ಸರ್ಕಾರದ ಸೌಲಭ್ಯ ಪಡೆಯಲು ರೈತರು ಜಮೀನು ವಿವರ FRUITSನಲ್ಲಿ ದಾಖಲಿಸಿ : ತಹಶಿಲ್ದಾರ್ ಡಾ. ಪ್ರತಿಭಾ ಆರ್. ಸೂಚನೆ
Posted On:
22-11-2023 08:57PM
ಕಾಪು : ರೈತರು ಸರ್ಕಾರದ ಸೌಲಭ್ಯ ಪಡೆಯಲು, ಯಾವುದೇ ಭಯ ಇಲ್ಲದೇ ಜಮೀನಿನ ವಿವರಗಳನ್ನು FRUITS ತಂತ್ರಾಂಶದಲ್ಲಿ ದಾಖಲು ಮಾಡಬೇಕು ಕಾಪು ತಾಲ್ಲೂಕು ತಹಶಿಲ್ದಾರ್ ಡಾ. ಪ್ರತಿಭಾ ಆರ್ ತಿಳಿಸಿದ್ದಾರೆ.
ಬೆಳೆ ನಷ್ಟವಾಗಿರುವ ರೈತರು ಪರಿಹಾರ ಧನ ಪಡೆಯಲು ಭೂಮಿ ವಿವರ ಇರುವ ಎಫ್‌ಐಡಿ Fruits ID (FID) ಹೊಂದಿರಬೇಕು. ಎಫ್‍ಐಡಿ ಗುರುತಿನ ಸಂಖ್ಯೆ ಪಡೆಯಲು ರೈತರು FRUITS ತಂತ್ರಾಂಶದಲ್ಲಿ ತಮ್ಮ ಹಕ್ಕಿನಲ್ಲಿರುವ ಎಲ್ಲಾ ಸಾಗುವಳಿ ಭೂಮಿಗಳ ವಿವರಗಳನ್ನು ಸೇರಿಸಿರಬೇಕು.
ರೈತರು ಸರ್ಕಾರದ ಸೌಲಭ್ಯ ಪಡೆಯಲು ಎಫ್‍ಐಡಿ ಬೇಕು, ಏನಿದು ಐಡಿ ? : ಕರ್ನಾಟಕ ಸರ್ಕಾರ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು ಮತ್ತು ಕೃಷಿಗೆ ಪೂರಕವಾದ ಇಲಾಖೆಗಳ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಅಧೀನ ಕಚೇರಿಗಳಲ್ಲಿ ರೈತರ ಫ್ರೂಟ್ಸ್ ಐಡಿ ಸೃಷ್ಟಿಸಲು ವ್ಯವಸ್ಥೆ ಮಾಡಿದೆ. ರೈತರು ಇದರ ಸದುಪಯೋಗ ಪಡೆಯಬೇಕೆಂದು ಕರೆ ನೀಡಲಾಗಿದೆ. FRUITS (Farmers Registration & Unified beneficiary Information System) ಗುರುತಿನ ಸಂಖ್ಯೆಯಲ್ಲಿ ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಸರ್ಕಾರದ ಪರಿಹಾರ ಸೌಲಭ್ಯ ದೊರೆಯುವುದರಿಂದ ರೈತರು ತಾವು ಹೊಂದಿರುವ ಎಲ್ಲಾ ಜಮೀನಿನ ಸರ್ವೇ ನಂಬರ್ ವಿಸ್ತೀರ್ಣಗಳನ್ನು ಕೂಡಲೇ ಫ್ರೂಟ್ಸ್ (Fruits) ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕು. ನವೆಂಬರ್ 30ರ ತನಕ ದಾಖಲು ಮಾಡಲು ಅವಕಾಶ ನೀಡಲಾಗಿದೆ.
ರೈತರ ಫ್ರೂಟ್ಸ್ ಐಡಿಯಲ್ಲಿ ರೈತರ ಜಮೀನು, ಆಧಾರ್ ನಂಬರ್, ಬ್ಯಾಂಕ್ ಅಕೌಂಟ್ ಸೇರಿದಂತೆ ಎಲ್ಲಾ ವಿವರ ಇರುತ್ತದೆ. ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆಯಾದರೆ ಡಿಬಿಟಿ (Direct Beneficiary Transfer) ಮೂಲಕ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಕಾಪು ತಾಲ್ಲೂಕಿನಲ್ಲಿ FRUITS ತಂತ್ರಾಂಶದಲ್ಲಿ ರೈತರ ಎಲ್ಲಾ ಜಮೀನಿನ ಮಾಹಿತಿಯನ್ನು ನವೆಂಬರ್ 30 ರೊಳಗೆ ದಾಖಲಿಸಲು ಮನವಿ ಮಾಡಲಾಗಿದೆ.
ಈ ಕಾರ್ಯವನ್ನು ಕ್ಷೇತ್ರ ಮಟ್ಟದಲ್ಲಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಲಾಗಿನ್‌ಗಳ ಮೂಲಕ ಮುಂದಿನ ದಿನಗಳಲ್ಲಿ ಅಭಿಯಾನ ರೂಪದಲ್ಲಿ ಕೈಗೊಂಡು, FRUITS ತಂತ್ರಾಂಶದಲ್ಲಿ ಶೇ. 100 ರಷ್ಟು Land Updation ಪ್ರಗತಿ ಸಾಧಿಸಲು ಸರ್ಕಾರ ನಿರ್ದೇಶನ ನೀಡಿದೆ.
FRUITS ತಂತ್ರಾಂಶದ ಮಾಹಿತಿಯನ್ನು ಸರ್ಕಾರದ ವಿವಿಧ ಸವಲತ್ತುಗಳಾದ ಬೆಳೆ ವಿಮೆ, ಬೆಳೆ ಸಾಲ ವಿತರಣೆ, ಬೆಳೆ ಪರಿಹಾರ ವಿತರಣೆ, ಬೆಂಬಲ ಬೆಲೆ ಅನುಷ್ಟಾನ, ಪಹಣಿಯಲ್ಲಿ ಬೆಳೆ ದಾಖಲಾತಿ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳ ವಿತರಣೆಗೆ ಬಳಕೆ ಮಾಡುತ್ತಿದ್ದು, ಕಂದಾಯ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ರೇಷ್ಮೆ, ಸಹಕಾರ ಇಲಾಖೆ ಹಾಗೂ ಸಹಕಾರ ಮತ್ತು ವಾಣಿಜ್ಯ ಬ್ಯಾಂಕ್‌ಗಳಲ್ಲಿ ದತ್ತಾಂಶವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಜಿಲ್ಲೆಯ ರೈತ ಬಾಂಧವರು ತಮ್ಮ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆ ಮತ್ತು ಶಾಖೆಯ ವಿವರ, ಬ್ಯಾಂಕ್ ಐ.ಎಫ್.ಎಸ್.ಸಿ ಕೋಡ್, ಪಡಿತರ ಚೀಟಿಯ ವಿವರ, ಮೊಬೈಲ್ ಸಂಖ್ಯೆ, ಪರಿಶಿಷ್ಟ ಜಾತಿ/ ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ತಮ್ಮ ಮಾಲೀಕತ್ವದ ಎಲ್ಲಾ ಜಮೀನಿನ ಸರ್ವೇ ನಂಬರ್ ವಿವರವನ್ನು ತಮ್ಮ ಹತ್ತಿರದ ತಹಶೀಲ್ದಾರ್ ಕಛೇರಿ, ಕಂದಾಯ ನಿರೀಕ್ಷಕರ ಕಛೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ, ನ್ಯಾಯಬೆಲೆ ಅಂಗಡಿ ಅಥವಾ ಕೃಷಿ/ ತೋಟಗಾರಿಕೆ/ ರೇಷ್ಮೆ ಇಲಾಖೆಯ ಕಛೇರಿಗಳಿಗೆ ಕೂಡಲೇ ಒದಗಿಸಿ ತಮ್ಮ ಮಾಲೀಕತ್ವದ ಎಲ್ಲಾ ಪಹಣಿಯ ದಾಖಲೆಗಳನ್ನು ನವೆಂಬರ್ 30ರೊಳಗೆ ನೋಂದಾಯಿಸಿಕೊಳ್ಳಲು ಕಾಪು ತಾಲ್ಲೂಕು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಸೂಚಿಸಿದ್ದಾರೆ.