ಕಾಪು : ಚಿರತೆ ಕಳೇಬರ ಪತ್ತೆ ; ದಹನ
Posted On:
07-10-2023 10:37PM
ಕಾಪು : ಬೆಳೆ ಸಮೀಕ್ಷೆಗೆ ತೆರಳಿದ್ದ ತಂಡಕ್ಕೆ
ಚಿರತೆಯೊಂದರ ಕಳೇಬರ ಸಿಕ್ಕಿದ ಘಟನೆ ಶುಕ್ರವಾರ ಇನ್ನಂಜೆ ಗ್ರಾ.ಪಂ. ವ್ಯಾಪ್ತಿಯ ಕಲ್ಲುಗುಡ್ಡೆ - ಕುಂಜಾರ್ಗ ಬಳಿಯ ಕಾಡಿನಲ್ಲಿ ಸಂಭವಿಸಿದೆ.
ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮ ಆಡಳಿತಾಧಿಕಾರಿ ಅವಿನಾಶ್ ಮತ್ತು ಗ್ರಾಮ ಸಹಾಯಕ ಜೇಸುದಾಸ್ ಸೋನ್ಸ್ ಅವರು ಕುಂಜಾರ್ಗ ರಾಜೇಂದ್ರ ಮಾಸ್ಟ್ರಮನೆ ಬಳಿ ಚಿರತೆ ಕಳೇಬರವನ್ನು ಗಮನಿಸಿದ್ದು ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿದ್ದರು. ಇನ್ನಂಜೆ ಗ್ರಾ. ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದು ಬಳಿಕ ಅರಣ್ಯ ಇಲಾಖೆ ಮತ್ತು ಪಶು ಇಲಾಖೆಗೆ ವಿಷಯ ತಿಳಿಸಿದ್ದರು.
ಕುಂದಾಪುರ ಉಪವಿಭಾಗದ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಪಡುಬಿದ್ರಿ ಉಪ ವಲಯ ಅರಣ್ಯಾಧಿಕಾರಿಗಳಾದ ಜೀವನ್‌ದಾಸ್ ಶೆಟ್ಟಿ, ಗುರುರಾಜ್ ಕೆ. ಹಾಗೂ ಕಾಪು ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ| ಅರುಣ್ ಹೆಗ್ಡೆ ಸ್ಥಳಕ್ಕೆ ಆಗಮಿಸಿ ಚಿರತೆಯ ಮೃತದೇಹ ಪರಿಶೀಲನೆ ನಡೆಸಿದರು. ಸುಮಾರು ಮೂರೂವರೆ ವರ್ಷ ಪ್ರಾಯದ ಗಂಡು ಚಿರತೆ ಯಾವುದೋ ಕಾರಣದಿಂದ ಬಾಯಿ ಗಾಯಕ್ಕೊಳಗಾಗಿ ಕೆಲವು ದಿನಗಳ ಕಾಲ ಆಹಾರ ಸೇವಿಸಲಾಗದೇ ಸಾವಿಗೀಡಾಗಿರುವ ಸಾಧ್ಯತೆಗಳಿವೆ ಎಂದು ಪರಿಶೀಲನೆ ನಡೆಸಿದ ಪಶು ವೈದ್ಯಾಧಿಕಾರಿ
ಡಾ| ಅರುಣ್ ಹೆಗ್ಡೆ ತಿಳಿಸಿದ್ದಾರೆ.
ಈ ಸಂದರ್ಭ ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಸ್ಥಳೀಯರ ಸಹಕಾರದಿಂದ ಚಿರತೆ ಕಳೇಬರವನ್ನು ದಹಿಸಲಾಯಿತು.