ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಿ.ಎಂ ವಿಶ್ವಕರ್ಮ ಯೋಜನೆ : ವಿಶ್ವಕರ್ಮ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲು ಆನೆಗುಂದಿ ಪ್ರತಿಷ್ಠಾನದಿಂದ ಪ್ರಧಾನ ಮಂತ್ರಿಗೆ ಮನವಿ

Posted On: 16-09-2023 03:57PM

ಪಡುಕುತ್ಯಾರು : ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಪಂಚ ಕುಲವೃತ್ತಿ ನಡೆಸುತ್ತಿರುವ ವಿಶ್ವಕರ್ಮ ಸಮುದಾಯಕ್ಕೆ ಸೂಕ್ತ ಪರಿಗಣನೆಯೊಂದಿಗೆ ಅರ್ಹ ಪ್ರಾತಿನಿಧ್ಯ ನೀಡಬೇಕೆಂದು ಪಡುಕುತ್ಯಾರಿನ ಕಟಪಾಡಿ ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದೆ. ಪ್ರಧಾನ ಮಂತ್ರಿಯವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಘೋಷಿಸಿದ ಪಿ.ಎಂ ವಿಶ್ವಕರ್ಮ ಯೋಜನೆಯು ಸೆ.೧೭ರ ವಿಶ್ವಕರ್ಮ ಜಯಂತಿಯಂದು ದೇಶದ ೭೦ ಕೇಂದ್ರಗಳಲ್ಲಿ ಉದ್ಘಾಟನೆಗೊಳ್ಳುತ್ತಿದೆ.

ಈ ಸಂದರ್ಭದಲ್ಲಿ ವಿಶ್ವಕರ್ಮರ ಕುಲಗುರುಗಳಾದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆಶಯದಂತೆ ಪರಂಪರಾಗತ ಸಮಾಜದ ಪಂಚಕುಲಸುಬುಗಳಿಗೆ ಯೋಜನೆಯ ಜ್ಯಾರಿಯಲ್ಲಿ ಸೂಕ್ತ ಪ್ರಾತಿನಿಧ್ಯ ಹಾಗೂ ಮಹಾಸಂಸ್ಥಾನದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಬೇಕೆಂದು ಪ್ರಧಾನ ಮಂತ್ರಿಯವರಿಗೆ ಮನವಿ ನೀಡಲಾಗಿದೆ. ವಿಶ್ವಕರ್ಮ ಮಹೋತ್ಸವದ ದಿನ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ವಿಶೇಷವಾಗಿ ಹಿಂದುಳಿದ ಸಮುದಾಯಗಳಿಗೆ ಪ್ರಯೋಜನವಾಗುವ ಪಿ.ಎಂ ವಿಶ್ವಕರ್ಮ ಯೋಜನೆಯನ್ನು ಜ್ಯಾರಿಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಮಸ್ತ ವಿಶ್ವಕರ್ಮ ಸಮಾಜದ ಅಭಿನಂದನೆಯನ್ನು ಹಾಗೂ ಕೃತಜ್ಞತೆಯನ್ನು ಅನೆಗುಂದಿಶ್ರೀಗಳವರು ಸಲ್ಲಿಸಿದ್ದಾರೆ.

ಪ್ರಸ್ತುತ ಯೋಜನೆಯಲ್ಲಿ ವಿಶ್ವಕರ್ಮ ಪಂಚಕುಲ ವೃತ್ತಿಗಳಾದ ಬಡಗಿ, ಕಮ್ಮಾರ, ಅಕ್ಕಸಾಲಿಗ, ಶಿಲಾ ಶಿಲ್ಪಿ, ಎರಕಶಿಲ್ಪಗಳು ಹಾಗೂ ಇತರ ೧೩ ಕರಕುಶಲ ವೃತ್ತಿಗಳಾದ ದೋಣಿ ತಯಾರಕ, ರಕ್ಷ ಕವಚ ತಯಾರಕ, ಸುತ್ತಿಗೆ ಇತರೆ ಸಾಮಾಗ್ರಿ ತಯಾರಕ,ಚಮ್ಮಾರ, ಗಾರೆ ಮೇಸ್ತ್ರಿ, ಬುಟ್ಟಿ, ಚಾಪೆ, ಹಿಡಿಸೂಡಿ ತಯಾರಕ, ಸೆಣಬು ನೇಕಾರರು, ಗೊಂಬೆ ಮತ್ತು ಆಟಿಕೆ ತಯಾರಕ, ಕ್ಷೌರಿಕ, ಮಾಲೆ ತಯಾರಕ, ದೋಬಿ ಮತ್ತು ಮಡಿವಾಳ,ಟೈಲರ್‌, ಮೀನಿನ ಬಲೆ ತಯಾರಕ ಹೀಗೆ ಒಟ್ಟು ೧೮ ವಿಭಾಗಗಳಿಗೆ ಒಟ್ಟು ರೂ ೧೩,೦೦೦ ಕೋಟಿಯ ಬೃಹತ್‌ ಯೋಜನೆ ಯನ್ನು ಪಿ.ಎಂ.ವಿಶ್ವಕರ್ಮ ಎಂಬ ಯೋಜನೆಯಲ್ಲೇ ಅಳವಡಿಸಲಾಗಿದೆ. ವೇದ ಪುರಾಣಗಳಲ್ಲಿರುವ ಸಕಲ ವಸ್ತುಗಳ ನಿರ್ಮಾತೃ ವಿಶ್ವಕರ್ಮ, ವಿಶ್ವದಲ್ಲಿರುವ ಎಲ್ಲಾ ನಿರ್ಮಾಣಗಳ ಮೂಲಕರ್ತೃ ವಿಶ್ವಕರ್ಮ, ಹಾಗೆಯೇ ಸಮಾಜದ ದೇವರು ಪಂಚ ವೃತ್ತಿಗಳು, ಕುಲ ಗುರು ಪರಂಪರೆ ಸೇರಿದಂತೆ ವಿವಿಧ ವಿಷಯಗಳನ್ನು ಮನವಿಯಲ್ಲಿ ವಿವರಿಸಲಾಗಿದೆ. ಹಾಗೆಯೇ ಭಾರತದಲ್ಲಿರುವ ಸುಪ್ರಸಿದ್ಧ ಪ್ರವಾಸಿ ತಾಣಗಳ ವಿಶ್ವಕರ್ಮರ ನಿರ್ಮಾಣಗಳು ಪ್ರಮುಖವಾಗಿ ಹಂಪಿ ವಿಜಯನಗರ, ಮಧುರೆ ಮೀನಾಕ್ಷಿ, ದ್ವಾರಕ, ಪುರಿ ಜಗನ್ನಾಥ ದೇವಳ, ಬೇಲೂರು, ಹಳೆಬೀಡು, ಕೈಲಾಸನಾಥ, ದೇವಾಲಯಗಳು . ಬೇಲೂರು, ಹಳೆಬೀಡು ಸೇರಿದಂತೆ ಹಲವು ದೇವಾಲಯ ನಿರ್ಮಾಣ ಮಾಡಿದ ಜಕ್ಕಣಾಚಾರ್ಯ, ಕೊನಾರ್ಕ ದೇವಸ್ಥಾನದ ಶಿಲ್ಪಿ ಮೊಹಾಪಾತ್ರ ಕುಟುಂಬದವರು, ಸೋಮನಾಥ ದೇವಸ್ಥಾನದ ಅಕ್ಷರಧಾಮ ನಿರ್ಮಾಣದ ಸೋಂಪುರ ಕುಟುಂಬ, ಅಯೋಧ್ಯಾ ರಾಮಮಂದಿರ ಶಿಲ್ಪಿ ಚಂದ್ರಕಾಂತ ಬಾಯಿ ಸೋಂಪುರ, ಆಯೋಧ್ಯಾ ರಥ ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ, ಸರ್ದಾರ್‌ ಪಟೇಲ್ ರ ಮೂರ್ತಿ ಶಿಲ್ಪಿ ರಾಮ್‌ ವಿ ಸುತಾರ್‌, ಅಹಿಂಸಾ ಸ್ಥಲ್‌ ನ ಮಹಾವೀರ ಮೂರ್ತಿ ಶಿಲ್ಪಿ ಶಾಮರಾಯ ಆಚಾರ್ಯ ಕಾರ್ಕಳ, ವಿವೇಕಾನಂದ ರಾಕ್‌ ಶಿಲ್ಪಿ ಸ್ಥಪತಿ ಎಸ್‌ ಕೆ ಆಚಾರ್ಯ, ಕರ್ನಾಟಕ ಮತ್ತು ತಮಿಳ್ನಾಡು ದೇವಳಗಳ ಸ್ಥಪತಿ ದಕ್ಷಿಣಾ ಮೂರ್ತಿ ಮುಂತಾದ ಪ್ರಸಿದ್ಧ ಶಿಲ್ಪಿಗಳ ಪಟ್ಟಿ ಬೆಳೆಯುತ್ತದೆ, ಇವರೆಲ್ಲರೂ ವಿಶ್ವಕರ್ಮ ಸಮಾಜದವರೇ ಆಗಿದ್ದಾರೆ. ಭಾರತದ ಕೇಂದ್ರ ಮತ್ತು ರಾಜ್ಯ ಪ್ರವಾಸೋಧ್ಯಮ ಇಲಾಖೆಗೆ ದೇಶ ವಿದೇಶಗಳಿಂದ ಸಂದಾಯವಾಗುತ್ತಿರುವ ಪ್ರಮುಖ ಆರ್ಥಿಕ ಸಂಪನ್ಮೂಲಕ್ಕೆ ಕಾರಣ ಇಲ್ಲಿನ ಅದ್ಭುತ ಶಿಲ್ಪದೇವಾಲಯಗಳು, ವಿವಿಧ ನಿರ್ಮಾಣಗಳು. ಇವುಗಳ ಸೌಂದರ್ಯ ವೀಕ್ಷಿಸಿ ಆಸ್ವಾದಿಸಲು ಬರುವ ದೇಶ ಮತ್ತು ವಿದೇಶಗಳ ದೊಡ್ಡ ಮಟ್ಟದ ಪ್ರವಾಸಿಗರಿದ್ದಾರೆ.

ಈ ಮೂಲಕ ದೇಶದ ಖಜಾನೆಗೆ ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ವಾರ್ಷಿಕ ವರದಿ ಪ್ರಕಾರ ಭಾರತ ದೇಶದ ಸಂರಕ್ಷಿತ ಸ್ಮಾರಕಗಳನ್ನು ವೀಕ್ಷಿಸುವುದಕ್ಕೆ 2022 - 2023 ರ ಕಾಲಘಟ್ಟದಲ್ಲಿ 6.19 ಮಿಲಿಯನ್ ವಿದೇಶಿ ಪ್ರವಾಸಿಗರು ಬಂದಿದ್ದು, ಇವರಿಂದ ಒಟ್ಟಾರೆ 252. 82 ಕೋಟಿ ರೂಪಾಯಿ ಹಣವನ್ನು ಪ್ರವೇಶ ಟಿಕೆಟ್ ಮೂಲಕ ಸಂಗ್ರಹಿಸಲಾಗಿದೆ. ಇಂಡಿಯಾ ಟೂರಿಸಂ ಅಟ್ ಎ ಗ್ಲಾನ್ಸ್ ಅಂಕಿ ಅಂಶಗಳ ಪ್ರಕಾರ ಅಂದಾಜು 2022-23ರ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವಾಲಯ 1, 34, 543 ಕೋಟಿ ರೂಪಾಯಿ ವಿದೇಶಿ ವಿನಿಮಯ ಗಳಿಸಿದೆ. ಹೀಗೆ ಒಟ್ಟಿನಲ್ಲಿ ಎಲ್ಲ ಬಗೆಯ ಶಿಲ್ಪಗಳು ಅವುಗಳ ಪಾರಂಪರಿಕ ಹಿನ್ನೆಲೆ, ವಿಶ್ವಕರ್ಮ ಕುಲವೃತ್ತಿ ಅವುಗಳ ಮಹತ್ವವನ್ನು ಸೇರಿದ ಎಲ್ಲಾ ವಿವರಗಳನ್ನು ಪ್ರಧಾನ ಮಂತ್ರಿಗಳವರು ಗಮನಹರಿಸಿ ಪ್ರಸ್ತುತ ಪಿ.ಎಂ. ವಿಶ್ವಕರ್ಮ ಯೋಜನೆಯಲ್ಲಿ ವಿಶ್ವಕರ್ಮ ಸಮಾಜದ ಪಂಚವೃತ್ತಿಗಳಾದ ಬಡಗಿ , ಕಮ್ಮಾರ, ಅಕ್ಕಸಾಲಿಗ, ಶಿಲಾ ಶಿಲ್ಪಿ, ಎರಕಶಿಲ್ಪ ವೃತ್ತಿದಾರರಿಗೆ ಅನುಪಾತಿಕವಾಗಿ ಇಲ್ಲವೇ ಜನಸಂಖ್ಯಾ ಪ್ರಣಾಮವನ್ನು ಅನುಸರಿಸಿ ಅರ್ಹ ಪಾಲಿನ ವಿಶೇಷ ವಿಭಾಗದ ಪರಿಗಣನೆ ನೀಡಬೇಕೆಂದು ಪ್ರಸ್ತುತ ಮನವಿಯಲ್ಲಿ ಒತ್ತಾಯಿಸಲಾಗಿದೆ. ವಿಶ್ವಕರ್ಮ ಸಮಾಜದ ಕುಲಗುರು ಪೀಠವಾದ ಪಡುಕುತ್ಯಾರಿನ ಕಟಪಾಡಿ ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠವು ಸಮಾಜದ ಅಭಿವೃದ್ದಿಗೆ ನಡೆಸಲಾಗುವ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕ್ರತಿಕ ಮತ್ತು ಆರ್ಥಿಕ ಸೇರಿದ ಸಮಗ್ರ ಅಭಿವೃದ್ಧಿ ಯೋಜನೆಗಗಳ ಬಗ್ಗೆ ಹಾಗೂ ಮುಂದಿನ ನಿರ್ಮಾಣ ಯೋಜನೆಗಳ ವಿವರಣೆಗಳನ್ನು ನೀಡಿದಲ್ಲದೆ ಮುಂದಿನ ಬಜೆಟ್‌ ನಲ್ಲಿ ವಿಶೇಷ ನೆರವಿಗಾಗಿಯೂ ಮನವಿಯಲ್ಲಿ ಬೇಡಿಕೆ ಸಲ್ಲಿಸಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಆನೆಗುಂದಿ ಪ್ರತಿಷ್ಠಾನದ ನೇತೃತ್ವದಲ್ಲಿ ಸಮಾಜದ ಮುಖಂಡರುಗಳು ಸನ್ಮಾನ್ಯ ಪ್ರಧಾನ ಮಂತ್ರಿ ಗಳವರನ್ನು ಸಂದರ್ಶಿಸಿ ವಿಶ್ವಕರ್ಮ ಸಮಾಜದ ಸ್ಥಿತಿಗತಿ ಮತ್ತು ಅಭಿವೃದ್ಧಿ ಯೋಜನೆಗಳನ್ನು ವಿವರಿಸಲು ತೀರ್ಮಾನಿಸಲಾಗಿದೆ ಎಂದು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಹಾಗೂ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ.ಬಿ ಆಚಾರ್‌ ಕಂಬಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.