ಪಡುಕುತ್ಯಾರು : ಆನೆಗುಂದಿ ಮಹಾ ಸಂಸ್ಥಾನದಲ್ಲಿ ಆರ್ಟಿಸನ್ ಕಾರ್ಡ್ ವೃತ್ತಿ ಪ್ರಾತ್ಯಕ್ಷಿಕ ಪರೀಕ್ಷೆ
Posted On:
19-10-2023 04:24PM
ಪಡುಕುತ್ಯಾರು : ಕರ ಕುಶಲ ಕಲೆ ಅಭಿವೃದ್ಧಿ ಇಲಾಖೆಯಿಂದ ಕೇಂದ್ರಸರಕಾರದ ಸವಲತ್ತುಗಳನ್ನು ಪಡೆಯಲು ಆರ್ಟಿಸನ್ ಕಾರ್ಡ್ ಅತಿ ಅಗತ್ಯ, ಕುಶಲಕರ್ಮಿಗಳ ಹೆಸರಿನಲ್ಲಿ ಹಲವಾರು ಮಂದಿ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಅವುಗಳ ವಸ್ತುನಿಷ್ಠತೆ ಮತ್ತು ನಿಖರತೆಯನ್ನು ಪರಿಶೀಲಿಸಲು ಇತ್ತೀಚೆಗಿನ ದಿನಗಳಿಂದ ಪ್ರಾತ್ಯಕ್ಷಿಕ ಪರೀಕ್ಷೆಗಳನ್ನು ಇಲಾಖೆ ಕೈಗೊಳ್ಳುತ್ತಿದೆ ಎಂದು ಮಂಗಳೂರು ವಿಭಾಗದ ಹ್ಯಾಂಡಿಕ್ರಾಪ್ಟ್ಸ್ ಸರ್ವಿಸ್ ಸೆಂಟರ್ ಅಸಿಸ್ಟೆಂಟ್ ಡೈರೆಕ್ಟರ್ ವೀಣಾ ಅವರು ನುಡಿದರು.
ಅವರು ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನದ ನೇತೃತ್ವದಲ್ಲಿ ಇಲ್ಲಿನ ಶ್ರೀ ಸರಸ್ವತಿ ಸತ್ಸಂಗ ಮಂದಿರದಲ್ಲಿ ಆರ್ಟಿಸನ್ ಕಾರ್ಡ್ ಗಾಗಿ ನಡೆದ ವೃತ್ತಿ ಕೌಶಲ್ಯ ಪ್ರಾತ್ಯಕ್ಷಿಕೆ ಪರೀಕ್ಷೆಗೆ ಹಾಜರಾದ ಕುಶಲಕರ್ಮಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು.
ಆರ್ಟಿಸನ್ ಕಾರ್ಡಿನ ಅರ್ಜಿ ಸಲ್ಲಿಸುವಿಕೆ, ಅವುಗಳ ಉಪಯೋಗಗಳು ಇವುಗಳ ವಿವರವಾದ ಮಾಹಿತಿಯನ್ನು ಅವರು ವೇಳೆ ನೀಡಿದರು.
ಕೇಂದ್ರ ಸರ್ಕಾರವು ಎಂಎಸ್ಎಂಇ ಇಲಾಖೆಯ ಮೂಲಕ ಪಿಎಂ ವಿಶ್ವಕರ್ಮಯೋಜನೆ ಹಾಗೂ ಟೆಕ್ಸ್ ಟೈಲ್ಸ್ ಇಲಾಖೆಯ ಮೂಲಕ ಕರಕುಶಲ ಅಭಿವೃದ್ಧಿಗಾಗಿ ಅಗತ್ಯ ಇರುವ ಆರ್ಟಿಸನ್ ಕಾರ್ಡ್ ಗಳನ್ನು ಕರಕುಶಲಕರ್ಮಿಗಳಿಗೆ ನೀಡುತ್ತಿದೆ. ಕೇಂದ್ರಸರ್ಕಾರದ ಯೋಜನೆಗಳನ್ನು ಅರ್ಹಜನರಿಗೆ ತಲುಪಿಸುವ ನಿಟ್ಟಿನಲ್ಲಿ ಲಘು ಉದ್ಯೋಗ ಭಾರತಿ ಕರ್ನಾಟಕ ಮತ್ತು ಐಎಂಎಸ್ ಫೌಂಡೇಶನ್ ವಿವಿಧ ಕಾರ್ಯಗಾರಗಳನ್ನು ನಡೆಸುತ್ತಿದೆ ಎಂದು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲಘು ಯೋಗ ಭಾರತಿ ಮತ್ತು ಐಎಂಎಸ್ ಫೌಂಡೇಶನ್ ಪದಾಧಿಕಾರಿ, ಅಸೆಟ್ ಸಲಹಾ ಮಂಡಳಿಯ ರಾಜೇಶ್ ಚಿಂಚೆವಾಡಿ ಬೆಂಗಳೂರು ನುಡಿದರು.
ಕರಕುಶಲ ಕರ್ಮಿಗಳು ಕ್ಲಸ್ಟರ್ ಮುಖಾಂತರ ಸರ್ಕಾರದ ಸವಲತ್ತುಗಳನ್ನು ಸುಲಭದಲ್ಲಿ ಪಡೆಯಬಹುದಾಗಿದೆ.
ಯಂತ್ರೋಪಕರಣಗಳ ಸಹಾಯವಿಲ್ಲದೆ ಕೈಗಳಿಂದ ತಯಾರಿಸುವ ಕರಕುಶಲ ವಸ್ತುಗಳ ತಯಾರಕರು ಈ ವಿಭಾಗಕ್ಕೆ ಸೇರುತ್ತಾರೆ.
ಇಲ್ಲಿ ನುರಿತ ಕೆಲಸಗಳಲ್ಲಿ ವಿಶೇಷ ಪ್ರಶಸ್ತಿಗಳನ್ನು ಗಳಿಸಿದವರಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ.
ಆರ್ಟಿಸನ್ ಕಾರ್ಡ್ ಹೊಂದಿದವರು ಕೇಂದ್ರ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆಯಲು ಮೊದಲ ಪ್ರಾಶಸ್ತ್ಯ ಹೊಂದಿರುತ್ತಾರೆ. ವಿವಿಧ ಟೂಲ್ ಕಿಟ್ ಸಹಿತ ಉಪಕರಣಗಳು, ಸ್ಟೈ ಫಂಡ್, . ಅನುದಾನಗಳು, ಬ್ಯಾಂಕ್ ಸಾಲಗಳು (ರೂಪಾಯಿ 50,000 ಕ್ಕಿಂತ ಮೇಲ್ಪಟ್ಟು-20 ಶೇಕಡಾ ರಿಯಾಯಿತಿಗಳು,) ಆಯ್ದ ವಿಭಾಗಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತರಿಗೆ ಮಾಸಿಕ ಪಿಂಚಣಿ(5000/-, ಮೇಲ್ಪಟ್ಟು) ವಸ್ತು ಪ್ರದರ್ಶನಕ್ಕೆ ಇರುವ ಪ್ರಯಾಣ ಬತ್ಯೆ ವೆಚ್ಚಗಳು, ವಿವಿಧ ಕೌಶಲ್ಯ ಆಧಾರಿತ ತರಬೇತಿ ತರಗತಿಗಳು ಮುಂತಾದ ಅನೇಕ ಸವಲತ್ತುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಪುರಾತನ ಶೈಲಿಯ ಕರಕುಶಲ ವಸ್ತುಗಳ ನಿರ್ಮಾಣಕ್ಕೆ ಆದ್ಯತೆಯಿದೆ.
ಚಿನ್ನ ಬೆಳ್ಳಿ, ಕಂಚು ಹಿತ್ತಾಳೆಗಳ ಎರಕ, ಕಬ್ಬಿಣ, ಕಾಷ್ಟ, ಶಿಲಾ ಶಿಲ್ಪ ಇವುಗಳ ಪಾರಂಪರಿಕ ಪುರಾತನ ಶೈಲಿಯ ಕಲೆಗಳು, ನಶಿಸಿ ಹೋಗುತ್ತಿರುವ ಪುರಾತನ ಕರಕುಶಲ ಕಲೆಗಳು ಇವುಗಳನ್ನು ಉಳಿಸುವ ಕೇಂದ್ರ ಸರಕಾರದ ಯೋಜನೆಗಳ ಸವಲತ್ತು ಗಳನ್ನ ಪಡೆಯಲು ಪ್ರಸ್ತುತ ಆರ್ಟಿಸನ್ ಕಾರ್ಡ್ ಉಪಯೋಗವಾಗಲಿದೆ ಎಂದು ಅವರು ವಿವರಣೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಿದ್ದರು. ಅವರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸವಲತ್ತುಗಳನ್ನು ಪಡೆಯಲು ಆಸಕ್ತಿ ವಹಿಸಿ ಆರ್ಟಿಸನ್ ಕಾರ್ಡ್ ಮೂಲಕ ಪ್ರಯೋಜನವನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು. ಕೇಂದ್ರ ರಾಜ್ಯ ಸರಕಾರಗಳ ಚಿಕ್ಕ ಸವಲತ್ತಾದರೂ ಅದನ್ನು ಪಡೆದು ಅಳವಡಿಸಿಕೊಂಡು ಕಾರ್ಯಗತಗೊಳಿಸಿದಲ್ಲಿ ದೊಡ್ಡ ರೀತಿಯ ಯೋಜನೆಗಳು ನಮಗೆ ದೊರೆಯಲು ಸಾಧ್ಯವಿದೆ. ಆ ಮೂಲಕ ನಮ್ಮ ಸಮಾಜದ ಅಭಿವೃದ್ಧಿ ಕೂಡ ಆಗಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
60 ಕರಕುಶಲಕರ್ಮಿಗಳ ವೃತ್ತಿ ಕೌಶಲ್ಯ ಪ್ರಾತ್ಯಕ್ಷಕ ಪರೀಕ್ಷೆ ನಡೆಯಿತು.
ಕರಕುಶಲ ಇಲಾಖೆಯ ದೀಪಕ್, ಇಲಾಖೆಯ
ಸಹ ಸಂಯೋಜಕ ಗಣೇಶ್ ಆಚಾರ್ಯ ಕೋಟ, ಆನೆಗುಂದಿ ಗುರು ಸೇವಾ ಪರಿಷತ್ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಅಸೆಟ್ ಪ್ರಧಾನ ಕಾರ್ಯದರ್ಶಿ ಗುರುರಾಜ್ ಕೆ ಜೆ ಮಂಗಳೂರು, ಶಿಲ್ಪಿ ಗಣಪತಿ ಆಚಾರ್ಯ ಶಂಕರಪುರ, ಜನಾರ್ಧನ ಆಚಾರ್ಯ ಕನ್ಯಾನ, ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಅಸೆಟ್ ಅಧ್ಯಕ್ಷ ಸೂರ್ಯ ಕುಮಾರ್ ಹಳೆಯಂಗಡಿ, ಗೋವು ಪರ್ಯಾವರಣ್ ಟ್ರಸ್ಟ್ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ ಮುಂತಾದವರು ಉಪಸ್ಥಿತರಿದ್ದರು.
ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ದಿನೇಶ್ ಆಚಾರ್ಯ ಪಡುಬಿದ್ರಿ ವಂದಿಸಿದರು.