ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪುವಿನ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ನೀಡಿದ ಕಾಪು ಅಭಿವೃದ್ಧಿ ಸಮಿತಿ

Posted On: 16-10-2023 10:41PM

ಕಾಪು : ಇಲ್ಲಿನ ಪ್ರಮುಖ ಸಮಸ್ಯೆಗಳ ಬಗ್ಗೆ ಕಾಪು ಅಭಿವೃದ್ಧಿ ಸಮಿತಿಯು ಕಾಪುವಿನ ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ಸೋಮವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜರಗಿದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮನವಿ ನೀಡಿತು.

ಕಾಪು ಪೇಟೆಯ ಸುತ್ತಮುತ್ತಲೂ ಹಲವಾರು ವಸತಿ ಸಂಕೀರ್ಣಗಳು, ವಾಣಿಜ್ಯ ಕಟ್ಟಡಗಳ ತ್ಯಾಜ್ಯವನ್ನು ಬಿಡಲು ಸೂಕ್ತವಾದ ಒಳಚರಂಡಿಯ ವ್ಯವಸ್ಥೆ, ಟ್ರೀಟ್‌ಮೆಂಟ್ ಪ್ಲಾಂಟ್‌, ಕುಡಿಯುವ ನೀರು, ಪೇಟೆಯಲ್ಲಿ ವಾಹನ ನಿಲುಗಡೆಯ ವ್ಯವಸ್ಥೆ ಇಲ್ಲದಿರುವ ಬಗ್ಗೆ ಗಮನ ಸೆಳೆಯಲಾಯಿತು.

ಪೇಟೆಯ ರಸ್ತೆಯ ಇಕ್ಕೆಲಗಳಲ್ಲಿ ಸರಕಾರೀ ಜಮೀನಿನ ಸಮೀಕ್ಷೆಯನ್ನು ನಡೆಸಿದಾಗ ಕೆಲವೊಂದು ಕಡೆ ಜಮೀನು ಒತ್ತುವರಿಯ ಬಗ್ಗೆ ತಿಳಿಸಲಾಯಿತು. ಪೇಟೆಯಲ್ಲಿ ಸಾಕಷ್ಟು ಬೀದಿದೀಪಗಳ ಕೊರತೆ. ರಾತ್ರಿಯಾದಂತೆ ಕಾಪು ಪೇಟೆಯಲ್ಲಿ ಮಾರ್ಕೆಟ್ ಬಳಿ ಅಳವಡಿಸಿದ ಹೈಮಾಸ್ಕ್ ದೀಪವನ್ನು ಬಿಟ್ಟರೆ ಉಳಿದ ದೀಪಗಳು ಬೆಳಕು ನೀಡುವಲ್ಲಿ ವಿಫಲವಾಗಿವೆ. ಹಾಗೂ ಪೇಟೆಯ ಪ್ರಮುಖ ಜಂಕ್ಷನ್‌ಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದಲ್ಲಿ ಅಪರಾಧ ಪತ್ತೆಗೆ ಸಹಾಯವಾಗುತ್ತದೆ. ಸಾರ್ವಜನಿಕ ಹಿಂದೂ ರುದ್ರಭೂಮಿಯ ಪಕ್ಕ ಈ ಹಿಂದೆ ಇದ್ದ ತ್ಯಾಜ್ಯ ಸಂಗ್ರಹ ಕೇಂದ್ರವು ಪ್ರಸ್ತುತ ಕಾಪು ತಾಲೂಕಿನ ಎಲ್ಲೂರು ಗ್ರಾಮಕ್ಕೆ ಸ್ಥಳಾಂತರಿಸಲ್ಪಟ್ಟರೂ, ತ್ಯಾಜ್ಯದ ರಾಶಿಯು ಇನ್ನೂ ಇಲ್ಲೇ ಬಾಕಿಯಾಗಿ ದುರ್ನಾತ ಬೀರುತ್ತಿದೆ ಹಾಗೂ ಸುತ್ತಮುತ್ತಲಿನ ನಿವಾಸಿಗಳ ಬಾವಿಯ ಕಲುಷಿತವಾಗಿದೆ. ಈ ತ್ಯಾಜ್ಯವನ್ನು ಈ ಕೂಡಲೇ ತೆರವುಗೊಳಿಸಲು ನಿರ್ದೇಶಿಸುವ ಬಗ್ಗೆ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಸಂದರ್ಭ ಕಾಪು ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನೋಹರ್ ಎಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹರೀಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.