ಶರನ್ನವರಾತ್ರಿ : ಮಾತೃ - ಪ್ರಕೃತಿ - ಶಕ್ತಿ ಉಪಾಸನಾ ಪರ್ವ
Posted On:
17-10-2023 05:06PM
ನಾವೆಲ್ಲರೂ ಒಬ್ಬಳು ’ತಾಯಿ’ಯಿಂದ ಜನಿಸಿದವರು. ನಮ್ಮೆಲ್ಲರನ್ನು ಒಳಗೊಂಡಿರುವ ಜಗತ್ತು ಒಬ್ಬಳೇ ಮಾತೆಯಿಂದ ಉಂಟಾಯಿತು ಎಂಬುದು ಆಶ್ಚರ್ಯದ ವಿಷಯವಲ್ಲ, ಅಸಂಬದ್ಧ ವಿವರಣೆಯಲ್ಲ.ಮಾನವನ ಬದುಕು-ಪ್ರಕೃತಿ-
ಹವಾಮಾನ ಇವು ಪರಸ್ಪರ ಸಂಬಂಧಿ. ಪ್ರಕೃತಿಯ ಬದಲಾವಣೆಗೆ ತನ್ನನ್ನು ರೂಢಿಸಿಕೊಂಡು, ಅವಲಂಬಿಯಾಗಿ ತನ್ನ ನೆಲೆಯಾದ ಪ್ರಕೃತಿಯ ನಿಗ್ರಹ, ಅನುಗ್ರಹಗಳೆರಡನ್ನೂ ಸಹಜವಾಗಿ ಸ್ವೀಕರಿಸಿ ’ಬದುಕು ಕಟ್ಟಿಕೊಂಡ ಆದಿ ಮನುಷ್ಯ’ ಎಂಬ ತಿಳಿವಳಿಕೆಯಲ್ಲೂ ಸತ್ಯವಿಲ್ಲವೇ?
ಜನ್ಮ ನೀಡಿದ ತಾಯಿಯನ್ನು, ಬದುಕಲು ಅವಕಾಶ ನೀಡಿದ ಪ್ರಕೃತಿಯನ್ನು ಕೃತಜ್ಞತಾ ಭಾವದಿಂದ ಕಂಡು ಪರಸ್ಪರ ಸಮೀಕರಿಸಿ, ಕೊನೆಗೆ ನಾಗರಿಕತೆಯ ಒಂದು ಪೂರ್ಣ ಹಂತದಲ್ಲಿ ನಿಲುಮೆಗೆ ನಿಲುಕದ, ಕಲ್ಪನೆಗೆ ಸಿಗದ ನಿಯಾಮಕ ಶಕ್ತಿಯಾಗಿ ಸ್ವೀಕರಿಸಿದ್ದು, ನಾವು ಸಂಶೋಧನಾ ಸಂಗ್ರಹಗಳಿಂದ ತಿಳಿಯಬಹುದಾದ ವಿಶ್ಲೇಷಣೆ. ಬಹುಶಃ ಇದೇ ಇರಬೇಕು ಮಾತೃ-ಪ್ರಕೃತಿ-ಶಕ್ತಿ ಉಪಾಸನಾ ಪ್ರಕಾರದ ಮೂಲ.
ಪ್ರಜನನ ಶಕ್ತಿ - ಸಸ್ಯಧಾರಣೆ : ಗರ್ಭಧಾರಣೆ ಹಾಗೂ ಪ್ರಜನನ ಶಕ್ತಿ ವಿಶೇಷವನ್ನು ಹೊಂದಿರುವ ಸ್ತ್ರೀ ಮಾತೃ ಆರಾಧನೆ ಮೂಲವಾದಳು. ತನ್ನಂತಹ ಪ್ರತಿರೂಪವನ್ನು ನೀಡಬಲ್ಲ ಸ್ತ್ರೀಯ ವಿಶೇಷ ಶಕ್ತಿ, ತಾನು ಪಡೆದುದನ್ನು ಪೋಷಿಸುವ ವಿಶಿಷ್ಟ ಮನಃಸ್ಥಿತಿಗಳು ಸ್ತ್ರೀ ಪಾರಮ್ಯವನ್ನು ಪ್ರತಿಷ್ಠಾಪಿಸಿಕೊಳ್ಳುವಲ್ಲಿ ಪರಿಣಾಮ ಬೀರಿರುವ ಅಂಶಗಳಿರಬೇಕು. ಕೃಷಿ ಸ್ತ್ರೀಯ ಅನ್ವೇಷಣೆ ಎಂಬುದು ಹಲವು ಸಂಶೋಧಕರ ಅಭಿಪ್ರಾಯ. ಪುರುಷ ಬೇಟೆಗೆ, ಪಶುಪಾಲನೆಗೆ ಹೊರಟಾಗ ಸ್ತ್ರೀ-ಕೃಷಿ ಸಂಬಂಧ ಅನಿವಾರ್ಯವಾಯಿತು. ಈ ಕಾರಣದಿಂದಲೇ ಭೂಮಿ-ಸ್ತ್ರೀ ಸಮಾನ ಸ್ಥಾನಮಾನ ಪಡೆದಿರಬಹುದೆಂಬ ವಾದದಲ್ಲಿ ಅರ್ಥವಿದೆ ಎಂದು ಅನ್ನಿಸುವುದಿಲ್ಲವೇ?
ಸ್ತ್ರೀಯ ’ಗರ್ಭಧಾರಣಾ ಸಾಮರ್ಥ್ಯ’ಕ್ಕೆ ಸಂವಾದಿಯಾದ ಭೂಮಿಯ ’ಸಸ್ಯಧಾರಣ ಶಕ್ತಿ’ ಗಮನ ಸೆಳೆಯುವ ಅಂಶವಾಗುತ್ತದೆ. ಭೂಮಿಯಲ್ಲಿ ಬಿತ್ತಿದ ಬೀಜ ಮೊಳಕೆಯೊಡೆದು ಗಿಡವಾಗಿ, ಮರವಾಗಿ ಬೆಳೆಯುವ ನಿಸರ್ಗ ನಿಯಮವೂ ಸ್ತ್ರೀ ಸಹಜವಾದ ಮಾತೃತ್ವದ ವಿಶೇಷತೆ ಕಂಡಾಗ ಸ್ತ್ರೀಯನ್ನು ಭೂಮಿಗೆ ಹೋಲಿಸಿದ ಆದಿಮಾನವನು ತಾಯಿಯಂತೆ ಭೂಮಾತೆಗೂ (ಪ್ರಕೃತಿಗೂ) ಗೌರವ ನೀಡಲಾರಂಭಿಸಿದ, ಕೃತಜ್ಞನಾಗತೊಡಗಿದ. ಶಕ್ತಿ-ವಸ್ತು ಪ್ರಕೃತಿಯ ಅವಿಭಾಜ್ಯ ಅಂಗಗಳು. ಇವುಗಳ ಪ್ರಾಂಸಗಿಕ ಸಮಾಗಮ ದೈವೀಶಕ್ತಿ. ನಿಯಾಮಕ ಶಕ್ತಿಯ ಕೆಲಸ ಎಂಬುದು ಒಂದು ಪ್ರಮಾಣ. ಈ ದೈವೀಶಕ್ತಿಯನ್ನು ಶಕ್ತಿ, ಮಹಾಮಾತೆ ಎನ್ನಲೇಬೇಕಾಯಿತು. ತಾಯಿ-ಪ್ರಕೃತಿಯ ಅದ್ಭುತ, ಕಲ್ಪನಾತೀತ ಸಾಮರ್ಥ್ಯವನ್ನು ಕಂಡು ನಿಬ್ಬೆರಗಾಗಿದ್ದ ಮನುಷ್ಯ, ನಿಯಾಮಕ ಶಕ್ತಿಯನ್ನು ಇವುಗಳಿಗಿಂತ ಹೆಚ್ಚಿನ, ಎತ್ತರದ ವಿಶೇಷ ಬಲ ಸಮನ್ವಿತವಾದುದೆಂದು ಊಹಿಸಿದ ಹಂತವೇ ಶಕ್ತಿ ಆರಾಧನೆ ಮೊದಲಿಟ್ಟಿರ ಬಹುದಾದ ಮನುಷ್ಯ ವಿಕಾಸದ ಹಂತವೆಂದು ಪರಿಗ್ರಹಿಸಬಹುದು.
ಆಹಾರ ಸಂಗ್ರಹಣೆಯುಗ, ಬೇಟೆಯುಗ, ಪಶುಪಾಲನೆ-ಕೃಷಿಯುಗ, ಕೈಗಾರಿಕಾಯುಗಗಳೆಂದು ಮಾನವ ಬದುಕಿನ ಪುರಾತನ ಜೀವನ ವಿಧಾನಗಳ ಹಂತವನ್ನು ಗುರುತಿಸಿರುವ ವಿದ್ವಾಂಸರು ಪಶುಪಾಲನೆ-ಕೃಷಿಯೊಂದಿಗೆ ದೇವತೆಗಳ ಉಗಮವಾಗಿರಬೇಕು ಎನ್ನುತ್ತಾರೆ. ಇದರೊಂದಿಗೆ ವೈದಿಕ ಪೂರ್ವದ ಮಾತೃ-ಪ್ರಕೃತಿ-ಶಕ್ತಿ ಆರಾಧನೆಯ ಅಸ್ಪಷ್ಟ ನಿಲುವಿನ ಹಂತದಿಂದ ಸುವ್ಯವಸ್ಥಿತ, ಮೌಖಿಕ-ಲಿಖಿತ ಆಧಾರಗಳುಳ್ಳ ವೈದಿಕ ಕಾಲಕ್ಕೆ ಪ್ರವೇಶಿಸೋಣ. ಭಾರತೀಯ ಸಂಸ್ಕೃತಿಯ ಬೇರು ಇರುವುದು ಜನಪದ ಬದುಕಿನ ಹರವಿನಲ್ಲಿ ಅಲ್ಲವೇ?
(ವಿವಿಧ ಗ್ರಂಥಗಳು ವಿದ್ವಾಂಸರಿಂದ ಸಂಗ್ರಹಿಸಿದ್ದು)
ಶಕ್ತಿ ಆರಾಧನೆ ವೈದಿಕ ಕಲ್ಪನೆ : ಪರಬ್ರಹ್ಮನ ಚೈತನ್ಯ ಸ್ವರೂಪಿಣಿಯಾದ, ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಳಾದ ಶಕ್ತಿಯನ್ನು ಮಹಾದೇವನ ಮಡದಿಯಾಗಿ ಶಿವಶಕ್ತಿ ಎಂದು ಶೈವರು, ಶ್ರೀ ಲಕ್ಷ್ಮೀ ಎಂದು ವೈಷ್ಣವರು, ಮಹಾಮಾತೆ ಎಂದು ಶಾಕ್ತರು ಪೂಜಿಸಲಾರಂಭಿಸಿದರು. ವೇದದಲ್ಲಿ ಬರುವ ರಾತ್ರೀ ಸೂಕ್ತ, ವಾಗಂಭೃಣಿಸೂಕ್ತ, ಶ್ರೀ ಸೂಕ್ತಗಳು ಮಹಾಕಾಳಿ, ಮಹಾಸರಸ್ವತೀ, ಮಹಾಲಕ್ಷ್ಮೀಯರ ಅವಿರ್ಭಾವದ ಸ್ಪಷ್ಟ ಕಲ್ಪನೆ ನೀಡುತ್ತದೆ. ವೈದಿಕಗೊಂಡ ಶಕ್ತಿ ಆರಾಧನೆ ಮಹತ್ತ್ವವನ್ನು ಪಡೆಯಿತು. ಮಾರ್ಕಂಡೇಯ ಪುರಾಣದ ಸಪ್ತಶತಿಯು ಶಕ್ತಿ ಆರಾಧನೆಗೆ ಪೂರ್ಣ ಪ್ರಮಾಣದ ವೈದಿಕ ಸಾಕ್ಷಿಯಾಗಿದೆ. ಮಾತೃ ಆರಾಧನೆಯೇ ವಿಕಾಸಗೊಂಡು ಮುಂದೆ ಶಕ್ತಿ ಪೂಜೆಯಾಗಿ, ವೈದಿಕರ ಮಾನ್ಯತೆ ಪಡೆದು ಉಪಾಸನಾ ದೇವತೆಯಾಗಿ ಪುರಾಣಗಳಲ್ಲಿ ಪ್ರಚಾರ ಪಡೆಯಿತು. ದೇವಾಲಯ ಸಂಸ್ಕೃತಿಯು ವೈದಿಕರ ಅನಿವಾರ್ಯ ಹೆಜ್ಜೆಯಾಗಬೇಕಾದ ಕಾಲ ಬಂದಾಗ ದುರ್ಗಾ ದೇವಾಲಯಗಳು ಕಾಣಿಸಿಕೊಂಡವು. ದಕ್ಷಿಣಕನ್ನಡ - ಉಡುಪಿ ಜಿಲ್ಲೆಗಳಲ್ಲಿ
ಕ್ರಿ.ಶ. ೭-೮ನೇ ಶತಮಾನದಷ್ಟು ಪುರಾತನವಾದ ದುರ್ಗಾ ಆರಾಧನಾ ಕೇಂದ್ರಗಳಿವೆ. ಇತಿಹಾಸ ಪೂರ್ವಕಾಲದ ಶಕ್ತಿ ಆರಾಧನೆಗೆ ಹೋಲಿಸಬಹುದಾದ ಉಪಾಸನಾ ತಾಣಗಳು ಕರಾವಳಿ ಜಿಲ್ಲೆಗಳಲ್ಲಿವೆ.