ದೀಪದ ಹಬ್ಬ : ನಿಸರ್ಗ ನೀರೆಗೆ ನೀರಾಜನ ಬೆಳಗುವ ಮುನ್ನ....!
Posted On:
12-11-2023 10:43PM
ಕತ್ತಲಲ್ಲಿ ಬೆಳಕಿನ ವಿಜ್ರಂಭಣೆ. ಹೊಲ-ಗದ್ದೆಗಳಲ್ಲಿ ಸೊಡರ ಸೊಂಪು. ಧಾನ್ಯದ ರಾಶಿಗೆ ಮನದುಂಬಿದ ಮಂಗಳಾರತಿ. ಹಟ್ಟಿ-ಕೊಟ್ಟಿಗೆಗಳೆಲ್ಲ ದೀಪಮಯ. ದೈವ-ದೇವ ಸನ್ನಿಗಳಲ್ಲಿ ದೀಪಾರಾಧನೆ. ಬಯಲು ಬೆಳ್ಳಂಬೆಳಕಾಗಿದೆ; ಆಲಯಗಳಲ್ಲಿ ಆನಂದ ತುಂಬಿದೆ. ಭೂರಮೆಗೆ ಕೃತಜ್ಞತಾರ್ಪಣೆ. ಬಲೀಂದ್ರನಿಗೆ ’ಬಲಿ’ ಸಮರ್ಪಣೆ. ’ಪೊಲಿ’ ಎಂಬ ಆಶಯದ ಸಮೃದ್ಧಿಯನ್ನು ಬೇಡುತ್ತಾ ನೆರವೇರುವ ಆಚರಣೆ. ಇದು ದೀಪಾವಳಿ.
ಎಲ್ಲ ಹಬ್ಬಗಳಿಗಿಂತಲೂ ಹೆಚ್ಚಿನ ಸಡಗರದಿಂದ, ಮುತುವರ್ಜಿಯಿಂದ, ಶ್ರದ್ಧೆಯಿಂದ ನಡೆಸಲ್ಪಡುವ ಈ ಪರ್ವ ನಿಜ ಅರ್ಥದ ಹಬ್ಬ, ಆದುದರಿಂದಲೆ ನಮಗಿದು ’ಪರ್ಬ'. ಮನೆ ತುಂಬಿರುತ್ತದೆ - ಕೃಷಿಯ ಶ್ರಮದ ಪ್ರತಿಫಲವಾಗಿ ಧಾನ್ಯ ರಾಶಿ ಬಿದ್ದಿದೆ. ಕೃಷಿ ಆಧರಿತ ಸಂಸ್ಕೃತಿಯಲ್ಲಿ ಭೂಮಿ, ಕೃಷಿ ಉತ್ಪನ್ನಗಳೇ ಪ್ರಧಾನ. ಆದುದರಿಂದ ಧಾನ್ಯ ದೇವತೆಗೆ ಆರಾಧನೆ. ನಿಸರ್ಗ ’ನೀರೆ’ಗೆ ನೀರಾಜನ.
ಈ ನಡುವೆ ಪ್ರತಿದಿನವೂ ಹಬ್ಬದ ಸಮೃದ್ಧಿಯನ್ನು ಸ್ಥಾಪಿಸಿ ಪ್ರಜೆಗಳನ್ನು ಪಾಲಿಸಿದ್ದ ಪುರಾತನ ಭೂನಾಥ ಬಲೀಂದ್ರನನ್ನು ಕೃತಜ್ಞತಾ ಭಾವದೊಂದಿಗೆ ಸ್ಮರಿಸುವುದು. ಆತನಿಂದಲೇ ಪೊಲಿ (ಹೊಲಿ) ಎಂಬ ಅತಿಶಯ ಸಮೃದ್ಧಿಯನ್ನು ಬೇಡುವುದು ನಡೆದು ಬಂದ ಪದ್ಧತಿ. ಇದು ಶತಮಾನಗಳಿಂದ ಸಾಗಿಬಂದಿದೆ. ಈ ಶ್ರದ್ಧೆ ಪ್ರಾಚೀನ, ಈ ಆಚರಣೆ ಇಂದಿಗೂ ಪ್ರಸ್ತುತವೆನಿಸುತ್ತದೆ. ಬಲಗುಂದದೆ, ಮೌಲ್ಯ ಕಳೆದುಕೊಳ್ಳದೆ ಆಚರಿಸಲ್ಪಡುತ್ತಿದೆ.
ಪರಮ ಧಾರ್ಮಿಕರು, ಆದರ್ಶ ಪುರುಷರು, ಜನತೆಯಲ್ಲಿ ಜನಾರ್ದನನ್ನು ಕಂಡ ಪುಣ್ಯಾತ್ಮರು ಇಲ್ಲಿ ರಾಜ್ಯವಾಳಿದ ಬಗ್ಗೆ ಪುರಾಣ ಹೇಳುತ್ತದೆ. ಇತಿಹಾಸ ವಿವರಿಸುತ್ತದೆ. ಆದರೆ ಪೂರ್ವದ ಬಲಿ ಚಕ್ರವರ್ತಿಯ ಅಸ್ತಿತ್ವ ಮಾತ್ರ ಸ್ಮರಣೀಯವಾಗುತ್ತದೆ. ಇದು ಬಲೀಂದ್ರನ ಪ್ರಜಾವತ್ಸಲ ಮನೋಧರ್ಮ. ನಡೆ-ನುಡಿ, ಆಚಾರ-ವಿಚಾರಗಳು, ಕೊಟ್ಟ ಮಾತಿಗೆ ತಪ್ಪದೆ ತನ್ನ ಸರ್ವಸ್ವವನ್ನೂ ದಾನಕೊಟ್ಟ ಸ್ಥಿರ ಮನಃಸ್ಥಿತಿಗಳು ಕಾರಣವಾಗಿ ಸ್ಥಾಯಿಯಾದ ಪುಣ್ಯ ಕೀರ್ತಿ ಇರಬೇಕು.
ಮಣ್ಣಿನ - ಮಣ್ಣಿನ ಮಕ್ಕಳ - ತನ್ನ ನಡುವಿನ ಅವಿನಾಭಾವ ಸಂಬಂಧವನ್ನು ಮರೆಯಲಾರದಷ್ಟು ಗಾಢವಾಗಿ ಸ್ವೀಕರಿಸಿರುವ ಈ ಮಹನೀಯ ಮತ್ತೆ ಬರುತ್ತಿದ್ದಾನೆ, ದೀಪ ಹಚ್ಚೋಣ, ಬಲಿ ಅರ್ಪಿಸೋಣ, ’ಪೊಲಿ’ಯಾಚಿಸೋಣ.
ಎಣ್ಣೆ ಸ್ನಾನ, ಮನೆ ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸುವುದು. ಜಾನುವಾರುಗಳ ಮೈ ತೊಳೆದು ಅಲಂಕರಿಸುವುದು, ಕೃಷಿ ಉಪಕರಣಗಳನ್ನು ಶುಚಿಗೊಳಿಸುವುದು. ಧಾನ್ಯದ ರಾಶಿಗೆ ಪೂಜೆ ಸಲ್ಲಿಸಲು ಸಿದ್ಧತೆಗಳನ್ನು ಮಾಡುವುದು. ಸೊಡರು (ತುಡಾರ್) ಹಚ್ಚಲು ದೀಪದ ಕಂಬ-ಬಲಿಗೆ ಸೊಪ್ಪು, ಕಾಡುಹೂಗಳನ್ನು ಸಂಗ್ರಹಿಸುವುದು. ಹೊಸಬಟ್ಟೆ ತೊಟ್ಟು ಅಮಾವಾಸ್ಯೆಯ ಕತ್ತಲು ಆವರಿಸುವ ಸಮಯ ನಿರೀಕ್ಷಿಸುತ್ತಾ ದಿನ ಕಳೆಯುವ ದಿನ ದೀಪಾವಳಿ.
ದೀಪ ಹಚ್ಚುವ ಮೊದಲು : ಬಲೀಂದ್ರನನ್ನು ಕರೆಯಲು, ದೀಪ ಹಚ್ಚಲು, ಬಲಿ ಸಮರ್ಪಿಸಲು ಸಿದ್ಧತೆಗಳಾಗಿವೆ. ಆದರೆ ಸೂರ್ಯಾಸ್ತವಾಗಿಲ್ಲ, ಕೊಂಚ ಸಮಯಾವಕಾಶವಿದೆ. ...ಈಗ ಯೋಚಿಸೋಣ.... ಪ್ರಕೃತಿಯ ಮಡಿಲಲ್ಲಿ ಪ್ರಕೃತಿಯನ್ನು ನಂಬಿ ಬದುಕು ಕಟ್ಟಿದ ಮಾನವ ಲಕ್ಷಾಂತರ ವರ್ಷಗಳಿಂದ ಮುಂದುವರಿದು ಬರುತ್ತಲೇ ಇದ್ದಾನೆ. ಕಾಲ ಬದಲಾಗಿದೆ. ಆಧುನಿಕತೆ ನಮ್ಮನ್ನು ಆವರಿಸಿದೆ. ಅಭಿವೃದ್ಧಿಯ ಅನಿವಾರ್ಯತೆ ನಮ್ಮ ಮುಂದಿದೆ. ಈ ಎಲ್ಲವೂ ಹಿಂದೆಯೂ ನಡೆದಿದೆ. ಅಭಿವೃದ್ಧಿ ಸಾಧಿಸಲ್ಪಟ್ಟಿದೆ. ನಾವು ಸುಸಂಸ್ಕೃತರಾಗಿ ಬದುಕು ಬಾಳಿದ್ದೇವೆ. ಎಲ್ಲವೂ ಸರಿಯಾಗಿತ್ತು. ಏಕೆಂದರೆ ಒಂದು ಸಮತೋಲನವಿತ್ತು.
ಕಾಡು-ನಾಡು-ನಗರ-ಹಳ್ಳಿಗಳ ಪ್ರಮಾಣ ಮನುಕುಲವನ್ನು ನಿಯಂತ್ರಿಸುತ್ತಿತ್ತು. ಪರಿಸರ ಪರಿಶುದ್ಧವಾಗಿತ್ತು. ಜೀವನಾಧಾರ ನದಿಗಳು ಸ್ವೇಚ್ಛೆಯಿಂದ ಹರಿಯುತ್ತಿದ್ದವು. ನದಿದಡದಲ್ಲಿ ನಾಗರಿಕತೆ ಬೆಳೆಯಿತು-ಸಂಸ್ಕೃತಿ ಮಡುಗಟ್ಟಿತು.
ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳು ಆತಂಕ ಉಂಟು ಮಾಡುತ್ತಿವೆ. ಪರಿಸರ ನಾಶ. ನಮ್ಮ ಮುಂದಿರುವ ಬಗೆಹರಿಸಲಾರದ ಸಮಸ್ಯೆ.
ಶುದ್ಧ ಪರಿಸರಬೇಕೆನ್ನುವುದು ಹಕ್ಕು ಹೊರತು ಅಭಿವೃದ್ಧಿ ವಿರೋಧವಲ್ಲ. ಪ್ರಾಕೃತಿಕ ಸ್ವರೂಪ ಬದಲಾವಣೆ ಬೇಡ. ಏಕೆಂದರೆ ನೈಜತೆ ಬೇಕು ಎಂಬ ಪ್ರೀತಿ. ಒಟ್ಟಿನಲ್ಲಿ ಈ ಕಾಳಜಿ ಮುಂದಿನ ತಲೆಮಾರಿಗೆ ಪ್ರಕೃತಿಯನ್ನು ಯಥಾಸ್ಥಿತಿಯಲ್ಲಿ ಹಸ್ತಾಂತರಿಸಬೇಕೆಂಬ ಮಹದಾಸೆ.
ಪ್ರಕೃತಿ-ಕೃಷಿ-ಸಂಸ್ಕೃತಿ ಈ ಮೂರನ್ನೂ ಆರಾಧಿಸುವ, ವಿವಿಧ ಪರಿಕಲ್ಪನೆಗಳೊಂದಿಗೆ ಸ್ವೀಕರಿಸಿರುವ ನಾವು ನಿಸರ್ಗದ ಮಡಿಲಲ್ಲೆ ನಿಸರ್ಗ ಸಹಜ ವಸ್ತುಗಳನ್ನು ಪಡೆಯುತ್ತಾ ಪೂಜೆ, ಆಚರಣೆಗಳನ್ನೂ ನಡೆಸುತ್ತೇವೆ. ಬಲೀಂದ್ರನ ಕಾಲದಲ್ಲಿ ಕೃಷಿ ಕಾಯಕ ಗಾಢವಾಗಿತ್ತು. ಸಮೃದ್ಧಿ ಇತ್ತು. ಆದರೆ ಇಂದು ಕೃಷಿ ಭೂಮಿ ಪರಿವರ್ತನೆಗೊಂಡಿವೆ. ಉದ್ಯಮಗಳು ಬೆಳೆದಿವೆ. ಕೃಷಿ ಭೂಮಿ ಕೃಶವಾಗಿದೆ. ಭೂಮಿ ಇದ್ದರೂ ಬೆಳೆ ಬೆಳೆಯುವ ಆಸಕ್ತಿ ಇಲ್ಲ. ಕೃಷಿ ಲಾಭದಾಯಕವಾಗಿಲ್ಲ ಎಂಬುದು ಒಂದು ಉತ್ತರವಿದೆ. ಏನಿದ್ದರೂ ಕೃಷಿಯೊಂದಿಗೆ ಕೃಷಿ ಸಂಸ್ಕೃತಿಯೂ ಕೃಶವಾಗುತ್ತಿದೆ ಎಂಬುದು ಸತ್ಯ ತಾನೆ?
ಹಾಗಿದ್ದರೆ ಇನ್ನೆಷ್ಟು ವರ್ಷ ಬಲೀಂದ್ರನ ಆಗಮನಕ್ಕೆ ಸಿದ್ಧರಾಗಬಹುದು, ಬಲೀಂದ್ರನಿಗೆ ಆತನು ಆಳಿದ ಸಮೃದ್ಧ ಭೂಮಿಯನ್ನು ತೋರಿಸಬಹುದು. ದೀಪ ಹಚ್ಚಲು ಕೃಷಿಭೂಮಿ ಬರಡು ನೆಲವಾಗುತ್ತದೆ. ಸೊಡರು ಹಚ್ಚಲು ಹಟ್ಟಿ-ಕೊಟ್ಟಿಗೆ ಇಲ್ಲವಾಗಬಹುದು. ಮಂಗಲಾರತಿ ಎತ್ತಲು ಭತ್ತದ ರಾಶಿಯೇ ಇಲ್ಲ. ಇಂತಹ ಸ್ಥಿತಿ ಸನ್ನಿಹಿತವಾಗುವ ದಿನ ಬರುತ್ತಿದೆ. ಬರಡು ನೆಲಕ್ಕೆ, ಧಾನ್ಯದ ರಾಶಿಯ ಸಮೃದ್ಧಿ ಇಲ್ಲದ ಮನೆಗೆ, ದನ-ಕರು-ಕೋಣ-ಎತ್ತುಗಳ ಸಾಕಣೆಗಳೇ ಇಲ್ಲದ ವಾಸ್ತವ್ಯಕ್ಕೆ ಬಲೀಂದ್ರನನ್ನು ಹೇಗೆ ಕರೆಯೋಣ. ಅಲ್ಪಸ್ವಲ್ಪ ಉಳಿಸಿರುವ ನಾವೇನೊ ಕರೆಯಬಹುದು, ನಮ್ಮ ಮುಂದಿನ ತಲೆ ಯಾರು ಬಲೀಂದ್ರನನ್ನು ಕರೆಯುವ ಕ್ರಮವನ್ನೇ ಮಾಡದಿರಬಹುದೋ ಏನೋ? ಸಜ್ಜನ, ಪುಣ್ಯಾತ್ಮ, ಮಳೆದೇವತೆ, ಬಂದು ಹೋಗುವ ದೇವರು ಎಂಬಿತ್ಯಾದಿ ಬಿರುದಾಂಕಿತ ಬಲಿಚಕ್ರವರ್ತಿಗೆ ಮನುಕುಲ ವಂಚಿಸಿದಂತಾಗದೆ....? ಕ್ಷಮಿಸು ಬಲೀಂದ್ರ.
ಮಕ್ಕಳು ಸಿಡಿಸಿದ ಪಟಾಕಿಯೊಂದು ಆಲೋಚನಾ ಪರನಾಗಿದ್ದ ನನ್ನನ್ನೂ ಎಚ್ಚರಿಸಿದೆ. ವಾಸ್ತವದಲ್ಲಿ ಕಾಣುತ್ತಿರುವುದು ಎಲ್ಲೆಡೆ ದೀಪ ಬೆಳಗುತ್ತಿದೆ. ಬಲೀಂದ್ರನನ್ನು ಕರೆಯುತ್ತಾ ಜನ ಬಯಲಲ್ಲಿ ದೀಪಾರಾಧನೆ ನಿರತರಾಗಿದ್ದರೆ, ಪೂರ್ವದ ಸೊಗಡು, ಬಲ, ಸಂಭ್ರಮ, ತೀವ್ರತೆ ಇಲ್ಲವಾಗಿದೆ. ಎಲ್ಲೆಲ್ಲೂ ಇರಬೇಕಾದ್ದು ಅಲ್ಲಲ್ಲಿದೆ.
ಓ....ಬಲೀಂದ್ರ ಎಂಬ ಕರೆಯೇ ಕ್ಷೀಣವಾಗುತ್ತಿದೆ. ಇದರೊಂದಿಗೆ ಕೃಷಿ ಆಧರಿಸಿ ಪ್ರಕೃತಿಯ ಮಡಿಲಲ್ಲಿ ರೂಪುಗೊಂಡ ಒಂದು ಸಮೃದ್ಧ ಸಂಸ್ಕೃತಿ ತನ್ನ ಪ್ರಖರತೆಯನ್ನೂ ಕ್ರಮೇಣ ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ.
ಈಗ..ಬುದ್ಧಿವಂತ ಮೊಮ್ಮಗ ಕೇಳುತ್ತಿದ್ದಾನೆ.... ಅಜ್ಜಾ....ಅಮಾವಾಸ್ಯೆಯ ಕತ್ತಲಲ್ಲಿ ಬೆಳಗುವ ಈ ಎಣ್ಣೆ ದೀಪದಲ್ಲಿ ಬಲೀಂದ್ರನಿಗೆ ಯಾವುದೂ ನಿಚ್ಛಳವಾಗಿ ಕಾಣದು ಅಲ್ಲವೇ....?
’ಓ ಬಲೀಂದ್ರ....ಬಲಿಗೆತೊಂದು ಪೊಲಿಕೊರ್ಲ.
ಲೇಖನ : ಕೆ.ಎಲ್.ಕುಂಡಂತಾಯ