ನವೆಂಬರ್ ೪ : ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾಪು ತಾಲ್ಲೂಕು ೫ನೇ ಕನ್ನಡ ಸಾಹಿತ್ಯ ಸಮ್ಮೇಳನ
Posted On:
01-11-2023 06:40AM
ಕಾಪು : ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆ, ಕಾಪು ತಾಲ್ಲೂಕು ಘಟಕದ ೫ನೇ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನವು ನವೆಂಬರ್ ೪, ಶನಿವಾರ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಿವೃತ್ತ ಉಪನ್ಯಾಸಕ, ಕನ್ನಡ ಸಂಘಟಕ ಕೆ.ಎಸ್. ಶ್ರೀಧರ ಮೂರ್ತಿ ಶಿರ್ವಾರವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. ‘ಸಿರಿಗನ್ನಡದ ಸೊಗಸು; ಭಾಷಾ ಶುದ್ಧತೆಯೆಡೆಗೆ ಪುಟ್ಟ ಹೆಜ್ಜೆ’ ಪರಿಕಲ್ಪನೆಯಲ್ಲಿ ದಿನವಿಡೀ ಗೋಷ್ಠಿಗಳು, ಸಂವಾದ, ಪ್ರಾತ್ಯಕ್ಷಿಕೆ ಜರಗಲಿವೆ. ಸಮ್ಮೇಳನದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ| ಮಹೇಶ ಜೋಶಿ ಅವರು ನೆರವೇರಿಸಲಿದ್ದು, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ, ಶಿರ್ವ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಆರ್. ಪಾಟ್ಕರ್, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಕ್ಯಾಥರಿನ್ ರೊಡ್ರಿಗಸ್, ಕಾಪು ತಹಶೀಲ್ದಾರ್ ನಾಗರಾಜ ವಿ. ನಾಯ್ಕಡ, ಪಾಂಬೂರು ಚರ್ಚ್ ಧರ್ಮಗುರು ವಂ. ಹೆನ್ರಿ ಮಸ್ಕರೇನಸ್, ಶಿರ್ವ ಸುನ್ನಿ ಜಾಮಿಯಾ ಮಸೀದಿ ಧರ್ಮಗುರು ಸಿರಾಜುದ್ದೀನ್ ಝೈನಿ, ಕಾಲೇಜಿನ ಪ್ರಾಚಾರ್ಯರಾದ ಡಾ. ತಿರುಮಲೇಶ್ವರ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ. ನಿರ್ದೇಶಕಿ ಪೂರ್ಣಿಮಾ, ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ವಾಗ್ಳೆ, ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರರು, ನಿವೃತ್ತ ಪಂ. ಅಭಿವೃದ್ಧಿ
ಅಧಿಕಾರಿ ಶಂಕರ ಪದಕಣ್ಣಾಯ, ಜಿಲ್ಲಾ ಕನ್ನಡ ಭವನ ಸಮಿತಿ ಕಾರ್ಯಾಧ್ಯಕ್ಷ ದೇವದಾಸ್ ಹೆಬ್ಬಾರ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಗೌರವ ಕೋಶಾಧಿಕಾರಿ ಮನೋಹರ ಪಿ. ಭಾಗವಹಿಸುವರು. ಕಸಾಪ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗ ಇರಲಿದೆ. ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್ ರಾಷ್ಟ್ರ ಧ್ವಜಾರೋಹಣಗೈಯಲಿದ್ದು, ಕಸಾಪ ಕಾಪು ತಾ. ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಪರಿಷತ್ತಿನ ಧ್ವಜಾರೋಹಣಗೈಯಲಿದ್ದಾರೆ. ಗ್ರಾಪಂ ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್ ಉಪಸ್ಥಿತರಿರಲಿದ್ದಾರೆ.
ವಿದ್ಯಾರ್ಥಿ ಪ್ರತಿನಿಧಿಗಳಿಗೆ ಅಧ್ಯಯನಾತ್ಮಕ ಗೋಷ್ಠಿಯನ್ನು ಉಪನ್ಯಾಸಕರಾದ ನೀಲಾನಂದ ನಾಯ್ಕ್, ಡಾ. ಪ್ರಜ್ಞಾ ಮಾರ್ಪಳ್ಳಿ, ವಿದ್ಯಾ ಅಮ್ಮಣ್ಣಾಯ, ವಿದ್ಯಾಧರ ಪುರಾಣಿಕ್ ಸಂಯೋಜಿಸುವರು. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ, ಜಾನಪದ ಗಾಯಕ ಗಣೇಶ ಗಂಗೊಳ್ಳಿ ಅವರಿಂದ ಕನ್ನಡ ಗೀತ ಗಾಯನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ‘ನವೋದಯ ಕೊರಗರ ಸಾಂಸ್ಕೃತಿಕ ಕಲಾ ತಂಡ, ಪಾಂಬೂರು, ಪಡುಬೆಳ್ಳೆ’ ಇವರಿಂದ ಕಲಾಪ್ರಸ್ತುತಿ ನಡೆಯಲಿದೆ. ನಿವೃತ್ತ ಶಿಕ್ಷಕ ಕೃಷ್ಣಕುಮಾರ್ ರಾವ್ ಮಟ್ಟು ಮತ್ತು ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಮಧುಕರ್ ಎಸ್.ಯು ಕನ್ನಡದ ಬಗ್ಗೆ ಸೃಜನಾತ್ಮಕ ರಸಪ್ರಶ್ನೆ ನಡೆಸಿಕೊಡಲಿದ್ದಾರೆ. ಸಾಹಿತಿ ಡಾ. ರಾಘವೇಂದ್ರ ರಾವ್ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಸಿಕೊಡಲಿದ್ದಾರೆ.
ಸಾಧಕರಿಗೆ ಸಮ್ಮಾನ : ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶೀನ ಪಾತ್ರಿ ನಂದಿಕೂರು (ದೈವಾರಾಧನೆ), ಹೇಮನಾಥ ಪಡುಬಿದ್ರಿ (ಪತ್ರಿಕೋದ್ಯಮ), ರಾಮಚಂದ್ರ ಭಟ್ ಯೆಲ್ಲೂರು (ಯಕ್ಷಗಾನ), ರಘುರಾಮ ನಾಯಕ್ ಸಡಂಬೈಲು (ಕೃಷಿ), ನಾಗರಿಕ ಸೇವಾ ಸಮಿತಿ ಬಂಟಕಲ್ಲು (ಸೇವಾ ಸಂಘ ಸಂಸ್ಥೆ) ಇವರನ್ನು ಅದಾನಿ ಯುಪಿಸಿಎಲ್ ಘಟಕದ ಅಧ್ಯಕ್ಷ ಡಾ. ಕಿಶೋರ್ ಆಳ್ವ ಸಮ್ಮಾನಿಸುವರು. ಕಸಾಪ ತಾ. ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಲಿದ್ದಾರೆ. ಅಭ್ಯಾಗತರಾಗಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಕೆಎಂಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ವಿಜಯಾ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಅಶೋಕ ಕಾಮತ್, ಉದ್ಯಮಿ ನವೀನ್ ಅಮೀನ್, ಕಾಪು ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಶಿರ್ವ ವ್ಯ.ಸೇ.ಸ.ಸಂ. ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ಶಿರ್ವ ಪಂ. ಅಭಿವೃದ್ಧಿ ಅಧಿಕಾರಿ, ನಿವೃತ್ತ ಸೈನಿಕ ಅನಂತ ಪದ್ಮನಾಭ ನಾಯಕ್, ಶಿರ್ವ ಗ್ರಾಮ ಆಡಳಿತ ಅಧಿಕಾರಿ ಅರುಣ್ ಕುಮಾರ್, ಉಪನ್ಯಾಸಕಿ ಡಾ. ರವಿಪ್ರಭಾ ಕೆ., ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕಸಾಪ ಕಾಪು ತಾ. ಉಸ್ತುವಾರಿ ಪಿ.ವಿ. ಆನಂದ ಸಾಲಿಗ್ರಾಮ, ಗೌರವ ಕಾರ್ಯದರ್ಶಿ ಅಶ್ವಿನಿ ಲಾರೆನ್ಸ್ ಉಪಸ್ಥಿತರಿರುವರು.
ನವೆಂಬರ್ ೩ರಂದು ಕನ್ನಡಾಂಬೆಯ ಶೋಭಾಯಾತ್ರೆ : ಸಮ್ಮೇಳನದ ಪೂರ್ವಭಾವಿಯಾಗಿ ನವೆಂಬರ್ ೩, ಶುಕ್ರವಾರ ಸಂಜೆ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಸಮ್ಮೇಳನ ಸಭಾಂಗಣದವರೆಗೆ ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ನೇತೃತ್ವದಲ್ಲಿ ಮತ್ತು ಸ್ಥಳೀಯ ವಿವಿಧ ಸಂಘಟನೆಗಳ ಪಾಲ್ಗೊಳ್ಳುವಿಕೆಯಲ್ಲಿ ಕನ್ನಡಾಂಬೆಯ ಶೋಭಾಯಾತ್ರೆ ಜರಗಲಿದೆ ಎಂದು ಕಸಾಪ ಕಾಪು ತಾಲೂಕಿನ ಪ್ರಕಟನೆ ತಿಳಿಸಿದೆ.