ಬಂಟಕಲ್ಲು : ಬೃಹತ್ ರಕ್ತದಾನ ಶಿಬಿರ ಸಂಪನ್ನ - ಅಂಗಾಂಗದಾನದ ಬಗ್ಗೆ ಜಾಗೃತಿ
Posted On:
02-10-2023 06:22PM
ಬಂಟಕಲ್ಲು : ನಾಗರಿಕ ಸೇವಾ ಸಮಿತಿ(ರಿ) ಬಂಟಕಲ್ಲು ಇವರ ಆಶ್ರಯದಲ್ಲಿ ಇತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂದು ಗಾಂಧೀ ಜಯಂತಿ ಪ್ರಯುಕ್ತ ಬಂಟಕಲ್ಲು ಶಿರ್ವ ರೋಟರಿ ಸಭಾಭವನದಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ರಕ್ತನಿಧಿ ತಂಡದ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರ ಜರುಗಿತು.
ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ನೂರಕ್ಕೂ ಅಧಿಕ ದಾನಿಗಳು ಶಿಬಿರದಲ್ಲಿ ಭಾಗವಹಿಸಿದ್ದು, ರಕ್ತನಿಧಿ ವೈದ್ಯಾಧಿಕಾರಿ ಡಾ.ಮಾನ್ವಿ ಇವರ ಮಾರ್ಗದರ್ಶನದಲ್ಲಿ 86 ಆರೋಗ್ಯವಂತರು ರಕ್ತದಾನ ಮಾಡಿದರು. ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಗೌರವ ಸಲಹೆಗಾರರಾದ ದೇವದಾಸ ಪಾಟ್ಕರ್ ಮುದರಂಗಡಿ 78ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್ ಮಾತನಾಡಿ ಗಾಂಧೀ ಜಯಂತಿಯ ದಿನವೇ ಬಂಟಕಲ್ಲು ನಾಗರಿಕ ಸಮಿತಿಯ ಮುಂದಾಳತ್ವದಲ್ಲಿ ವಿವಿಧ ಸಂಘಟನೆಗಳು ಸೇರಿ ರಕ್ತದಾನ ಶಿಬಿರ ಮಾಡಿದ್ದು ಔಚಿತ್ಯ ಪೂರ್ಣವಾಗಿದೆ. ರಕ್ತವನ್ನು ಬಹುದಿನಗಳವರೆಗೆ ಸಂಗ್ರಹಿಸಿ ಇಡುವುದು ಒಳ್ಳೆಯದಲ್ಲ. ತುರ್ತು ಸಂದರ್ಭದಲ್ಲಿ ರಕ್ತ ನೀಡಲು ಜಾಗೃತಿ ಮೂಡಿಸಬೇಕಾಗಿದೆ. ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯ ವೃದ್ಧಿಯಾಗುವುದಲ್ಲದೆ ಇನ್ನೊಬ್ಬರ ಪ್ರಾಣವನ್ನು ಉಳಿಸುವ ಪುಣ್ಯ ಲಭಿಸುತ್ತದೆ. ಆಗಾಗ ಕ್ಯಾಂಪ್‌ಗಳನ್ನು ಮಾಡುವುದರಿಂದ ನಾಗರಿಕರಲ್ಲಿ ರಕ್ತದಾನದ ಜಾಗೃತಿ ಮೂಡಿಸಲು ಅನುಕೂಲವಾಗುತ್ತದೆ ಎಂದರು.
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಇದರ ಅಧ್ಯಕ್ಷ ಸತೀಶ್ ಸಾಲಿಯಾನ್ ಮಾತನಾಡಿ ರಕ್ತದಾನದ ಮಹತ್ವ, ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು. ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ದೀಪಿಕಾ ನಾಯಕ್ ಅಂಗಾಂಗದಾನದ ಪ್ರತಿಜ್ಞಾವಿಧಿ ನೆರವೇರಿಸಿದರು, ಆರೋಗ್ಯ ಅಧಿಕಾರಿ ವೈಷ್ಣವಿ ಅಂಗಾಂಗದಾನದ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಭಾಗವಹಿಸಿದ 15 ಆಸಕ್ತ ಅಭ್ಯರ್ಥಿಗಳು ಅಂಗಾಂಗದಾನದ ನೋಂದಣಿ ಮಾಡಿದರು.
ಈ ಸಂದರ್ಭದಲ್ಲಿ ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ತುರ್ತು ಸೇವಾ ವಾಹನದಲ್ಲಿ ಯಾವುದೇ ಕ್ಷಣದಲ್ಲಿ ಆಕಸ್ಮಿಕ ಘಟನೆಗಳು ನಡೆದಾಗ ಸೇವಾ ರೂಪದಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರೇಂದ್ರ ಪಾಟ್ಕರ್ ಕೋಡುಗುಡ್ಡೆ, ಹರೀಶ್ ಹೇರೂರು, ವಿನ್ಸೆಂಟ್ ಪಲ್ಕೆ, ಉಮೇಶ ರಾವ್ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಶಿರ್ವದ ಅಧ್ಯಕ್ಷ ಮೊಹಮ್ಮದ್ ಫಾರೂಖ್, ರಾಜಾಪುರ ಸಾರಸ್ವತ ಯುವವೃಂದ ಬಂಟಕಲ್ಲು ಇದರ ಅಧ್ಯಕ್ಷ ರಾಘವೇಂದ್ರ ನಾಯಕ್ ಪಾಲಮೆ, ಬಂಟಕಲ್ಲು ಲಯನ್ಸ್ ಕ್ಲಬ್ ಜಾಸ್ಮಿನ್ ಅಧ್ಯಕ್ಷೆ ಪ್ರಮೀಳಾ ಲೋಬೊ, ಬಂಟಕಲ್ಲು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಬಂಟಕಲ್ಲು ಇದರ ಉಪಾಧ್ಯಕ್ಷ ಹರೀಶ್ ಹೇರೂರು, ಲಯನ್ಸ್ ಕ್ಲಬ್ ಬಂಟಕಲ್ಲು-ಬಿ.ಸಿ.ರೋಡ್ ಅಧ್ಯಕ್ಷ ಜೋಸಿಲ್ ನೊರೋನ್ಹಾ, ಕಾರು ಚಾಲಕ ಮಾಲಕರ ಸಂಘ ಬಂಟಕಲ್ಲು ಇದರ ಅಧ್ಯಕ್ಷ ಉಮೇಶ್ ರಾವ್, ಸ್ವಾಸ್ಥ್ಯಆಯೋಗ್ ಪಾಂಬೂರು ಚರ್ಚ್ ಇದರ ನಿರ್ದೇಶಕಿ ಪ್ರಸಿಲ್ಲಾ ನೊರೋನ್ಹಾ, ವೇದಿಕೆಯಲ್ಲಿದ್ದರು.
ಬಂಟಕಲ್ಲು ನಾಗರಿಕ ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.