ಬಂಟಕಲ್ಲು : ಕಾಪು ತಾಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರ ಬಿಡುಗಡೆ
Posted On:
12-10-2023 05:58PM
ಬಂಟಕಲ್ಲು : ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದೇವಿಯ ಸನ್ನಿಧಿಯಲ್ಲಿ ಬಂಟಕಲ್ಲಿನಲ್ಲಿ ನಡೆಯಲಿರುವ ಕಾಪು ತಾಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರ ಬಿಡುಗಡೆಗೊಳಿಸುವುದು ಸಂತಸ ತಂದಿದೆ. ಸಮ್ಮೇಳನವು ನಿರ್ವಿಘ್ನವಾಗಿ ಜರುಗಲಿ ಎಂದು ಶ್ರೀದುರ್ಗಾಪರಮೇಶ್ವರೀ ದೇವಿಯಲ್ಲಿ ಪ್ರಾರ್ಥಿಸುತ್ತೇವೆ ಎಂದು ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರರಾದ ಶಶಿಧರ ವಾಗ್ಲೆ ನುಡಿದರು.
ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ನವೆಂಬರ್ ೪, ಶನಿವಾರ ಜರುಗಲಿರುವ "ಕಾಪು ತಾಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನ"ದ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಮೂಡುಬೆಳ್ಳೆಯಲ್ಲಿ ಜರುಗಿದ ಎರಡನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹಿರಿಯ ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಮಾತನಾಡಿ ಕಾಪು ತಾಲೂಕಿನಲ್ಲಿ ನಿರಂತರವಾಗಿ ಐದನೆಯ ಸಮ್ಮೇಳನ ಜರುಗುತ್ತಿದ್ದು, ಪ್ರತೀಯೊಂದು ಸಮ್ಮೇಳನವು ವಿಶಿಷ್ಟ "ಪರಿಕಲ್ಪನೆ"ಯೊಂದಿಗೆ ಅರ್ಥಪೂರ್ಣವಾಗಿ ನಡೆಯುತ್ತಿರುವುದು ವಿಶೇಷವಾಗಿದೆ ಎಂದರು.
ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಸಮ್ಮೇಳನದ ಆಶಯ ಹಾಗೂ ಹೊಸ ತಾಲೂಕು ಕಾಪುವಿನಲ್ಲಿ ಪ್ರತೀ ವರ್ಷವೂ ಮಾದರಿಯಾಗಿ ಸಮ್ಮೇಳನ ನಡೆಯುತ್ತಿರುವುದು ತಾಲೂಕು ಘಟಕದ ಸಂಘಟನಾ ಕಾರ್ಯತತ್ಪರತೆಗೆ ಸಾಕ್ಷಿಯಾಗಿದೆ ಎಂದರು. ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್, ಸಮ್ಮೇಳನದ ಕಾರ್ಯಾಧ್ಯಕ್ಷ ಕೆ.ಆರ್.ಪಾಟ್ಕರ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಕಾಪು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಟಪಾಡಿಯಲ್ಲಿ ಜರುಗಿದ ನಾಲ್ಕನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಖ್ಯಾತ ಕವಯತ್ರಿ, ಲೇಖಕಿ ಕ್ಯಾಥರಿನ್ ರೊಡ್ರಿಗಸ್, ಜಿಲ್ಲಾ ಸಮಿತಿಯ ಗೌರವ ಕೋಶಾಧ್ಯಕ್ಷರಾದ ಮನೋಹರ ಪಿ, ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿನಾಯಕ ಭಟ್, ಬಂಟಕಲ್ಲು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್, ತಾ.ಪಂ.ಮಾಜಿ ಸದಸ್ಯೆ ಗೀತಾ ವಾಗ್ಲೆ, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪ್ರಸಾದ್, ನಿವೃತ್ತ ಅಂಚೆಪಾಲಕ ಬಿ.ಭಾಸ್ಕರ ಶೆಟ್ಟಿ, ಕೃಷ್ಣಕುಮಾರ್ ರಾವ್ ಮಟ್ಟು, ದೇವದಾಸ್ ಪಾಟ್ಕರ್ ಮುದರಂಗಡಿ, ಡಿ.ಆರ್.ನೊರೋನ್ಹಾ ಕುರ್ಕಾಲು,
ಸ್ಥಳೀಯ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಸಾಪ ಕಾಪು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಸಾಪ ಕಾಪು ಘಟಕದ ಕಾರ್ಯದರ್ಶಿ ನೀಲಾನಂದ ನಾಯ್ಕ್ ವಂದಿಸಿದರು.