ಬಂಟಕಲ್ಲು : ೫ನೇ ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
Posted On:
04-11-2023 12:26PM
ಬಂಟಕಲ್ಲು : ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ಬಂಟಕಲ್ಲು ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ೫ನೇ ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳನಾಧ್ಯಕ್ಷರಾದ ಕೆ ಎಸ್ ಶ್ರೀಧರ ಮೂರ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಜೊತೆಗೂಡಿ ಉದ್ಘಾಟಿಸಿದರು.
ಸ್ಮರಣ ಸಂಚಿಕೆ/ಪುಸ್ತಕ ಬಿಡುಗಡೆ : ಶಿಕ್ಷಕ ಸತ್ಯಸಾಯಿ ಪ್ರಸಾದ್ ರ ಕೃತಿ 'ಸಾಯಿ ಸಂದೇಶ' ವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು, ಅನಂತ ಮೂಡಿತ್ತಾಯ ಸಂಪಾದಕತ್ವದ ಸ್ಮರಣ ಸಂಚಿಕೆ 'ಕಡಲು' ನ್ನು ಮಾಧವ ಕಾಮತ್ ಬಿಡುಗಡೆಗೊಳಿಸಿದರು.
ಧ್ವಜ ಹಸ್ತಾಂತರ : ಕಾಪು ತಾಲ್ಲೂಕಿನ ೪ ನೇ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷರಾದ ಕ್ಯಾಥರೀನ್ ರೊಡ್ರಿಗಸ್ ಸಾಹಿತ್ಯ ಪರಿಷತ್ತಿನ ಧ್ವಜವನ್ನು ೫ನೇ ಸಮ್ಮೇಳನದ ಅಧ್ಯಕ್ಷರಾದ ಕೆ ಎಸ್ ಶ್ರೀಧರ ಮೂರ್ತಿಯವರಿಗೆ ಹಸ್ತಾಂತರಿಸಿದರು.
ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಅತಿಥಿ ದೇವೋ ಭವ ಎಂಬ ಸಂಸ್ಕೃತಿ ನಮ್ಮದು. ಭಾರತ ಹಲವು ಸಂಸ್ಕೃತಿ ಮತ್ತು ಭಾಷೆಯನ್ನು ಹೊಂದಿರುವ ದೇಶ ಅದರಲ್ಲಿ ನಮ್ಮ ಕರ್ನಾಟಕ ವಿಶೇಷ ಎಂದು ಹೇಳಿದ ಅವರು ಕನ್ನಡ ನಾಡು ಮತ್ತು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದು ಎಂದರು.
ಹಲ್ಮಿಡಿಯ ಕನ್ನಡ ಶತ ಶತಮಾನಗಳ ನಂತರ ಮುಂದುವರೆದಿದೆ. ಕನ್ನಡದ ಸೊಗಸನ್ನು ನಾವು ಅರಿಯಬೇಕಾಗಿದೆ. ಪಾಶ್ಚಿಮಾತ್ಯರ ಪ್ರಭಾವದಿಂದ ಸಾಹಿತ್ಯ ವೈವಿಧ್ಯಮಯವಾಯಿತು ಎಂದು ಸಮ್ಮೇಳನಾಧ್ಯಕ್ಷರಾದ ಕೆ ಎಸ್ ಶ್ರೀಧರ ಮೂರ್ತಿ ಹೇಳಿದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು.
ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಂಟಕಲ್ಲು ಪುಂಡಲೀಕ ಮರಾಠೆ, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತಾ ರಾಜೇಶ್, ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾl ತಿರುಮಲೇಶ್ವರ ಭಟ್, ಕಾಪು ತಹಶೀಲ್ದಾರರಾದ ನಾಗರಾಜ್ ನಾಯ್ಕಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಪೂರ್ಣಿಮಾ, ಸಮ್ಮೇಳನದ ಕಾರ್ಯದರ್ಶಿ ಎಸ್ ಎಸ್ ಪ್ರಸಾದ್, ದೇವಸ್ಥಾನ ಆಡಳಿತ ಮೊಕ್ತೇಸರರು ಮತ್ತು ಧರ್ಮಗುರುಗಳು ಉಪಸ್ಥಿತರಿದ್ದರು.
ಸಮ್ಮೇಳನದ ಕಾರ್ಯಾಧ್ಯಕ್ಷರಾದ ಕೆ ಆರ್ ಪಾಟ್ಕರ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಪ್ರಸ್ತಾವನೆಗೈದರು. ಅನಂತ ಮೂಡಿತ್ತಾಯ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.
ಕಸಾಪ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ವಂದಿಸಿದರು.