ಬಂಟಕಲ್ಲು : ಶ್ರೀ ದುರ್ಗಾಪರಮೇಶ್ವರೀ ದೇವಳದ ಶರನ್ನವರಾತ್ರಿ ಮಹೋತ್ಸವ - ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ
Posted On:
16-10-2023 10:45PM
ಬಂಟಕಲ್ಲು : ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಶರನ್ನವರಾತ್ರಿ ಮಹೋತ್ಸವದಲ್ಲಿ ಒಂಭತ್ತು ದಿನಗಳ ಪರ್ಯಂತ ಜರುಗಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ತಿರುಮಲೇಶ್ವರ ಭಟ್ ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು
ಭಾರತೀಯ ಸನಾತನ ಸಂಸ್ಕೃತಿಯಲ್ಲಿ ನವರಾತ್ರಿ ಉತ್ಸವ ಶಕ್ತಿದೇವತೆಗಳ ಆರಾಧನೆಗೆ ವಿಶೇಷ ಪ್ರಾಧಾನ್ಯತೆ ಇದ್ದು ದುರ್ಗೆಯು ಲೋಕಕಲ್ಯಾಣಾರ್ಥ ನವರೂಪಗಳನ್ನು ಧರಿಸಿ ಅಸುರ ದುಷ್ಟಶಕ್ತಿಗಳ ನಾಶ ಮಾಡಿ ಧರ್ಮವನ್ನು ರಕ್ಷಿಸಿದ ಹಿನ್ನೆಲೆಯನ್ನು ದೇಶದಾದ್ಯಂತ ವಿವಿಧ ರೂಪದಲ್ಲಿ ನವರಾತ್ರಿ ಹಬ್ಬದ ಮೂಲಕ ದೇವಿಯ ಆರಾಧನೆ ನಡೆಯುತ್ತಿದೆ. ಈ ಕ್ಷೇತ್ರದಲ್ಲಿಯೂ ದೇವಿಯ ಆರಾಧನೆಯೊಂದಿಗೆ ಪ್ರತೀ ವರ್ಷವೂ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಹವ್ಯಾಸಿ ಯಕ್ಷಗಾನ ಹಿರಿಯ ಕಲಾವಿದ ಅಚ್ಯುತ ನಾಯಕ್ ಶಂಕರಪುರ ಇವರನ್ನು ಸನ್ಮಾನಿಸಲಾಯಿತು. ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ ಯಕ್ಷಗಾನ ಕರಾವಳಿಯ ಹೆಮ್ಮೆಯ ಕಲೆಯಾಗಿದ್ದು, ಅನಾದಿ ಕಾಲದಿಂದಲೂ ಪುರಾಣ, ರಾಮಾಯಣ, ಮಹಾಭಾರತ, ಭಾಗವತದ ಘಟನೆಗಳನ್ನು ರಂಗದಲ್ಲಿ ಅಭಿನಯಿಸಿ ಪ್ರದರ್ಶಿಸುವ ಮೂಲಕ ಜನಸಾಮಾನ್ಯರಲ್ಲೂ, ದೇಶದ ಭವ್ಯ ಸಂಸ್ಕೃತಿ, ಪರಂಪರೆ, ದೈವಭಕ್ತಿ, ಜೀವನ ಮೌಲ್ಯಗಳನ್ನು ಜಾಗೃತಿ ಮೂಡಿಸುವ ಮೂಲಕ ಧರ್ಮ ಮಾರ್ಗದಲ್ಲಿ ನಡೆಯುವ, ಸನ್ನಡತೆಯ ಗುಣಗಳನ್ನು ಬೆಳೆಸಲು ಪ್ರೇರಣೆ ನೀಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು, ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ, ರಾಜಾಪುರ ಸಾರಸ್ವತ ಯುವೃಂದದ ಅಧ್ಯಕ್ಷ ರಾಂಘವೇಂದ್ರ ನಾಯಕ್ ಪಾಲಮೆ, ಶ್ರೀದುರ್ಗಾ ಮಹಿಳಾ ವೇದಿಕೆಯ ಅಧ್ಯಕ್ಷ ಸರಸ್ವತೀ ಎಸ್.ಕಾಮತ್, ಉಷಾ ಮರಾಠೆ, ಉಪಸ್ಥಿತರಿದ್ದರು.
ಪ್ರಥಮ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾಯೋಜಕರಾದ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಯುವವೃಂದದ ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್ ನಿರೂಪಿಸಿದರು. ಸುಕನ್ಯಾ ಜೋಗಿ ಪ್ರಾರ್ಥಿಸಿದರು. ನಂತರ ಶ್ರೀಆದಿಶಕ್ತಿ ಮಹಾಲಕ್ಷ್ಮಿ ತೆಂಕುತಿಟ್ಟು ಯಕ್ಷಗಾನ ಮಂಡಳಿ ಇವರಿಂದ "ಶಾಂಭವಿ ವಿಜಯ" ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.