ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಗೌರಿ-ಗಣೇಶ : ವಿಲಕ್ಷಣ ತಾಯಿ-ಮಗ

Posted On: 17-09-2023 12:19PM

ಸ್ತ್ರೀ ತನ್ನ ಬಯಕೆಯನ್ನು ಪುರುಷ ಸಂಬಂಧವಿಲ್ಲದೆ ನೆರವೇರಿಸಿಕೊಳ್ಳುತ್ತಾಳೆ, ಮಗುವನ್ನು ಪಡೆಯುತ್ತಾಳೆ. ಇದನ್ನು ಗಮನಿಸಿದ ಪುರುಷ ಸಿಟ್ಟಾಗುತ್ತಾನೆ,ಅಸೂಯೆಗೊಳ್ಳುತ್ತಾನೆ, ಚಿತ್ತಸ್ವಾಸ್ಥ್ಯ ಕಳೆದುಕೊಳ್ಳುತ್ತಾನೆ. ಜನಿಸಿದ ಮಗು - ಪುರುಷ ಸಂಘರ್ಷವೇರ್ಪಡುತ್ತದೆ. ಪ್ರಕರಣ ಸುಖಾಂತ್ಯವಾಗುತ್ತದೆ. ಸ್ತ್ರೀಯ ನಿರ್ಬಂಧಕ್ಕೆ ಪುರುಷನು ಮಗುವನ್ನು ಒಪ್ಪಿಕೊಳ್ಳುತ್ತಾನೆ. ಇದು ಅನಿವಾರ್ಯವಾಗಿಯಲ್ಲ, ಪ್ರೀತಿಪೂರ್ವಕವಾಗಿ. ಗೌರಿ-ಗಣೇಶ ಇವರ ತಾಯಿ-ಮಗ ಸಂಬಂಧ ಇದು ಸ್ವಾರಸ್ಯಕರವಾದುದು, ಅಪ್ರಾಕೃತವಾದುದು. ಅಂತೂ ದಂಪತಿಗಳ ಸಹಜ ಸಂಬಂಧದಿಂದ ಒದಗಿ ಬಂದವನಲ್ಲ 'ಗಣೇಶ'. ಪ್ರಕೃತಿ - ಪುರುಷ ಸಮಾಗಮವಿಲ್ಲದೆಯೂ ಪ್ರಕೃತಿಯೊಂದಿಗೆ ಎಷ್ಟು ಆಳವಾದ ದೇಹ ಸಂಬಂಧದ ಅವಿನಾಭಾವವಿರುತ್ತದೊ ಅಷ್ಟೇ ಪ್ರಮಾಣದ ಭಾವ ತೀವ್ರತೆಯನ್ನು ಅಥವಾ ಅನುರಾಗವನ್ನು ಪುರುಷನೊಂದಿಗೆ ಹೊಂದಿ 'ಗಣನಾಥ'ನಾದದ್ದು, ವಿಘ್ನೇಶನಾದದ್ದು ಆದಿಪೂಜಿತನಾದದ್ದು. ನಿಗ್ರಹಿಲ್ಪಟ್ಟರೂ ಶಿವನ ಪ್ರಸನ್ನತೆಗೆ ಪ್ರಕೃತಿ ಕಾರಣವಾಗಿ ಗಣಪ ಏರಿದ ಎತ್ತರ, ಪಡೆದ ಸ್ಥಾನಮಾನ ಪುರಾಣಗಳೇ ವಿವರಿಸುವಂತೆ ಅದು ವಿಸ್ತಾರವಾದುದು.ಎಷ್ಟು ಮುನಿದರೂ ಕೊನೆಗೊಮ್ಮೆ ಪ್ರಕೃತಿಯನ್ನು ಪುರುಷ ಸಮೀಪಿಸಲೇ ಬೇಕಾಗುತ್ತದೆ. ಅನುಗ್ರಹಿಸುವುದು ಅನಿವಾರ್ಯವಾಗುತ್ತದೆ. ಈ ಪ್ರಪಂಚ ನಿಯಮ ಗಣೇಶನ ಜನನದಲ್ಲಿ ಸಹಜವಾಗಿ ಪಡಿಮೂಡಿದೆ.

ಪ್ರಕೃತಿಯ ನಿರೀಕ್ಷೆ ಮತ್ತು ಸಿದ್ಧತೆಯ ಸಂಕೇತವಾಗಿ ಗೌರಿಯ ಮೈಯ ಮಣ್ಣನ್ನು ಆಕೆ ತೆಗೆಯುವುದು ಮತ್ತು ಸ್ನಾನಕ್ಕೆ ಹೊರಡುವುದು. ಈ ನಡುವೆ ಮೈಯ ಮಣ್ಣಿಗೆ ರೂಪು ನೀಡಿ - ಜೀವ ಕೊಡುವುದು ಮತ್ತೆ ಪರಿಶುದ್ಧಳಾದುದನ್ನು ದೃಢೀಕರಿಸುತ್ತದೆ. ಪುರುಷ ಪ್ರವೇಶ ಪ್ರಕೃತಿಯ ನಿರೀಕ್ಷೆಯಂತೆಯೇ ಆದರೂ ಕಾಲವಲ್ಲದ ಕಾಲದಲ್ಲಿ ಆಗುತ್ತದೆ. ಸಮಾಗಮಕ್ಕೆ ತೊಡಕಾಗುವ ಮೈಯ ಮಣ್ಣು ಪ್ರತಿಮೆಯಾಗಿ ರೂಪು ಪಡೆದು ತಡೆಯುತ್ತದೆ. ಈ ಘಟನೆ ಭೂಮಿ-ಆಕಾಶ ಸಂಬಂಧವನ್ನು ನಿರೂಪಿಸುತ್ತಾ ವಿಶಾಲತೆಯನ್ನು ಒದಗಿಸಿ ಕೃಷಿ ಸಂಸ್ಕೃತಿಯ ಹುಟ್ಟು ಮತ್ತು ಬೆಳವಣಿಗೆಯನ್ನು ಮತ್ತು ಕೃಷಿ ಆಧರಿತ ಮಾನವ ಬದುಕನ್ನು ತೆರೆದಿಡುತ್ತದೆ. ಪ್ರಕೃತಿ-ಮಣ್ಣಿನೊಂದಿಗೆ ಗಾಢವಾದ ಸ್ನೇಹ ಮಣ್ಣಿನಮಗ ಮಹಾಕಾಯನಾದ ಮಹಾಗಣಪತಿಯ ಬಿಂಬ ಕಲ್ಪನೆಯಲ್ಲಿ ಸ್ಪಷ್ಟವಾಗುತ್ತದೆ. ಗೌರಿಗೆ ಮಗನಾದರೂ ರುದ್ರ ಪುತ್ರನಾದರೂ ಗಣಪ 'ಮಣ್ಣಿನ ಮಗನೆ'. ಅದು ಅಂದಿಗೂ ಸರಿ,ಇಂದಿಗೂ ಪ್ರಸ್ತುತ. ಆದುದರಿಂದ ಈ ಮಣ್ಣಿನ ಮಕ್ಕಳಿಗೆ ಆತ ಪ್ರಿಯನಾಗುತ್ತಾನೆ, ಬಂಧುವಾಗುತ್ತಾನೆ.

ಮನುಷ್ಯ ಬೇಟೆಯಾಡಿ ಬದುಕುತ್ತಿದ್ದ ಕಾಲದಿಂದಲೂ ಅಡ್ಡಿ ಆತಂಕಗಳ, ಕಾರ್ಯಭಂಗಗಳ ಕುರಿತು ಆಲೋಚನೆ ಇತ್ತು. ಮುಂದೆ ಕೃಷಿ ಸಂಸ್ಕೃತಿ ತೊಡಗಿದಾಗ ಎಲ್ಲವೂ ನಿರಾತಂಕವಾಗಿ ನಡೆಯಬೇಕು. ಕೃಷಿ ಸಮೃದ್ಧಿ ಪರಿಪೂರ್ಣವಾಗಿ ಒದಗಬೇಕು ಎಂಬ ಆಸೆ ಇತ್ತು. ಎಲ್ಲಿ ಕೈಗೂಡುವುದಿಲ್ಲವೊ ಎಂಬ ಆತಂಕವಿತ್ತು. ಮುಂದೆ ನಾಗರಿಕತೆ ಬೆಳೆದಂತೆ ತನ್ನ ಬದುಕು ವಿಸ್ತೃತವಾಗಿ ಅನಾವರಣಗೊಂಡಾಗ ಬಾಳು ಸುಂದರ, ನಿರರ್ಗಳವಾಗಿರಬೇಕೆಂದು ಬಯಸಿದ ಮನುಷ್ಯ ವಿಘ್ನ ವಿಡ್ಡೂರಗಳು ಬಂದಾಗ ವಿಘ್ನದ ಕುರಿತು ಗಮನಹರಿಸಿದ ,ವಿಘ್ನ ನಿವಾರಕ ದೇವರೊಂದು ಅನಿವಾರ್ಯವಾಯಿತು. ಈಗ ಪ್ರಾಚೀನ - ಅರ್ವಾಚೀನಗಳನ್ನು ಬೆಸೆಯುತ್ತಾ ಗಣಪತಿ ಮತ್ತೆ ಸಾಕಾರಗೊಂಡ. ವಿಘ್ನ ನಿವಾರಕ (ಮೊದಲೇ ಶಿವನಿಂದ ಅನುಗ್ರಹಿತನಾದ)ಎಂದೆನಿಸಿಕೊಂಡ. ಜಾತಿ - ಮತ-ಪಂಥ-ಆಸ್ತಿಕ-ನಾಸ್ತಿಕ ಬೇಧವಿಲ್ಲದೆ ಬಹುಮಾನ್ಯನಾದ. ಏಕೆಂದರೆ ವಿಘ್ನ ಬರುವುದು ಸಹಜ ತಾನೆ? ವೈದಿಕವು ವಿನಾಯಕನ ಮೂಲವನ್ನು ಋಗ್ವೇದದಷ್ಟು ಪ್ರಾಚೀನತೆಗೆ ಒಯ್ಯುತ್ತದೆ. ವೈದಿಕ ವಿದ್ವಾಂಸರು 'ಗಣಾನಾಮ್ ಗಣಪತಿಮ್ ಹವಾಮಹೇ...'ಎಂಬ ಮಂತ್ರವನ್ನೂ ಆಧಾರವಾಗಿ ನೀಡುತ್ತಾರೆ.ಮುಂದಿನ ಪುರಾಣ ಮತ್ತು ಮಹಾಕಾವ್ಯಗಳು ಪ್ರಸ್ತುತ ನಾವು ಕಾಣುವ ಸ್ವರೂಪವನ್ನು ಗಜಾನನಿಗೆ ನೀಡಿದುವು. ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ ಅಂಶಗಳಿಗನುಸಾರವಾಗಿ ಗಣಪತಿಯ ಪರಿಕಲ್ಪನೆಗಳು, ರಹಸ್ಯ ಅರ್ಥಗಳು ರೂಪಾಂತರಗೊಂಡು ಋಗ್ವೇದದ ಗಣಪತಿ-ಬ್ರಹ್ಮಣಸ್ಪತಿಯು ಗಜವದನ, ಗಣೇಶ, ವಿಘ್ನೇಶ್ವರ ರೂಪವನ್ನು ಪಡೆದವು. ಋಗ್ವೇದದ ಗಣಪತಿ-ಬ್ರಹ್ಮಣಸ್ಪತಿಯು ವಾಚಸ್ಪತಿ-ಬ್ರಹ್ಮಸ್ಪತಿ ಆಗುವುದು. ಜ್ಞಾನದ ಸಂಕೇತವಾಗಿ ಸ್ಪಷ್ಟಗೊಂಡಿದ್ದು ಮೂರ್ತಿ ಲಕ್ಷಣಗಳನ್ನು ಹೊಂದಿ ಬಂಗಾರ, ಕೆಂಪು ಬಣ್ಣ ಹಾಗೂ ಆಯುಧಗಳನ್ನು ಪಡೆದನು. ಗಣ = ಗುಂಪು, ಇಂತಹ ಹಾಡುವವರ, ನರ್ತಿಸುವವರ ಗುಂಪಿನಲ್ಲಿ ಇರುವವನು ಎಂಬುದು ಸೇರಿಕೊಂಡ ಕಲ್ಪನೆ. ಋಗ್ವೇದದ ಇನ್ನೊಂದು ವಿಭಾಗದಲ್ಲಿ ಮರುತರು ಅಥವಾ 'ಮರುದ್ಗಣ'ಗಳೆಂದು ಉಲ್ಲೇಖಿಸಲ್ಪಡುವ ಶಕ್ತಿಗಳನ್ನು ರುದ್ರನ ಮಕ್ಕಳೆಂದು ಹೆಸರಿಸಲಾಗಿದ್ದು, ಮೇಲಿನ ಗುಣಧರ್ಮವನ್ನೇ ಆರೋಪಿಸಲಾಗಿದೆ. ಸಿದ್ಧಿ ಮತ್ತು ಬುದ್ಧಿಯರನ್ನು ಹೊಂದಿರುವ ಗಣಪತಿ ಪರಿಕಲ್ಪನೆಯು ಸಿದ್ಧಿ ಮತ್ತು ಬುದ್ಧಿಗಳಿಗೆ ಈತನು ಕಾರಕನೆಂಬುದನ್ನು ಪ್ರತಿಪಾದಿಸುತ್ತದೆ. ಜನಪ್ರಿಯವಾಗಿರುವ ಕತೆಗಳು ಗಜಮುಖ ರೂಪದ ಹಿನ್ನೆಲೆಯಲ್ಲಿವೆ. ಆನೆಮುಖವನ್ನು ಹೊಂದಿರುವ ಗಜಮುಖ ಶಬ್ದವನ್ನು (ಗಜಮುಖ = ಜಾನಪದ ಮೂಲದ್ದು, ಬೇಟೆ ಸಂಸ್ಕೃತಿಯಿಂದ ಬಂದದ್ದು) ತತ್ತ್ವಜ್ಞಾನಿಗಳು ವಿಶ್ವದ ಆದಿ, ಗತಿ, ಐಕ್ಯವನ್ನು ಸಾಂಕೇತಿಸುವ ವಿರಾಟ್ ಸ್ವರೂಪವನ್ನು ವ್ಯಾಖ್ಯಾನಿಸುತ್ತಾರೆ.

ಗಣಪತಿಯ ಆಯುಧಗಳಾದ ಪಾಶವನ್ನು ರಾಗ, ಅಂಕುಶವನ್ನು ಕ್ರೋಧವೆಂದು ಅರ್ಥೈಸಿರುವ ವಿದ್ವಾಂಸರು ರಾಗ ಮತ್ತು ಕ್ರೋಧಗಳ‌ ನಿರಂಕುಶ ನಿಯಂತ್ರಣದಿಂದ ಹೊರಬರಲು ಅವುಗಳನ್ನು ಧರಿಸಿರುವ ದೇವರೇ ಅನುಗ್ರಹಿಸಬೇಕೆಂದು ಅಭಿಪ್ರಾಯಪಡುತ್ತಾರೆ. ಈ ನಂಬಿಕೆ, ಶ್ರದ್ಧೆ ಭಗವದ್ಭಕ್ತರಲ್ಲಿದೆ. ಬೇಟೆ ಸಂಸ್ಕೃತಿಯಿಂದ ತೊಡಗಿದ ಮಾನವ ಬದುಕಿನ ವಿವಿಧ ಹಂತಗಳಲ್ಲಿ ಭಿನ್ನ ಪರಿಕಲ್ಪನೆ ಅನುಸಂಧಾನದೊಂದಿಗೆ ಸಾಗಿ ಬಂದ ಗಣಪತಿ ಆರಾಧನೆ ಈ ಕಾಲಘಟ್ಟದಲ್ಲಿ ಈ ವಿಧಾನದಲ್ಲಿ ವಿಜೃಂಭಿಸುತ್ತಿದೆ. ಈ ನಡುವೆ ಇತಿಹಾಸಕಾಲದಲ್ಲೂ ಗಣಪತಿ ಇಲಿ ರಹಿತನಾಗಿಯೇ ಮೊತ್ತಮೊದಲು ಕಾಣಸಿಗುತ್ತಾನೆ. ಬಳಿಕ ಇಲಿಯ ಸಾಂಗತ್ಯ ಸಿಗುತ್ತದೆ. ಕೃಷಿ ಸಂಸ್ಕೃತಿ ಬಹುವಾಗಿ ಪೂಜಿಸುತ್ತದೆ. ಆಕರ್ಷಕ ಪ್ರತಿಮಾ ಲಕ್ಷಣಗಳ ವೈವಿಧ್ಯಮಯ ಗಣಪತಿ ಶಿಲಾಶಿಲ್ಪಗಳಲ್ಲಿ-ದಾರುಶಿಲ್ಪಗಳಲ್ಲಿ ಲಭ್ಯ. ಸರ್ವಮಾನ್ಯ ಸುಮುಖ ಸರ್ವ ವಿಘ್ನಗಳನ್ನು ನಿವಾರಿಸಿ ಲೋಕಕ್ಕೆ ಮಂಗಳವನ್ನು ಅನುಗ್ರಹಿಸಲಿ. ಆಶಯ ಮರೆಯದೆ ಗಣಪತಿಯ ಆರಾಧನೆ ನಡೆಯಲಿ. ವೈಭವೀಕರಣ ಮಿತಿಮೀರಿ ಉಪಾಸನಾ ಸತ್ಯ ಮರೆಯದಿರೋಣ. ಲೇಖನ : ಕೆ.ಎಲ್.ಕುಂಡಂತಾಯ