ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನವೆಂಬರ್ 20 : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ

Posted On: 18-11-2023 06:36PM

ಪಡುಬಿದ್ರಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸೊಸೈಟಿಯ ಕೇಂದ್ರ ಕಚೇರಿ ಸಹಕಾರ ಸಂಗಮದ ವೈ ಲಕ್ಷ್ಮಣ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ಹಾಗೂ ಸಹಕಾರ ಶಿಕ್ಷಣ, ತರಬೇತಿ ಪರಿಷ್ಕರಣೆ ದಿನ, ಸೊಸೈಟಿಯ ನವೀಕೃತ ಹವಾನಿಯಂತ್ರಿತ ಸಭಾಂಗಣ ಉದ್ಘಾಟನೆ, ಸನ್ಮಾನ, ಕೃಷಿ ಸಹಾಯ ಧನ ವಿತರಣಾ ಸಮಾರಂಭ ಜರಗಲಿದೆ ಎಂದು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ ಸುಧೀರ್‌ ಕುಮಾರ್ ಹೇಳಿದರು. ಅವರು ಶನಿವಾರ ಪಡುಬಿದ್ರಿ ಸೊಸೈಟಿಯ ಸಭಾಂಗಣದಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

70 ನೇ ಅಖಿಲ ಭಾರತ ಸಹಕಾರ ಸಪ್ತಾಹವು ನವೆಂಬರ್ 14ರಂದು ಪ್ರಾರಂಭಗೊಂಡಿದ್ದು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 20, ಸೋಮವಾರ ಪಡುಬಿದ್ರಿಯಲ್ಲಿ 70 ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ನಡೆಯಲಿದೆ. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷ ವೈ ಸುಧೀರ್‌ ಕುಮಾರ್ ಅಧ್ಯ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಮಾರೋಪ ಸಮಾರಂಭವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಮ್.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸುವರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ನವೀಕೃತ ಹವಾನಿಯಂತ್ರಿತ ವೈ ಲಕ್ಷ್ಮಣ ಸಭಾಂಗಣವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಅರ್. ಮೆಂಡನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಹೆಚ್. ಎನ್., ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ., ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ, ದಿಕ್ಸೂಚಿ ಭಾಷಣಕಾರರಾಗಿ ನಿವೃತ್ತ ಪ್ರಾಂಶುಪಾಲ ಡಾ. ಗಣನಾಥ್ ಎಕ್ಕಾರ್ ಭಾಗವಹಿಸುವರು.

ಈ ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದ ಅಪ್ರತಿಮ ಸಾಧಕರಾದ ಡಾ. ಎಮ್.ಎನ್. ರಾಜೇಂದ್ರ ಕುಮಾರ್, ನೂತನ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಪಡುಬಿದ್ರಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಶಶಿಕಲಾ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ಹರೀಶ್ ಹೆಜ್ಮಾಡಿ, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿಯಾಗಿ ನಿಯೋಜಿತಗೊಂಡು ಸೊಸೈಟಿಯಲ್ಲಿ ವಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿಗೊಂಡಿರುವ ಬಾಲಕೃಷ್ಣ ರಾವ್‌ರವರನ್ನು ಸನ್ಮಾನಿಸಲಾಗುವುದು. ಕೃಷಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ರೈತರಿಗೆ ಸಹಕಾರಿಯಾಗುವಂತೆ ಸೊಸೈಟಿಯು ಪ್ರಾರಂಭಿಸಿರುವ ಸಂಗಮ ಕೃಷಿ ನಿಧಿಯಿಂದ 1.25 ಎಕ್ರೆಗಿಂತ ಹೆಚ್ಚಿನ ಜಾಗದಲ್ಲಿ ಭತ್ತದ ಕೃಷಿ ಬೆಳೆಯುತ್ತಿರುವ ಸೊಸೈಟಿ ವ್ಯಾಪ್ತಿಯ ಸುಮಾರು 200 ಕ್ಕೂ ಹೆಚ್ಚು ರೈತರಿಗೆ ಕಳೆದ ಸಾಲಿನಂತೆ ಈ ವರ್ಷವೂ ಕೃಷಿ ಸಹಾಯಧನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪಡುಬಿದ್ರಿ ಶ್ರೀ ಮಹಾಗಣಪತಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಬಳಕೆಗೆ 25 ಕುರ್ಚಿಗಳ ಹಸ್ತಾಂತರ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಮುಖ್ಯಕಾರ್ಯನಿರ್ವಾಹಣಾಕಾರಿ ಹಾಲಪ್ಪ ಕೋಡಿಹಳ್ಳಿ, ನಿರ್ದೇಶಕರು ಉಪಸ್ಥಿತರಿರುವರು.

ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ನಿರ್ದೇಶಕರಾದ ಶಿವರಾಮ ಶೆಟ್ಟಿ, ಗಿರೀಶ್ ಪಲಿಮಾರು, ವಾಸುದೇವ ಪಲಿಮಾರು, ರಾಜಾರಾಮ್ ರಾವ್, ವೈ.ಜಿ.ರಸೂಲ್, ಯಶವಂತ್ ಪಡುಬಿದ್ರಿ, ಮಾಧವ ಆಚಾರ್ಯ, ಸ್ಟಾನ್ಲಿ ಕ್ವಾಡ್ರಸ್, ಸುಚರಿತಾ ಎಲ್.ಅಮೀನ್, ಕಾಂಚನಾ, ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಕಾರಿ ದೀಪಕ್ ಸಾಲ್ಯಾನ್ ಉಪಸ್ಥಿತರಿದ್ದರು.