ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಕುತ್ಯಾರು : ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ 19ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ

Posted On: 24-09-2023 06:40PM

ಪಡುಕುತ್ಯಾರು : ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಸಮಾಜದಲ್ಲಿ ಶಕ್ತಿ ಸಂಸ್ಕಾರವನ್ನು ಕೊಡುವ ಮೂಲಕ ಸಮಾಜವನ್ನು ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಆ ಕಾರಣದಿಂದಾಗಿ ನಮ್ಮ ಮಠ ಮಂದಿರಗಳು, ನಮ್ಮ ಧರ್ಮ, ನಮ್ಮ ಸಂಸ್ಕೃತಿ, ನಮ್ಮ ಗುರುಗಳು, ನಮ್ಮ ಸಂಸ್ಕಾರದ ಕಾರಣದಿಂದ ಉನ್ನತಿಯನ್ನು ಸಾಸುತ್ತಿರುವ ನಮ್ಮ ದೇಶಕ್ಕೆ ಪ್ರಾಪಂಚಿಕವಾಗಿ ಗೌರವ ಸಲ್ಲುತ್ತಿದೆ. ಹಾಗಾಗಿ ಮಕ್ಕಳಲ್ಲೂ ಧಾರ್ಮಿಕ ಶ್ರದ್ಧೆ, ಸಂಸ್ಕಾರ, ಸಂಸ್ಕೃತಿಯನ್ನು ತುಂಬುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಭದ್ರ ಧಾರ್ಮಿಕ ತಳಹದಿಯನ್ನು ಹಾಕಿ ಕೊಡೋಣ ಎಂದು ಭಾರತ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಹೇಳಿದರು. ಅವರು ಭಾನುವಾರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ಶೋಭಕೃತ್ ನಾಮ ಸಂವತ್ಸರದ 19ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಕ್ಕೆ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ವೀಕ್ಷಣೆ ನಡೆಸಿ ಬಳಿಕ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಸ್ವಾಮೀಜಿಯವರಿಂದ ಫಲ ಮಂತ್ರಾಕ್ಷತೆಯನ್ನು ಪಡೆದು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಯಡಿ ಮೊದಲ ಬಾರಿ ವಿಶ್ವ ನಿರ್ಮಾಣ ಕರ್ತೃ ವಿಶ್ವಕರ್ಮರ ಹೆಸರು ಪ್ರಥಮ ಬಾರಿಗೆ ಜೋಡಣೆಯಾಗಿದೆ. ಮೊದಲ ಹಂತದಲ್ಲಿ 13,000 ಕೋಟಿ ರೂ. ಕಾರ್ಯಕ್ರಮ ಇದಾಗಿದೆ. ವಂಶವಾಹಿನಿಯಾಗಿ ಕರಗತವಾಗಿರುವ ಕುಲಕಸುಬಿನಲ್ಲಿ ಶ್ರಮ ಕಡಿಮೆ ಮಾಡಿ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಸೂಕ್ತ ತರಬೇತಿ ಪಡೆದು ಸೂಕ್ಷ್ಮ ಆಕರ್ಷಣೀಯ ಕೆಲಸಗಳ ಮೂಲಕ ವಿದೇಶಿಗರ ಬೇಡಿಕೆಯ ಮಟ್ಟದ ಉತ್ಪನ್ನಗಳು ಲಾಭದಾಯಕವಾಗಲಿದೆ. ವೇದಾಧ್ಯಯನದ ಮೂಲಕ ಸಂಸ್ಕಾರವನ್ನು ಕೊಡುವ ವಿಶ್ವಬ್ರಾಹ್ಮಣ ಸಮಾಜದ ಜೊತೆ ನಾವಿದ್ದೇವೆ. ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿ ನೀಡುವ ಕೆಲಸ ನಮ್ಮ ಸರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಮತ್ತಷ್ಟು ಅಭಿವೃದ್ಧಿ ಯೋಜನೆಗಳ ಸಾಕಾರಕ್ಕೆ ನಿಮ್ಮೆಲ್ಲರ ಆಶೀರ್ವಾದ ಮತ್ತೆ ನಮಗಿರಲಿ ಎಂದರು.

ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ದೇಶದ ಸಂಸ್ಕಾರಕ್ಕೆ ವಿಶ್ವ ತಲೆ ಬಾಗುತ್ತಿದೆ. ಸಂಸ್ಕಾರದ ಸ್ಪರ್ಶದಿಂದ, ಆಧ್ಯಾತ್ಮದ ಚಿಂತನೆಯಿಂದ ದೇಹವೇ ದೇವಾಲಯವಾಗುತ್ತದೆ. ಧರ್ಮಪರ ಚಿಂತನೆಯನ್ನು ಮಾಡುವ ವಿಶ್ವಬ್ರಾಹ್ಮಣ ಸಮಾಜದ ಗುರುಗಳಾದ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರನ್ನು ಸಮಸ್ತ ಹಿಂದೂ ಧರ್ಮ ಒಪ್ಪಿಕೊಂಡಿದೆ, ಅಪ್ಪಿಕೊಂಡಿದೆ ಎಂದರು. ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಧಾರ್ಮಿಕ ಶಕ್ತಿಯೇ ನಮ್ಮ ಅಭಿವೃದ್ಧಿ ಏಳಿಗೆಯ ಮೂಲ ಮಂತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ, ಸಮಾಜಕ್ಕಾಗಿ ನಡೆಸಿದ ಚಾಕಚಕ್ಯತೆ, ಕಾರ್ಯದಕ್ಷತೆ, ದೂರದೃಷ್ಟಿತ್ವದ ಯೋಜನೆಗಳ ಬಗ್ಗೆ ಹೆಮ್ಮೆ ಇದೆ. ಹಲವು ಸಂತರ ತಪಸ್ಸಿನ ಫಲದಿಂದ ಮನಸ್ಸಿಗೆ ಕಾವಿಯನ್ನು ತೊಟ್ಟಂತಹ ಪ್ರಧಾನ ಮಂತ್ರಿ ನಮ್ಮ ದೇಶಕ್ಕೆ ಒದಗಿದ್ದಾರೆ. ಆರಾಧ್ಯಮೂರ್ತಿ ವಿಶ್ವಕರ್ಮ ದೇವರ ಹೆಸರಿನ ವಿಶ್ವಕರ್ಮ ಯೋಜನೆಯನ್ನು ಅನಾವರಣಗೊಳಿಸಿದ್ದಾರೆ. ಕುಸುರಿ ಕೆಲಸದ ವೈಶಿಷ್ಟ್ಯತೆಯೊಂದಿಗೆ ಪರಂಪರೆಯನ್ನು ಉಳಿಸುವ ಪ್ರಧಾನಿಯವರ ಈ ಯೋಜನೆಯಡಿ ವಿಶ್ವಬ್ರಾಹ್ಮಣರ ಪಂಚಕಸುಬುಗಳಿಗೆ ಒಳಮೀಸಲಾತಿ ನೀಡಬೇಕಿದೆ. ಶೂನ್ಯ ಬಡ್ಡಿದರದ ಸಾಲ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದ್ದು, ಪರಂಪರೆಯ ಶಿಲ್ಪವನ್ನು ವಿದೇಶಿಗರ ಬೇಡಿಕೆಗೆ ಅನುಗುಣವಾಗಿ ಸಿದ್ಧಪಡಿಸಲು ಅಸಾಧ್ಯವಾಗಿದ್ದು, ಆಧುನಿಕ ಶಿಲ್ಪಗಳ ಮೂಲಕ ವಿದೇಶೀಗರ ಆಕರ್ಷಣೀಯ ಉತ್ಪನ್ನಗಳ ಸಿದ್ಧಪಡಿಸಲು ಯೋಜನೆಯನ್ನು ಬಳಸಿಕೊಳ್ಳಲು ಸಾಧ್ಯವಿದೆ. ಭಾರತದ ಪ್ರವಾಸೋದ್ಯಮ ಇಲಾಖೆಗೆ ಬರುವ ವಿದೇಶೀ ಆದಾಯದ ಶೇ.90 ಪಾಲು ವಿಶ್ವ ಬ್ರಾಹ್ಮಣರ ಶಿಲ್ಪಿಗಳ ಕೊಡುಗೆಯಿಂದ ಸಾಧ್ಯವಾಗಿದೆ ಎಂದರು. ಮಹಾಸಂಸ್ಥಾನದ ವತಿಯಿಂದ ಹಾಗೂ ಮಾತೃಮಂಡಳಿ ವತಿಯಿಂದ ಸಚಿವರನ್ನು ಅಭಿನಂದಿಸಲಾಯಿತು. ಆನೆಗುಂದಿ ಪ್ರತಿಷ್ಠಾನ ಮತ್ತು ಚಾತುರ್ಮಾಸ್ಯ ನಿರ್ವಹಣಾ ಸಮಿತಿ ಅಧ್ಯಕ್ಷರಾದ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಗೀತಾಂಜಲಿ ಎಂ.ಸುವರ್ಣ, ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ವೀಣಾ ಎಸ್. ಶೆಟ್ಟಿ, ಕಾಪು ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಸುಮಾ ಯು. ಶೆಟ್ಟಿ, ಕುತ್ಯಾರು ಗ್ರಾ.ಪಂ. ಅಧ್ಯಕ್ಷರಾದ ಜನಾರ್ದನ ಆಚಾರ್ಯ, ಮಾಜಿ ಅಧ್ಯಕ್ಷೆ ಲತಾ ಎಸ್. ಆಚಾರ್ಯ, ಕೃಷಿ ಅಧಿಕಾರಿ ಮೋಹನ್ರಾಜ್, ಪ್ರತಿಷ್ಠಾನದ ಕೋಶಾಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಅಸೆಟ್ ಅಧ್ಯಕ್ಷರಾದ ಬಿ. ಸೂರ್ಯಕುಮಾರ್ ಹಳೆಯಂಗಡಿ, ಮಾತೃ ಮಂಡಳಿ ಅಧ್ಯಕ್ಷರಾದ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಆನೆಗುಂದಿ ಮೂಲ ಮಠದ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ಗುರುಸೇವಾ ಪರಿಷತ್ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಗೋವು ಟ್ರಸ್ಟ್ನ ದಿನೇಶ್ ಆಚಾರ್ಯ ಕಿನ್ನಿಗೋಳಿ , ವಿವೇಕ ಆಚಾರ್ಯ ಮಂಚಕಲ್, ಜಯಕರ ಆಚಾರ್ಯ ಕರಂಬಳ್ಳಿ, ರತ್ನಾಕರ ಆಚಾರ್ಯ ಉದ್ಯಾವರ, ಮಾತೃಮಂಡಳಿಯ ರಮಾ ನವೀನ್ ಕಾರ್ಕಳ, ಕವಿತಾ ಹರೀಶ್ ಕಾರ್ಕಳ, ದೀಪಾ ಸುರೇಶ್ ಕಟಪಾಡಿ, ಗೀತಾ ಚಂದ್ರ ಕಾರ್ಕಳ, ಗುರುರಾಜ್ ಕೆ.ಜೆ., ರಾಘವೇಂದ್ರ ಆಚಾರ್ಯ ಉಡುಪಿ, ಹರೀಶ್ ಆಚಾರ್ಯ ಕಾರ್ಕಳ, ಹರೀಶ್ ಆಚಾರ್ಯ ಹರೇಕಳ, ಜಗದೀಶ್ ಆಚಾರ್ಯ ತೊಕ್ಕೊಟ್ಟು, ಯೋಗೀಶ್ ಆಚಾರ್ಯ ಮುಡಿಪು, ಉಳ್ಳಾಲ ಮಂಜೇಶ್ವರ ಪೇಟೆ ಕೂಡುವಳಿಕೆಯವರು, ಗುರುಸೇವಾ ಪರಿಷತ್ ಸದಸ್ಯರು ಉಪಸ್ಥಿತರಿದ್ದರು. ಶ್ರೀ ನಾಗಧರ್ಮೇಂದ್ರ ಸರಸ್ವತಿ ವೇದ ಸಂಜೀವಿನಿ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.