ಆಸಕ್ತರು ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕೊಂಕಣಿ ಅಧ್ಯಯನ ಪೀಠದ ಸಂಯೋಜಕರಾದ ಡಾ. ಜಯವಂತ ನಾಯಕ್‌ರವರು ಮಾತನಾಡಿ ಕೊಂಕಣಿ ಭಾಷೆಯು ರಾಜ್ಯಭಾಷೆಯಾಗಿ ಬೆಳೆದು ಬಂದ ದಾರಿಯನ್ನು ವಿವರಿಸಿದರು. ಸಂವಿಧಾನದ ಎಂಟನೇ ಪರಚ್ಛೇದದಲ್ಲಿ ಸೇರ್ಪಡೆಗೊಂಡ ನಂತರ ಕೊಂಕಣಿ ಭಾಷೆಯ ಕ್ಷಿಪ್ರ ಬೆಳವಣಿಗೆಯನ್ನು ವಿವರಿಸಿದರು. ಭಾಷೆಯು ಜನರನ್ನು ಒಗ್ಗೂಡಿಸುವ ಜೊತೆಗೆ ಅನೇಕ ಸಂಬಂಧಗಳನ್ನು ಬೆಸೆಯುತ್ತದೆ. ಕೊಂಕಣಿ ಭಾಷೆಯು ತನ್ನದೇ ಆದ ಅಸ್ಮಿತತೆಯನ್ನು ಹೊಂದಿದ್ದು ಜಾತಿ, ಧರ್ಮ ಹಾಗೂ ಪ್ರಾಂತ್ಯಗಳ ಬೇಧವಿಲ್ಲದೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಅಪೂರ್ವ ಕೊಡುಗೆಗಳನ್ನು ನೀಡಿದೆ ಅಲ್ಲದೆ ಎರಡು ಜ್ಞಾನಪೀಠ ಗೌರವವನ್ನು ಪಡೆದಿದೆ ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆರಾಲ್ಡ್ ಐವನ್ ಮೊನಿಸ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಪ್ರೀತಿಸಿ ಅದನ್ನು ಬಳಸಿದಾಗ ಭಾಷೆಯ ಉಳಿವು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕರಾದ ಪೂರ್ಣಿಮಾ ಜಿ.ಎ., ಶರ್ಮಿಳಾ, ಪ್ರೇಮನಾಥ, ರಾಘವೇಂದ್ರ ಹೆಗ್ಡೆ ಮತ್ತು ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಮೆಲ್ವಿನ್ ಕ್ಯಾಸ್ತೆಲಿನೊ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕರಾದ ಜಗದೀಶ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೇಯಾ ನಾಯಕ್ ಕಾರ್ಯಕ್ರಮ ನಿರೂಪಿಸಿ, ಶಾನಿಯಾ ತಂಡದವರು ಪ್ರಾರ್ಥಿಸಿದರು. ವೆನೆಸಿಯಾ ಕ್ವಾಡ್ರಸ್ ವಂದಿಸಿದರು.