ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಕನ್ನಡ ಬಳಕೆ, ಅಭಿರುಚಿಯನ್ನು ಬೆಳೆಸುವ ಕಾರ್ಯ ಕನ್ನಡ ಭಾಷೆ ಕಲಿಸುವ ಶಿಕ್ಷಕರಿಂದ ಆಗಲಿ - ನೀಲಾವರ ಸುರೇಂದ್ರ ಅಡಿಗ

Posted On: 16-09-2023 12:31PM

ಕಾಪು : ಬೋಧಿಸುವ ಭಾಷೆಗೆ ನ್ಯಾಯ ಒದಗಿಸುವ ಕಾರ್ಯ ಶಿಕ್ಷಕರು ಮಾಡಬೇಕಾಗಿದೆ. ಕನ್ನಡ ಭಾಷೆಯ ಮೇಲೆ ಆಂಗ್ಲ ಭಾಷೆಯ ಪ್ರಭಾವ ಅಷ್ಟೇನು ಪ್ರಭಾವ ಬೀರದು. ಕನ್ನಡ ಎಲ್ಲೆಲ್ಲೂ ಅದರದೇ ಆದ ಮಹತ್ವ ಹೊಂದಿದೆ. ಪದವಿಯಲ್ಲಿ ಕಲಾ ವಿಷಯದಲ್ಲಿ ಕನ್ನಡ ಭಾಷೆಯಲ್ಲಿ ಅಭ್ಯಸಿಸುವವರ ಸಂಖ್ಯೆಗೆ ಕೊರತೆಯಿಲ್ಲ. ಕನ್ನಡ ಬಳಕೆ ಮತ್ತು ಅಭಿರುಚಿಯನ್ನು ಬೆಳೆಸುವ ಕಾರ್ಯ ಕನ್ನಡ ಭಾಷೆ ಕಲಿಸುವ ಶಿಕ್ಷಕರಿಂದ ಆಗಲಿ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕ ವತಿಯಿಂದ ಕಾಪು ತಾಲೂಕು ವ್ಯಾಪ್ತಿಯ ಪಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಕನ್ನಡ ಭಾಷಾ ಶಿಕ್ಷಕರು, ಉಪನ್ಯಾಸಕರಿಗೆ ವಿದ್ಯಾರ್ಥಿಗಳಲ್ಲಿ ಕನ್ನಡ ಕಲಿಕೆ, ಶುದ್ಧ ಕನ್ನಡದ ಬಳಕೆ ಮತ್ತು ಕನ್ನಡ ನಾಡಿನ ಕಲೆ, ಸಾಹಿತ್ಯದ ಅಭಿರುಚಿ ಬೆಳೆಸುವ ಕುರಿತು ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಶನಿವಾರ ಜರಗಿದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಗಾವ್ಕಂಕರ್ ಮಾತನಾಡಿ ಹೆಚ್ಚು ಭಾಷೆ ಕಲಿತಾಗ ತಿಳುವಳಿಕೆ ಮಟ್ಟ ಹೆಚ್ಚು ಎಂದು ಕಲಿತು ಅದರ ಪರಿಣಾಮ ಭಾಷೆ ಸಂಮಿಶ್ರವಾಗುತ್ತಿದೆ. ಕಾರ್ಯಾಗಾರದ ಮೂಲಕ ಮತ್ತಷ್ಟು ಜ್ಞಾನ ತಿಳಿಯಲು ಸಾಧ್ಯ ಎಂದರು.

ಉಪನ್ಯಾಸಕಿ ಪಜ್ಞಾ ಮಾರ್ಪಳ್ಳಿ ದಿಕ್ಸೂಚಿ ಭಾಷಣ ಮಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ರಾಂತ ಪತ್ರಕರ್ತ ಎಸ್‌.ನಿತ್ಯಾನಂದ ಪಡ್ರೆ ಹಾಗೂ ಶಿಕ್ಷಕ ರಾಘವೇಂದ್ರ ರಾವ್‌ ಕಟಪಾಡಿ ಭಾಗವಹಿಸಿ ವಿದ್ಯಾರ್ಥಿಗಳಲ್ಲಿ ಕನ್ನಡ ಕಲಿಕೆ, ಶುದ್ಧ ಕನ್ನಡದ ಬಳಕೆ ಮತ್ತು ಕನ್ನಡ ನಾಡಿನ ಕಲೆ, ಸಾಹಿತ್ಯದ ಅಭಿರುಚಿ ಬೆಳೆಸುವ ಕುರಿತು ತರಬೇತಿ ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಘಟಕದ ಪುಂಡಲೀಕ ಮರಾಠೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಶಂಕರ್, ಕಾಪು ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ಸಂಘದ ಸಂಯೋಜಕರಾದ ದೀಪಿಕಾ ಸುವರ್ಣ, ಕಾರ್ಯದರ್ಶಿಗಳಾದ ಅಶ್ವಿನ್ ಲಾರೆನ್ಸ್, ನೀಲಾನಂದ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್ ಸ್ವಾಗತಿಸಿದರು. ಕಾರ್ಯದರ್ಶಿ ನೀಲಾನಂದ ನಾಯಕ್ ನಿರೂಪಿಸಿದರು. ಅಶ್ವಿನ್ ಲಾರೆನ್ಸ್ ವಂದಿಸಿದರು.