ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಪಡುಬಿದ್ರಿ - ಕನ್ನಂಗಾರ್ ಬೈಪಾಸ್ ರಸ್ತೆ ಶೀಘ್ರ ಕಾಮಗಾರಿಗೆ ಹೋರಾಟ ಸಮಿತಿ ಆಗ್ರಹ

Posted On: 11-11-2023 12:37PM

ಕಾಪು : ಪಡುಬಿದ್ರಿಯಿಂದ ಕನ್ನಂಗಾರ್ ಬೈಪಾಸ್ ವರೆಗೆ ಸುಮಾರು 350 ಮೀಟರ್ ಸರ್ವಿಸ್ ರಸ್ತೆ ನಿರ್ಮಾಣದ ಬಗ್ಗೆ ಭರವಸೆ ನೀಡಿ 6 ವರ್ಷ ಸಂದರೂ ಈವರೆಗೆ ಸರ್ವಿಸ್ ರಸ್ತೆ ನಿರ್ಮಾಣಗೊಂಡಿಲ್ಲ. ಈ ಕಾರಣದಿಂದಾಗಿ ಈ ಭಾಗದಲ್ಲಿ 54 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, 8 ಮಂದಿ ಯುವಜನತೆ ಪ್ರಾಣವನ್ನು ಕಳೆದುಕೊಂಡಿರುತ್ತಾರೆ. ಪಡುಬಿದ್ರಿ ಹಾಗೂ ಹೆಜಮಾಡಿಯಲ್ಲಿ ಸುಮಾರು ನಾಲ್ಕು ನೂರು ಅಟೋ-ರಿಕ್ಷಾಗಳಿದ್ದು, ಸಾರ್ವಜನಿಕರು ದ್ವಿಚಕ್ರ ವಾಹನ ಹಾಗೂ ಕಾರು, ಬಸ್ಸುಗಳಲ್ಲಿ ಸಂಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಪ್ರಾಣವನ್ನು ಒತ್ತೆ ಇಟ್ಟು ಭಯದಿಂದಲೇ ಇಲ್ಲಿ ಸಂಚರಿಸಬೇಕಾಗಿದೆ ಎಂದು ಪಡುಬಿದ್ರಿ, ಹೆಜಮಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿ ಅಧ್ಯಕ್ಷ ಪೌವ್ಲ್ ರೊಲ್ಪಿ ಡಿ ಕೋಸ್ತ ಹೇಳಿದರು. ಅವರು ಪಡುಬಿದ್ರಿ - ಹೆಜಮಾಡಿ ಕನ್ನಂಗಾರ್ ಬೈಪಾಸ್‌ ಬಳಿ ಸರ್ವಿಸ್ ರಸ್ತೆ ನಿರ್ಮಾಣದ ಕುರಿತಂತೆ ಶನಿವಾರ ಕಾಪು ಪತ್ರಿಕಾ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಷ್ಟ್ರೀಯ ಹೆದ್ಮಾರಿ 66ರ ಹೆಜಮಾಡಿ ಬಳಿ ಟೋಲ್ ಗೇಟ್ ನಿರ್ಮಾಣ ಸಂದರ್ಭದಲ್ಲಿ ಹೆದ್ದಾರಿಯಿಂದ ಹೆಜಮಾಡಿಯ ಒಳರಸ್ತೆ ಸಂಪರ್ಕಿಸುವುದಕ್ಕೆ ಕನ್ನಂಗಾರು ಬಳಿ ರಸ್ತೆ ವಿಭಜಕ ನಿರ್ಮಿಸಿರುವುದಿಲ್ಲ. ಸುಮಾರು 150 ಮೀಟರ್ ಹಿಂದಕ್ಕೆ ಪಡುಬಿದ್ರಿ ಬೀಡು ಬಳಿಯ ಸುಜ್ಞಾನ್ ಗೇಟ್ ಬಳಿ ಕಾನೂನು ಬಾಹಿರವಾಗಿ ಹೆದ್ದಾರಿಯ ವಿರುದ್ಧ ದಿಕ್ಕಿನಿಂದ ಎಲ್ಲಾ ಮಾದರಿಯ ವಾಹನಗಳು ಸಂಚರಿಸಿ ತೀರಾ ಅಪಾಯಕಾರಿಯಾಗಿ ಹೆಜಮಾಡಿಗೆ ಬರುತ್ತಿವೆ. ಈ ಸಂಕಷ್ಟವನ್ನು ಮನಗಂಡು ಕನ್ನಂಗಾ‌ರ್ ಬೈಪಾಸ್ ನಿಂದ ಪಡುಬಿದ್ರಿವರೆಗೆ ಸುಮಾರು 350 ಮೀಟರ್ ಸರ್ವಿಸ್ ರಸ್ತೆ ನಿರ್ಮಾಣಕ್ಕಾಗಿ ಆ ಸಮಯದಲ್ಲಿ ಉಭಯ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆ ಹಾಗೂ ಸರಕಾರವನ್ನು ಆಗ್ರಹಿಸಲಾಗಿತ್ತು. ಆ ಸಂದರ್ಭದಲ್ಲಿ ಜನರ ಸಮಸ್ಯೆಯನ್ನು ಮನಗಂಡು ಹೆದ್ದಾರಿ ಇಲಾಖೆಯ ಮುಖ್ಯ ಅಧಿಕಾರಿಗಳು ಶೀಘ್ರ ಸರ್ವಿಸ್ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು.

ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸುವ ನಿಟ್ಟಿನಲ್ಲಿ ಪಡುಬಿದ್ರಿ ಹೆಜಮಾಡಿ ಗ್ರಾಮಸ್ಥರ ಪಡುಬಿದ್ರಿ- ಹೆಜಮಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿಯನ್ನು ರಚಿಸಿರುತ್ತೇವೆ. ಈಗಾಗಲೇ ಸಮಸ್ಯೆ ಶೀಘ್ರ ಪರಿಹಾರಕ್ಕೆ ಆಗ್ರಹಿಸಿ ಉಡುಪಿಯ ಸಂಸದರು ಹಾಗೂ ಕೇಂದ್ರ ಸರಕಾರದ ಮಂತ್ರಿಗಳಾದ ಶೋಭಾ ಕರಂದ್ಲಾಜೆಯವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದು ಇವರು ನಮ್ಮ ಮನವಿಗೆ ತಕ್ಷಣವಾಗಿ ಸ್ಪಂದಿಸಿ ಈ ಸರ್ವಿಸ್ ರಸ್ತೆಯ ಕಾಮಗಾರಿ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಯವರಿಗೆ ಪತ್ರವನ್ನು ಬರೆದಿರುತ್ತಾರೆ. ಈ ಬಗ್ಗೆ ಗ್ರಾಮ ಪಂಚಾಯತ್ ಮಟ್ಟದಿಂದ ಸಚಿವರವರೆಗೂ ಮನವಿ ನೀಡಲಾಗಿದೆ. ನಮ್ಮ ನಿಯೋಗವು ಮಂಗಳೂರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರ ಕಚೇರಿಗೆ ಹಾಗೂ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಕಚೇರಿಗೆ ನಮ್ಮ ನಿಯೋಗವು ತೆರಳಿ ಪ್ರಾದೇಶಿಕ ಅಧಿಕಾರಿಯ ಭೇಟಿಯಾಗಿ ನಮ್ಮ ಮನವಿಯನ್ನು ಈಗಾಗಲೇ ಸಲ್ಲಿಸಿರುತ್ತೇವೆ. ಅತೀ ಶೀಘ್ರವಾಗಿ ಪಡುಬಿದ್ರಿಯಿಂದ ಕನ್ನಂಗಾರ್ ಬೈಪಾಸ್ ವರೆಗೆ ಸುಮಾರು 350 ಮೀಟರ್ ಉದ್ದದ ಸರ್ವಿಸ್ ರಸ್ತೆಯನ್ನು ನಿರ್ಮಿಸುವರೇ ಮಂಗಳೂರು ಯೋಜನಾ ನಿರ್ದೇಶಕರವರಿಗೆ ದೂರವಾಣಿ ಕರೆಯ ಮೂಲಕ ನಿರ್ದೇಶನವನ್ನು ನೀಡಿರುತ್ತಾರೆ. ಮಂಗಳೂರಿನಲ್ಲಿ ಯೋಜನಾ ನಿರ್ದೇಶಕರು, ಪ್ರಾದೇಶಿಕ ಅಧಿಕಾರಿಯವರ ನಿರ್ದೇಶನದಂತೆ ಎರಡು ದಿವಸದೊಳಗೆ ಅಂದಾಜು ಪಟ್ಟಿಯನ್ನು ತಯಾರಿಸಿ ಸುಮಾರು 4 ರಿಂದ 6 ತಿಂಗಳ ಒಳಗೆ ಡಾಮ‌ರು ರಸ್ತೆಯನ್ನು ನಿರ್ಮಿಸುವುದು ಹಾಗೂ ಇದೇ ದೀಪಾವಳಿ ಹಬ್ಬದ ನಂತರ ಅತೀ ಶೀಘ್ರವಾಗಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿರುತ್ತಾರೆ.

ಈ ಕಾಮಗಾರಿಯು ಅತೀ ಶೀಘ್ರವಾಗಿ ಕೈಗೊಳ್ಳದಿದ್ದಲ್ಲಿ, ಪಡುಬಿದ್ರಿ ಹೆಜಮಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಪಡುಬಿದ್ರಿ ಹಾಗೂ ಹೆಜಮಾಡಿಯ ಸಾರ್ವಜನಿಕರನ್ನು ಸೇರಿಸಿ ಕನ್ನಂಗಾರು ಬೈಪಾಸ್ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದರು. ಈ ಸಂದರ್ಭ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೆಶ್ಮಾ ಮೆಂಡನ್, ಪಡುಬಿದ್ರಿ ಗ್ರಾಮ ಪಂಚಾಯತ್ ಶಶಿಕಲಾ, ಹೋರಾಟ ಸಮಿತಿಯ ಕಾರ್ಯದರ್ಶಿ ಸನಾ ಇಬ್ರಾಹಿಂ, ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಭಾಸ್ ಜಿ.ಸಾಲ್ಯಾನ್, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕರ್ಕೇರ, ಅಲ್-ಅಝ್ ಹರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹೆಜಮಾಡಿ ಸಂಚಾಲಕ ಹಾಜಿ ಶೇಖಬ್ಬ ಉಪಸ್ಥಿತರಿದ್ದರು.