ಪಡುಬಿದ್ರಿ : ಯುವವಾಹಿನಿ ಪಡುಬಿದ್ರಿ ಘಟಕದ ಪದಗ್ರಹಣ ಸಮಾರಂಭ
Posted On:
18-09-2023 05:08PM
ಪಡುಬಿದ್ರಿ : ವ್ಯಕ್ತಿಯೊಬ್ಬ ತನ್ನ ದುರ್ಗುಣಗಳನ್ನು ಬದಲಾಯಿಸಿಕೊಂಡು ಸತ್ಪ್ರಜೆಯಾಗಿ ಬಾಳಿದರೆ ಸಮಾಜದ ಪರಿವರ್ತನೆ ಸಾಧ್ಯ. ಆ ಪರಿವರ್ತನೆಯ ಪಥವನ್ನು ಯುವವಾಹಿನಿಯ ಪ್ರತಿಜ್ಞಾ ವಿಧಿಯಲ್ಲಿ ಸ್ಪಷ್ಟವಾಗಿ ಕಾಣಬಹುದು ಎಂದು ಬೈಂದೂರು ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹರೀಶ್ ಕೋಟ್ಯಾನ್ ಹೇಳಿದರು. ಅವರು ಯುವವಾಹಿನಿ ಪಡುಬಿದ್ರಿ ಘಟಕದ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾರಂಭವನ್ನು ಉದ್ಘಾಟಿಸಿದ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಅವರು ಅವಿಭಜಿತ ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದಿರುವ ಯುವವಾಹಿನಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ರಾಜೇಶ್ ಬಿ. ನೂತನ ತಂಡಕ್ಕೆ ಪ್ರತಿಜ್ಞಾ ವಿಧಿ ಭೋದಿಸಿ ಶುಭ ಹಾರೈಸಿದರು.
ಕಾರ್ಯದರ್ಶಿ ಡಾ| ಐಶ್ವರ್ಯ ಸಿ. ಅಂಚನ್ ಗತಸಾಲಿನ ಕಾರ್ಯಚಟುವಟಿಕೆಗಳ ವರದಿ ಮಂಡಿಸಿದರು.
ಘಟಕದ ಉಪಾಧ್ಯಕ್ಷರಾದ ಅಶ್ವಥ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಅಡ್ವೆ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಯುವವಾಹಿನಿಯ ಸಂಘಟನಾ ಕಾರ್ಯದರ್ಶಿ ಉದಯ ಕಾವೂರು ಉಪಸ್ಥಿತರಿದ್ದರು.
ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.