ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ರಾಜ್ಯೋತ್ಸವ ಕೇವಲ ಆಚರಣಗೆ ಸೀಮಿತವಾಗದಿರಲಿ…ಕನ್ನಡಿಗರ ಮನೆ ಮನಸ್ಸಿನ ಹಬ್ಬವಾಗಲಿ

Posted On: 01-11-2023 06:59AM

ಪ್ರತೀ ಸಲ ಕರ್ನಾಟಕ ರಾಜ್ಯೋತ್ಸವ ಆಚರಣೆಯ ವೇಳೆ ಕೇಳಿ ಬರುವ ಒಂದೇ ಕೂಗು “ಕನ್ನಡ ಭಾಷೆಯನ್ನು ಉಳಿಸಿ!”. ಕರ್ನಾಟಕದ ಮಾತೃಭಾಷೆಯಾಗಿರುವ ಕನ್ನಡವನ್ನು ಕರ್ನಾಟಕದಲ್ಲಿ ಉಳಿಸಿ ಎಂದು ಹೋರಾಟ ಮಾಡಬೇಕಾದ ಪರಿಸ್ಥಿತಿ ನಮ್ಮ ಕನ್ನಡಿಗರದ್ದು. ಹಾಗಾದರೆ ನಮ್ಮ ಭಾಷೆಯನ್ನು ಸಾಯಿಸುವಂತೆ ಮಾಡುತ್ತಿರುವವರು ಯಾರು? ಜಾಗತೀಕರಣ, ವಾಣಿಜ್ಯೀಕರಣದಿಂದ ಪರಭಾಷೆಗಳು ಕನ್ನಡದ ಮೇಲೆ ಪ್ರಭಾವ ಬೀರಿರಬಹುದು. ಆದರೆ ಪ್ರಾಚೀನ ಹಾಗೂ ಸಮೃದ್ದ ವಾದ ಕನ್ನಡ ನುಡಿ ಇಷ್ಟೊಂದು ಕ್ಷೀಣವಾಗಲು ಕಾರಣಕತ೯ರು ನಾವೇ ಅಲ್ಲವೇ?ಎಂಬುದು ಚಿಂತಿಸಬೇಕಾದ ಸಂಗತಿ. ಭಾಷೆ ಎನ್ನುವುದು ಸಂವಹನ ಮಾಧ್ಯಮ ಮಾತ್ರವಾಗಿರದೆ ಅದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಅಂತಹ ಸಮೃದ್ಧ ಸಂಸ್ಕೃತಿಯನ್ನು ಹೊಂದಿರುವ ಕನ್ನಡ ನುಡಿ ಇಂದು ಕರ್ನಾಟಕದಲ್ಲಿ ಸೊರಗಿಹೋಗುತ್ತಿದೆ. ಒಂದು ಕಾಲದಲ್ಲಿ “ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ” ಎಂದು ಹಾಡಿದ್ದ ನಾವು ಇಂದು Sorry, I can’t speak kannada ಅನ್ನುತ್ತೇವೆ.

ಪರಭಾಷಾ ವ್ಯಾಮೋಹದಲ್ಲಿ ಕನ್ನಡ ಬಡವಾಯಿತೆ? ಹೌದು. ದೂರದ ಬೆಟ್ಟ ಕಣ್ಣಿಗೆ ನುಣ್ಣನೆ ಅನ್ನುವ ಹಾಗೆ ವಿದೇಶೀ ಸಂಸ್ಕೃತಿಯ ಅನುಕರಣೆ ನಮ್ಮ ಭಾಷೆಯನ್ನೂ ಬಲಿತೆಗೆದುಕೊಂಡಿದೆ. ಭೌಗೋಳಿಕ ಪ್ರದೇಶಕ್ಕನುಸಾರವಾಗಿ ನಮ್ಮ ಭಾಷೆಯ ಮೇಲೆ ಇತರ ಸಂಸ್ಕೃತಿ ಹಾಗೂ ಭಾಷೆಯ ಪ್ರಭಾವವಿದ್ದೇ ಇರುತ್ತದೆ. ಅದು ಮುಂದೆಯೂ ಇರುತ್ತದೆ. ಹಾಗಂತ ನಮ್ಮ ಮಾತೃಭಾಷೆಯನ್ನು ಕಡೆಗಣಿಸುವುದು ಎಷ್ಟು ಸರಿ? ಕಾಲ ಕಳೆದಂತೆ ಭಾಷೆ ಪ್ರಬುದ್ದತೆಯನ್ನು ಗಳಿಸುತ್ತದೆ ಎನ್ನುವುದಾದರೆ ಕನ್ನಡ ಭಾಷೆಗೆ ಈ ಸ್ಥಿತಿ ಯಾಕೆ ಬಂತು? ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಯಾಕೆ? ಅಂದ ಹಾಗೆ ಕನ್ನಡ ಅನ್ನ ಕೊಡದ ಭಾಷೆಯೆ? ಹೀಗೆ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕನ್ನಡ ಕಲಿತರೇನು ಸಿಗುತ್ತೆ? ಇಂಗ್ಲೀಷ್ ಕಲಿತರೆ ಮುಂದೆ ಸುಲಭವಾಗಿ ಕೆಲಸ ಸಿಗಬಹುದು ಎಂಬ ಆಸೆಯಿಂದ ತಮ್ಮ ಮಕ್ಕಳನ್ನು ಆಂಗ್ಲ ಶಾಲೆಗೆ ಅಟ್ಟುವ ಮಂದಿಯೇ ಜಾಸ್ತಿ. ಮಕ್ಕಳಿಗೆ ಪಾಠ ತಲೆಗೆ ಹತ್ತದಿದ್ದರೂ ತೊಂದರೆಯಿಲ್ಲ ನಮ್ಮ ಮಕ್ಕಳು ಇಂಗ್ಲೀಷ್ ಕಲಿಯಬೇಕು ಎನ್ನುವ ಹಠ ಹೆತ್ತವರದ್ದು. ಇಂಗ್ಲೀಷ್ ಶಾಲೆಗೆ ಹೋಗಿ ತಮ್ಮ ಮಕ್ಕಳು ಇಂಗ್ಲೀಷ್ ನಲ್ಲಿ ಮಾತನಾಡಿದರೆ ಹೆತ್ತವರ ಮುಖದಲ್ಲಿ ಧನ್ಯತಾ ಭಾವ. ಇನ್ನು ಕೆಲವರು ಕನ್ನಡ ಉಳಿಯಬೇಕಾದರೆ ನಿಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಿ ಎಂದು ಭಾಷಣ ಬಿಗಿಯುತ್ತಾರೆ, ಆದರೆ ಅವರ ಮಕ್ಕಳು ಮಾತ್ರ ಆಂಗ್ಲ ಮಾಧ್ಯಮದಲ್ಲೋದಿ, “ಐ ಡೋಂಟ್ ನೋ ಕನ್ನಡ “ಎನ್ನುತ್ತಿರುತ್ತವೆ. ಇನ್ನು ಕೆಲವರು ಕನ್ನಡ ಗೊತ್ತಿದ್ದರೂ ತಮಗೆ ಕನ್ನಡವೇ ಗೊತ್ತಿಲ್ಲ ಎಂಬಂತೆ ನಟಿಸುತ್ತಾರೆ. ಕನ್ನಡ ಮಾತನಾಡಿದರೆ ತಮಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ ಎಂಬ ಭಾವನೆಯಿಂದ ಕನ್ನಡವನ್ನು ತಮ್ಮಲ್ಲೇ ಬಚ್ಚಿಟ್ಟವರೂ ಇದ್ದಾರೆ. ! ಇತ್ತ, ಕನ್ನಡ ಶಾಲೆಯಲ್ಲಿ ಕಲಿತ ಮಕ್ಕಳ ಪಾಡು ಯಾರಿಗೆ ಅರ್ಥವಾಗುತ್ತದೆ ಹೇಳಿ? ಹಳ್ಳಿಯ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಜನೆಗೈದ ಮಕ್ಕಳು ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದಿದ್ದಾರೆ ಅಂದುಕೊಂಡರೆ, ‘ಅಲ್ಪಸಂಖ್ಯಾತ’ ಕನ್ನಡಿಗರಿರುವ ಬೆಂಗಳೂರಲ್ಲಿ ಇಂಗ್ಲೀಷಿನದ್ದೇ ಕಾರುಬಾರು. ಇಲ್ಲಿ ಬಂದು ಕನ್ನಡದಲ್ಲಿ ಮಾತನಾಡಿದವರಿಗೆ ‘ಹಳ್ಳಿ ಗುಗ್ಗು’ ಎಂಬ ಪಟ್ಟ ಗ್ಯಾರಂಟಿ. ಹೀಗಿರುವಾಗ ನಿಮಗೆ ಚೆನ್ನಾಗಿ ಇಂಗ್ಲೀಷ್ ಗೊತ್ತಿಲ್ಲದಿದ್ದರೂ ಪರ್ವಾಗಿಲ್ಲ, ಒಂದೆರಡು ಇಂಗ್ಲಿಷ್ ಪದಗಳನ್ನು ಕನ್ನಡದೊಳಗೆ ತುರುಕಿ ಕಂಗ್ಲೀಷು ಮಾತನಾಡಿದರೆ ಸಾಕು.ನೀವು ಬುದ್ದಿವಂತರೆಸಿಕೊಳ್ಳುತ್ತೀರಿ. ಇಂಗ್ಲೀಷ್ ಮಾತನಾಡಿದರೆ ನಾವು ತುಂಬಾ ಬಲ್ಲವರು ಎಂದು ಜನ ತಿಳಿದುಕೊಳ್ಳುತ್ತಾರೆ ಎಂಬ ಹುಚ್ಚು ಭ್ರಮೆಯೇ ಕನ್ನಡ ಭಾಷೆ ಈ ರೀತಿ ಸೊರಗಲು ಕಾರಣ ಎಂದರೆ ತಪ್ಪಾಗಲಾರದು.

ಕನ್ನಡ ಮಾತನಾಡಲು ಹಿಂದೇಟು ಯಾಕೆ ? ಸಂವಹನದಿಂದಲೇ ಭಾಷೆಯೊಂದು ಬೆಳೆಯಲು ಸಾಧ್ಯ. ಆದರೆ ಇಂದೇನಾಗುತ್ತಿದೆ? ನಮ್ಮ ರಾಜ್ಯದಲ್ಲಿ ಪರಭಾಷಾ ಪ್ರಾಬಲ್ಯ ಏರುತ್ತಿದ್ದಂತೆ ಕನ್ನಡದಲ್ಲಿ ವ್ಯವಹರಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಉದಾಹರಣೆಗೆ ಬೆಂಗಳೂರನ್ನೇ ತೆಗೆದುಕೊಳ್ಳೋಣ. ಇಲ್ಲಿಗೆ ಬರುವ ಅನ್ಯ ಭಾಷಿಗರಲ್ಲಿ ನಾವು ಕನ್ನಡಿಗರು ಅವರದ್ದೇ ಭಾಷೆಯಲ್ಲಿ ಅಥವಾ ಹಿಂದಿ, ಇಂಗ್ಲೀಷ್ ನಲ್ಲಿ ವ್ಯವಹರಿಸುತ್ತೇವೆಯೇ ವಿನಾ ಕನ್ನಡದಲ್ಲಿ ವ್ಯವಹರಿಸಲು ಹೋಗುವುದಿಲ್ಲ. ಅವರು ತಮಿಳರಾಗಿದ್ದರೆ ನಾವು ಅವರಲ್ಲಿ ತಮಿಳಲ್ಲಿ ಮಾತನಾಡಿ ಅವರನ್ನು ಮೆಚ್ಚಿಸಲು ನೋಡುತ್ತೇವೆಯೇ ಹೊರತು ನಮ್ಮ ಭಾಷೆಯನ್ನು ಅವರಿಗೆ ಕಲಿಸಲು ಹೋಗುವುದಿಲ್ಲ. ಅವರು ಕಲಿಯುವ ಆಸಕ್ತಿಯನ್ನೂ ತೋರುವುದಿಲ್ಲ. ನೆರೆ ರಾಜ್ಯಗಳಿಂದ ಕಲಿಯಬೇಕು : ನಮ್ಮ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳದ ಜನರನ್ನು ಗಮನಿಸಿ. ಅವರು ಅನ್ಯಭಾಷಿಗರಲ್ಲಿ ಅಥ೯ವಾಗದಿದ್ದರೂ ತಮ್ಮ ಮಾತೃಭಾಷೆಯಲ್ಲೇ ವ್ಯವಹರಿಸುತ್ತಾರೆ. ತಮಿಳುನಾಡಲ್ಲಿದ್ದರೆ ಕನ್ನಡಿಗನೂ ತಮಿಳು ಕಲಿತು ಬಿಡ್ತಾನೆ. ಆದರೆ ಕನಾ೯ಟಕದಲ್ಲಿ ಕನ್ನಡೇತರರಿಗೆ ಕನ್ನಡ ಕಲಿಯಬೇಕೆಂಬ ಒತ್ತಡವೂ ಇಲ್ಲ. ಕನ್ನಡ ಕಲಿತೇ ಆಗಬೇಕೆಂಬ ಆವಶ್ಯಕತೆಯೂ ಅವರಿಗಿರುವುದಿಲ್ಲ. ಇದರ ಪರಿಣಾಮ ಇತರ ಭಾಷೆಗಳ ಅಧಿಪತ್ಯವನ್ನು ಇನ್ನೂ ಹೆಚ್ಚಾಗ ತೊಡಗುತ್ತದೆ. ಸಂವಹನ ಅಂತ ಹೇಳುವಾಗ ಅದು ಮಾತಿಗೂ ಕೃತಿಗೂ ಅನ್ವಯವಾಗುತ್ತದೆ. ಮಾತು ಹಾಗೂ ಕೃತಿ ಇವೆರಡರಲ್ಲಿ ಬಳಕೆಯಾಗುವ ಕನ್ನಡ ಸಾಮಾನ್ಯ ವ್ಯಕ್ತಿಯ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಬಲ್ಲುದು. ಯಾವುದೇ ಭಾಷೆಯಾಗಲಿ, ಅದರ ಕಲಿಕೆ ಆರಂಭವಾಗುವುದೇ ಕೇಳುವುದರಿಂದ. ನಿರಂತರವಾಗಿ ನಾವು ಆಲಿಸುವ ಭಾಷೆಯನ್ನು ನಾವು ಬೇಗನೆ ಕಲಿತು ಬಿಡುತ್ತೇವೆ. ಆದರೆ ನಾವೀಗ ಕೇಳುವ ಕನ್ನಡವಾದರೂ ಎಂತದ್ದು. ಕೆಲವೊಮ್ಮೆ ಇದೂ ಕನ್ನಡವೇ? ಎಂಬ ಪ್ರಶ್ನೆ ಕಾಡುತ್ತದೆ. ಎಫ್. ಎಂ ನ ಆರ್ ಜೆ ಗಳು ಉಲಿಯುವ ‘ಬಿಂದಾಸ್ ಕನ್ನಡ’, ಸೆಲೆಬ್ರಿಟಿಗಳ ‘ಕಂಗ್ಲೀಷು’ ಹಾಗೂ ಮಾಧ್ಯಮಗಳ ಪ್ರಭಾವದಿಂದ ಬಂದ ‘ಪಂಚಿಂಗ್ ಕನ್ನಡ’ ಇವೇ” ನಮ್ಮ ಕನ್ನಡ” ಆಗಿ ಬಿಟ್ಟಿದೆ. ನಾವು ಕೇಳುವ ಕನ್ನಡದ ಕಥೆ ಹೀಗಾಯ್ತು, ಇತ್ತ ಬರವಣಿಗೆಯಲ್ಲೂ ನಾವು ಇದೇ ಕನ್ನಡವನ್ನು ಬಳಸಿ ಬರವಣಿಗೆಯನ್ನೂ ಹಾಳು ಮಾಡಹೊರಟಿದ್ದೇವೆ. ನೀವೇ ಗಮನಿಸಿ, ಅಪ್ಪಟ ಕನ್ನಡದಲ್ಲಿ ಬರೆದ ಲೇಖನಕ್ಕಿಂತ ಇಂಗ್ಲೀಷ್ , ಒಂದಷ್ಟು ಎಸ್ಸೆಮ್ಮೆಸ್ಸ್ ಭಾಷೆಗಳನ್ನು ಬಳಸಿ ಬರೆದ ಲೇಖನವೇ ಇಂದು ಯುವ ಜನಾಂಗವನ್ನು ಆಕಷಿ೯ಸುತ್ತದೆ. ಇಂತಿರುವಾಗ ಸಾಕಷ್ಟು ಮಾಹಿತಿಗಳಿದ್ದರೂ ಅಪ್ಪಟ ಕನ್ನಡದಲ್ಲಿ ಬರೆದ ಲೇಖನ ಇವುಗಳ ಮುಂದೆ ಏನೂ ಇಲ್ಲ ಎಂಬಂತಾಗುತ್ತದೆ. ಇಂತಹಾ ಪರಿಸ್ಥಿತಿಯಲ್ಲಿ ಬರಹಗಾರರು ಕೂಡಾ ಮಡಿವಂತಿಕೆಯನ್ನ ಬಿಟ್ಟು ಟ್ರೆಂಡ್ ಗೆ ತಕ್ಕಂತೆ ತಮ್ಮ ಬರವಣಿಗೆಯಲ್ಲೂ ಬದಲಾವಣೆಯನ್ನು ತರುತ್ತಾರೆ. ಪರಿಣಾಮ ಓದುಗ ಕೂಡಾ ಅದೇ ಕನ್ನಡಕ್ಕೆ ಒಗ್ಗಿಕೊಳ್ಳುತ್ತಾನೆ. ಇದು ಕನ್ನಡ ಭಾಷೆಯ ಮಟ್ಟಿಗೆ ಅಪಾಯಕಾರಿ ಬೆಳವಣಿಗೆ ಎಂದೇ ಹೇಳಬಹುದು.

ನಮ್ಮ ಶಿಕ್ಷಣ ವ್ಯವಸ್ಥೆಯೂ ಸುಧಾರಿಸಬೇಕಾಗಿದೆ ಕಂಬಾರರು ಹೇಳಿದಂತೆ ಕನಾ೯ಟಕದಲ್ಲಿ ಹತ್ತನೇ ತರಗತಿಯ ವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿಕೆಯಾಗಬೇಕು. ಇಂಗ್ಲಿಷ್ ವ್ಯಾಮೋಹಕ್ಕೊಳಗಾಗಿ ನಾಡು ನುಡಿಯಿಂದ ದೂರ ಸಾಗುತ್ತಿರುವ ಕನ್ನಡಿಗರನ್ನು ಮತ್ತೆ ತಾಯ್ನುಡಿಯತ್ತ ಸೆಳೆಯುವ ಕಾರ್ಯವನ್ನು ಸಕಾ೯ರ ಮಾಡಬೇಕಾಗಿದೆ. ಒಂದೆಡೆ ಕನ್ನಡ ಮಾಧ್ಯಮದ ಸಕಾ೯ರಿ ಶಾಲೆಗಳು ಮುಚ್ಚುತ್ತಿವೆ. ಇನ್ನೊಂದೆಡೆ ಆಂಗ್ಲ ಮಾಧ್ಯಮ ಶಾಲೆಗಳು ಅಣಬೆಗಳಂತೆ ತಲೆಯೆತ್ತುತ್ತಿವೆ. ಇವುಗಳ ಬಗ್ಗೆ ಜಾಣ ಕುರುಡು ಪ್ರದಶಿ೯ಸುತ್ತಿರುವ ಸಕಾ೯ರವನ್ನು ಬಡಿದೆಬ್ಬಿಸುವ ಹೊಣೆಗಾರಿಕೆಯೂ ಕನ್ನಡಿಗನ ಮೇಲಿದೆ. ಇದೀಗ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಕೊಂಡಿರುವ ನಮ್ಮ ಕನ್ನಡ ಸಾಹಿತ್ಯ ಲೋಕ ಸಮೃದ್ದವಾಗಿದೆ. ಅದನ್ನು ಇನ್ನಷ್ಟು ಸಮೃದ್ದಗೊಳಿಸುವುದರ ಜತೆಗೆ ತಾಯ್ನುಡಿಯಾದ ಕನ್ನಡವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಕನ್ನಡಿಗರಿಗಿದೆ. ನಮ್ಮ ನಾಡಿನ ಜನಪದ, ಸಾಂಸ್ಕತಿಕ ಜೀವನದ ಉಸಿರಾಗಿರುವ ಕನ್ನಡದ ಜ್ಞಾನ ಶಾಖೆ ಪಸರಿಸಬೇಕಾದರೆ ಕನ್ನಡಲ್ಲೇ ಜ್ಞಾನಾಜ೯ನೆಯಾಗಬೇಕು.ಈ ನಡುವೆ ಕಲಿಕೆಗೆ ಇಂಗ್ಲೀಷ್ ಬೇಕೋ ಬೇಡವೋ, ಕನ್ನಡ ಮಾತ್ರ ಸಾಕೆ? ಎಂಬ ಎಂಬ ವಿಚಾರದಲ್ಲಿ ಸಾಕಷ್ಟು ಚಚೆ೯ಗಳು ಈಗಾಗಲೇ ನಡೆದಿವೆ. ಈ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ನಿಲುವು ಇದ್ದೇ ಇರುವುದು. ಯಾವುದೇ ಭಾಷೆಯಾಗಲಿ ಅದಕ್ಕೆ ಅದರದ್ದೇ ಆದ ಸೌಂದರ್ಯವಿದೆ. ಸತ್ವವಿದೆ. ಅದನ್ನು ಕಾಪಾಡುವ ಹೊಣೆ ನಮ್ಮದು ಒಟ್ಟಿನಲ್ಲಿ ಹೇಳುವುದೇನೆಂದರೆ ಜ್ಞಾನ ಸಂಪಾದನೆಗೆ ಯಾವ ಭಾಷೆಯಾದರೇನಂತೆ, ನಮ್ಮ ನಡೆ-ನುಡಿ ಕನ್ನಡವಾಗಿರಲಿ. ನಮ್ಮ ನಾಡು, ನಮ್ಮ ಸಂಸ್ಕೃತಿ ಹಾಗೂ ನಮ್ಮ ಭಾಷೆಯ ಮೇಲಿರುವ ಈ ಪ್ರೀತಿ, ಉತ್ಸಾಹ ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ಈ ಬಾರಿಯ ಸುವಣ೯ ರಾಜ್ಯೋತ್ಸವ ಕನ್ನಡದ ಅಭಿವೃದ್ಧಿಗೆ ನಾಂದಿ ಹಾಡಲಿ. ಲೇಖನ : ರಾಘವೇಂದ್ರ ಪ್ರಭು ಕರ್ವಾಲು