ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮದರ್ ತೆರೆಸಾ ವಿಚಾರ ವೇದಿಕೆ ಮಂಗಳೂರು : ಸೌಹಾರ್ದ ದೀಪಾವಳಿಯ ಸಂಭ್ರಮ - 2023 ಸಂಪನ್ನ

Posted On: 14-11-2023 08:05AM

ಮಂಗಳೂರು : ವಾಮಂಜೂರಿನ ಮಂಗಳಜ್ಯೋತಿ ಜಂಕ್ಷನ್ ಬಳಿ ಅಂಧಕಾರದಲ್ಲಿ ಮುಳುಗಿದ ಸಮಾಜವನ್ನು ಬೆಳಕಿನತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಮದರ್ ತೆರೆಸಾ ವಿಚಾರ ವೇದಿಕೆ ,ಮಂಗಳೂರು ಇದರ ನೇತೃತ್ವದಲ್ಲಿ ಸೌಹಾರ್ದ ದೀಪಾವಳಿಯ ಸಂಭ್ರಮ - 2023ರ ಕಾರ್ಯಕ್ರಮ ಜರಗಿತು. ಸೌಹಾರ್ದ ದೀಪಾವಳಿ ಸಂಭ್ರಮ-2023 ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀಯುತ ಮುಲ್ಲೈ ಮುಹಿಲನ್ ರವರು ದೀಪ ಬೆಳಗಿಸಿ ಉದ್ಘಾಟಿಸಿ, ದೀಪಗಳ ಹಬ್ಬ ದೀಪಾವಳಿಯಲ್ಲಿ ಎರಡು ಅರ್ಥ ಕಾಣುತ್ತೇವೆ. ತನ್ನನ್ನು ಉರಿಸಿಕೊಂಡು ಬೇರೆಯವರಿಗೆ ಬೆಳಕು ಕೊಡುವುದು ಒಂದು ಅರ್ಥವಾದರೆ, ಒಂದು ದೀಪದಿಂದ ನೂರಾರು-ಸಾವಿರಾರು ದೀಪಗಳು ಬೆಳಗುತ್ತದೆ ಎಂಬುದು ಇನ್ನೊಂದು ಅರ್ಥ. ಬೆಳಕು ಜ್ಞಾನದ ಸಂಕೇತವೂ ಹೌದು. ಎಲ್ಲರೂ ಕೂಡಿಕೊಂಡು ಈ ಬೆಳಕಿನ ಹಬ್ಬ ಆಚರಿಸಬೇಕು. ಆಗಲೇ ದೀಪಾವಳಿ ಅರ್ಥಪೂರ್ಣವಾಗುವುದು ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಂಗಳೂರು ಪ್ರಗತಿಪರ ಅಧ್ಯಾಪಕರ ವೇದಿಕೆಯ ಅಧ್ಯಕ್ಷ ಡಾ. ವಸಂತ್ ಕುಮಾರ್ ಮಾತನಾಡಿ, ಬೆಳಕು ಎಲ್ಲರಿಗೂ ಬೇಕು. ಹಾಗಾಗಿ ಬೆಳಕಿನ ಹಬ್ಬಕ್ಕೆ ಜಾತಿ-ಧರ್ಮ ಎಂಬುದಿಲ್ಲ. ದಾರಿ ತಪ್ಪುತ್ತಿರುವ ಯುವಕರಿಗೆ ಉತ್ತಮ ಸಂಸ್ಕಾರ ನೀಡಿ ಉತ್ತಮ ಸಮಾಜದ ನಿರ್ಮಿಸಬೇಕು. ಸಮಾಜ ಎಂಬ ಮೂರಕ್ಷರದಲ್ಲಿ `ಸಂಬ೦ಧಗಳು ಮಾನವನಲ್ಲಿ ಜನಿಸಬೇಕು ಎಂಬ ಅರ್ಥ ಅಡಗಿದೆ. ಅದೇ ಸಮಾಜ ಭಾವನೆ. ಸಂಸ್ಕಾರ ಎಂದರೆ ಬರೇ ದೇವಸ್ಥಾನ ಕಟ್ಟುವುದು ಮೂರ್ತಿ ಕೆತ್ತುವುದಲ್ಲ. ಎಲ್ಲರಿಗೂ ಸಮಾನ ಶಿಕ್ಷಣ ಮತ್ತು ಆರೋಗ್ಯ ನೀಡುವುದು ಎಂದರು.

ಮ೦ಗಳೂರಿನ ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ. ಸುದೀಪ್ ಪೌಲ್ ಮಾತನಾಡಿ, ಭಾರತದ ಇತಿಹಾಸ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಕಂಡಿದೆ. ಆಗ ಎಲ್ಲರೂ ಪ್ರೀತಿ, ಸಾಮರಸ್ಯ, ಭಾವೈಕ್ಯತೆಯಿಂದ ಜೀವಿಸುತ್ತಿದ್ದೆವು. ಆದರೆ ಈಗ ಎಲ್ಲವೂ ಬದಲಾಗಿದೆ. ದೀಪಾವಳಿ ಎಲ್ಲ ಧರ್ಮದ ಗಡಿ ಮೀರಿ ಆಚರಿಸುವ ಹಬ್ಬವಾಗಲಿ ಎಂದು ಶುಭ ಹಾರೈಸಿದರು.

ಸಂತ ಮದರ್ ತೆರೇಸಾ ವಿಚಾರ ವೇದಿಕೆ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಅಧ್ಯಕ್ಷತೆ ವಹಿಸಿದ್ದರು. ಕು. ಲತೀಕ್ಷಾ ಸ್ವಾಗತ ನೃತ್ಯ ಮಾಡಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ ಪ್ರಸ್ತಾವಿಕ ಮಾತನ್ನಾಡಿದರು. ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್, ಮಂಗಳಜ್ಯೋತಿಯ ಕೊರಗಜ್ಜ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಲಕ್ಷ್ಮಣ್ ವಾಮಂಜೂರು, ಮಂಗಳೂರು ಬೆಥನಿ ಸಿಸ್ಟರ್ ಪ್ರೊವಿನ್ಸಿಯಲ್ ಸುಪೀರಿಯರ್ ಸಿಸ್ಟರ್ ಸಿಸಿಲಿಯಾ ಮೆಂಡೋನ್ಸಾ,ಮಂಜುಳ ನಾಯಕ್ (ಜಂಟಿ ಕಾರ್ಯದರ್ಶಿ), ಡಾಲ್ಫಿ ಡಿ’ಸೋಜ(ಕೋಶಾಧಿಕಾರಿ) ಹಾಗೂ ಇತರ ಹಿರಿಯ ಗಣ್ಯರು, ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮನೋಜ್ ಕುಮಾರ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಮತ್ತು ಬಳಗದವರು ಸೌಹಾರ್ದ ನೃತ್ಯ ಪ್ರದರ್ಶಿಸಿದರು.