ಡಿಸೆಂಬರ್ 3, 4 : ಶಂಕರಪುರ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದ ಶಿಲಾಮಯ ಗರ್ಭಗುಡಿಯಲ್ಲಿ ಕಾಲಭೈರವ ಸ್ವಾಮಿ ಪ್ರತಿಷ್ಠೆ ; ಗುರು ವಂದನೆ ಕಾರ್ಯಕ್ರಮ
Posted On:
25-11-2023 06:04PM
ಶಂಕರಪುರ : ಕಾಪು ತಾಲೂಕಿನ ಶಂಕರಪುರ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಇಲ್ಲಿ ಶಿಲಾಮಯ ಗರ್ಭಗುಡಿಯಲ್ಲಿ ಕಾಲಭೈರವ ಸ್ವಾಮಿ ಪ್ರತಿಷ್ಠೆ ಮತ್ತು ಗುರು ವಂದನೆ ಕಾರ್ಯಕ್ರಮ ಡಿಸೆಂಬರ್ 3 ಮತ್ತು 4 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಶನಿವಾರ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ಮಾತನಾಡಿದ ದ್ವಾರಕಾಮಾಯಿ ಮಠದ ಧರ್ಮದರ್ಶಿ ಶ್ರೀ ಸಾಯಿ ಈಶ್ವರ್ ಗುರೂಜಿ, ದಾನಿಗಳು, ಭಕ್ತರ ಸಹಾಯದಿಂದ 3 ವರ್ಷದ ಮೊದಲು ಜೀರ್ಣೋದ್ದಾರಗೊಂಡ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನವು ಧಾರ್ಮಿಕ, ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬರುತ್ತಿದ್ದು ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯ, ಹೊರ ದೇಶದ ಭಕ್ತರನ್ನು ಆಕರ್ಷಿಸುವ ಈ ಪುಣ್ಯ ಕ್ಷೇತ್ರವಾಗಿದೆ.
ಮಠದ ಆವರಣದಲ್ಲಿಯೇ 2018ರಲ್ಲಿ ಶ್ರೀ ಸಾಯಿನಾಥರ 100ನೇ ಪುಣ್ಯಸ್ಮರಣೆಯ ದಿನದಂದು ಬಿಲ್ವಮರದ ಕಟ್ಟೆಗೆ "ಪ್ರಾಣಿ ಪಕ್ಷಿ ಮೋಕ್ಷ ಕಟ್ಟೆ" ಎಂದು ಸಂಕಲ್ಪಿಸಿ ಮೋಕ್ಷಕಾರಕ ಶಿವನ ಸಂಕಲ್ಪದಲ್ಲಿ ಪೂಜೆ ಸಲ್ಲುತ್ತಿತ್ತು. 2022ರಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದ ಗುರುಗಳಾದ ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ ಬಾಬಾರು ಇಲ್ಲಿ ಶಿವನೇ ಕಾಲಭೈರವನಾಗಿ ಮೋಕ್ಷ ಕಟ್ಟೆಯಲ್ಲಿ ನೆಲೆಸಿದ್ದಾನೆ ಎಂದು ತಿಳಿಸಿ, ಈ ಕಟ್ಟೆಯಲ್ಲಿ ಉಜ್ಜಯಿನಿಯ ಸಂಕಲ್ಪದಲ್ಲಿ ಕಾಲ ಭೈರವ - ಸ್ವಾಮಿಗೆ ಸ್ಥಾನವನ್ನು ನೀಡಬೇಕು ಎಂದು ಪ್ರಸ್ತಾಪಿಸಿದರು. ಗುರುವಿನ ಆಜ್ಞೆಯಂತೆ ಅದೇ ಜಾಗದಲ್ಲಿ ಶಿಲಾಮಯ ಗರ್ಭಗುಡಿಯಲ್ಲಿ ಪಾನ ಪ್ರಿಯ ಕಾಲಭೈರವ ಸ್ವಾಮಿಯನ್ನು ಇದೇ 2023ರ ಡಿಸೆಂಬರ್ 3 ಮತ್ತು 4ರಂದು ಗುರುವರ್ಯರಾದ ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ ಬಾಬಾರ ಉಪಸ್ಥಿತಿಯಲ್ಲಿ ವೇದಮೂರ್ತಿ ಶ್ರೀ ದೇವದಾಸ್ ತಂತ್ರಿ, ಮುಂಬೈ ಇವರ ನೇತೃತ್ವದಲ್ಲಿ ಪ್ರತಿಷ್ಠಾಪನೆ ನಡೆಯಲಿದೆ.
ಈ ಧಾರ್ಮಿಕ ಸಮಾರಂಭದಲ್ಲಿ ದೇಶದ ನಾನಾ ರಾಜ್ಯಗಳಿಂದ 110ಕ್ಕೂ ಹೆಚ್ಚು ಸಾಧು ಸಂತರು ಭಾಗವಹಿಸಲಿದ್ದಾರೆ.
ಡಿಸೆಂಬರ್ 3ರಂದು ಬೆಳಿಗ್ಗೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಬಳಿಕ 11:30ಕ್ಕೆ ಶಿರ್ವ ಮಟ್ಟಾರ್‌ನ ಪಾಂಜಗುಡ್ಡೆಯಲ್ಲಿ ಮಠದ ಮಹತ್ವದ ಯೋಜನೆಯಾದ ಸಂತ ಆಶ್ರಯ ಧಾಮಕ್ಕೆ ಸಾಧು ಸಂತರು ಭಗವತ್ ಧ್ವಜವನ್ನು ಇಟ್ಟು ದೀಪ ಬೆಳಗಿಸಿ ಪ್ರಾರ್ಥಿಸಲಿದ್ದಾರೆ. ಮಧ್ಯಾಹ್ನ 3:30ಕ್ಕೆ ಅಖಿಲ ಭಾರತೀಯ ಸಂತ ಸಮಿತಿಯ ಪ್ರಾಂತ್ಯ ಸಭೆಯು ನಡೆಯಲಿದೆ. ಸಂಜೆ 5ಕ್ಕೆ ಸಾಲ್ಮರ ಶಂಕರಪುರದಿಂದ ಕಾಲಭೈರವ ಸ್ವಾಮಿ ಪ್ರತಿಮೆ ಹಾಗೂ ಹಸಿರು ಹೊರಕಾಣಿಕೆ ಮೆರವಣಿಗೆ ನಡೆಯಲಿದೆ.
ಡಿಸೆಂಬರ್ 4 ರಂದು ಬೆಳಿಗ್ಗೆ ಪ್ರತಿಷ್ಠೆ ಕಲಶಾಭಿಷೇಕ, 10:30ಕ್ಕೆ ಗುರುವಂದನೆ, 12:30 ಮಹಾಪೂಜೆ ನಂತರ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಎಂದರು.
ಈ ಸಂದರ್ಭ ಮಠದ ಟ್ರಸ್ಟಿ ವಿಶ್ವನಾಥ ಸುವರ್ಣ, ಗೌರವ ಅಧ್ಯಕ್ಷ ಸುಧಾಕರ್ ಶೆಟ್ಟಿ, ಕ್ಷೇತ್ರದ ಮಾರ್ಗದರ್ಶಕರುಗಳಾದ ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ, ವಿಜಯ್ ಕುಂದರ್ ಉಪಸ್ಥಿತರಿದ್ದರು.