ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನವೆಂಬರ್ 4 : ಕಾಪು ತಾಲ್ಲೂಕು ಘಟಕದ 5ನೇ ಕನ್ನಡ ಸಾಹಿತ್ಯ ಸಮ್ಮೇಳನ - ಶ್ರೀಧರಮೂರ್ತಿ ಶಿರ್ವ ಸರ್ವಾಧ್ಯಕ್ಷತೆ

Posted On: 10-10-2023 07:12AM

ಬಂಟಕಲ್ಲು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲ್ಲೂಕು ಘಟಕದ 5ನೇ ಕನ್ನಡ ಸಾಹಿತ್ಯ ಸಮ್ಮೇಳನವು ನವೆಂಬರ್ 4, ಶನಿವಾರ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಲಿದೆ.

ಈ ಸಮ್ಮೇಳನಕ್ಕೆ ನಿವೃತ್ತ ಉಪನ್ಯಾಸಕರೂ, ಕನ್ನಡ ಸಂಘಟಕರೂ, ಹವ್ಯಾಸಿ ಯಕ್ಷಗಾನ - ರಂಗ ಕಲಾವಿದರೂ ಆಗಿರುವ ಶಿರ್ವ ಪರಿಸರದ ಕನ್ನಡದ ಸಾಕ್ಷಿಪ್ರಜ್ಞೆ ಕೆ.ಎಸ್. ಶ್ರೀಧರಮೂರ್ತಿ ಶಿರ್ವ ಅವರು ಆಯ್ಕೆಯಾಗಿದ್ದಾರೆ.

ಇಲ್ಲಿನ ಸಂತ ಮೇರಿ ಪದವಿ ಪೂರ್ವ ಕಾಲೇಜಿನಲ್ಲಿ ನಾಲ್ಕು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು, ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ವಿದ್ಯಾರ್ಥಿಕೇಂದ್ರಿತ ಪರಿಕಲ್ಪನೆಯಾದ 'ಸಿರಿಗನ್ನಡದ ಸೊಗಸು; ಭಾಷಾ ಶುದ್ಧತೆಯೆಡೆಗೆ ಪುಟ್ಟ ಹೆಜ್ಜೆಗೆ ಪೂರಕವಾಗಿ ವಿದ್ಯಾರ್ಥಿಗಳಲ್ಲಿ ಕನ್ನಡ ಕಲಿಕೆಯ ಆಸಕ್ತಿಯನ್ನು ಹಾಗೂ ಕನ್ನಡತನವನ್ನು ಬೆಳೆಸುವಲ್ಲಿ ಅವಿರತ ಶ್ರಮಿಸಿದವರು. ಬಡಗುತಿಟ್ಟು ಯಕ್ಷಗಾನದಲ್ಲಿ ಹವ್ಯಾಸಿ ವೇಷಧಾರಿ, ಅರ್ಥಧಾರಿ ಆಗಿರುವ ಅವರ ಬರಹಗಳು ಪತ್ರಿಕೆಗಳಲ್ಲಿ (ವಿಡಂಬನೆ, ವ್ಯಕ್ತಿ ಚಿತ್ರಣ, ವೈಚಾರಿಕತೆ) ಪ್ರಕಟವಾಗಿವೆ. ಗಮಕದಲ್ಲಿ ವ್ಯಾಖ್ಯಾನಕಾರರಾಗಿ, ಅಷ್ಟಾವಧಾನದಲ್ಲಿ ಪ್ರಚ್ಛಕರಾಗಿ ಅವರು ಗಮನಸೆಳೆದಿದ್ದಾರೆ. ಕೃಷಿ, ಹೈನುಗಾರಿಕೆಗಳಲ್ಲೂ ಆಸಕ್ತಿ, ಅನುಭವಿ. ಕನ್ನಡ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಿದ ಕನ್ನಡದ ಕಟ್ಟಾಳು ಶ್ರೀಧರ ಮೂರ್ತಿಯವರು, ವಿದ್ಯಾರ್ಥಿಕೇಂದ್ರಿತವಾಗಿ ಕಮ್ಮಟ, ಕಾರ್ಯಕ್ರಮ, ರಂಗಪ್ರಯೋಗಗಳನ್ನು ನಡೆಸುತ್ತಾ ಬಂದಿದ್ದಾರೆ. ಪರಿಸರದಲ್ಲಿ ಕನ್ನಡ ಹಾಗೂ ಸಾಹಿತ್ಯ-ಸಂಸ್ಕೃತಿಗೆ ಪೂರಕ ವಿವಿಧ ಸಂಘಟನೆಗಳ ರೂವಾರಿಗಳೂ ಆಗಿದ್ದಾರೆ.

ಈ ಬಾರಿಯ ಸಮ್ಮೇಳನವು ವಿದ್ಯಾರ್ಥಿಗಳನ್ನೇ ಕೇಂದ್ರೀಕರಿಸಿ, ಅವರಲ್ಲಿ ಕನ್ನಡ ಪ್ರೀತಿಯನ್ನು ಹೆಚ್ಚಿಸುವ ಪ್ರಯತ್ನವಾಗಿದ್ದು, ಇದಕ್ಕೆ ಪೂರಕವಾಗಿ ಶಿರ್ವಾ ಪರಿಸರದಲ್ಲಿ ಹಲವಾರು ಕನ್ನಡ ಮನಸ್ಸುಗಳನ್ನು ಪ್ರೇರೇಪಿಸಿದ, ಅಪಾರ ಅಭಿಮಾನಿ ಶಿಷ್ಯವೃಂದ ಹೊಂದಿರುವ ಕೆ.ಎಸ್. ಶ್ರೀಧರಮೂರ್ತಿಗಳು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಕ.ಸಾ.ಪ. ಕಾಪು ತಾಲ್ಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.