ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು ಮಾರಿಯಮ್ಮನ ಪ್ರಸಾದದಿಂದ ಬೆಂಗಳೂರು ಕಂಬಳ ಗೆಲ್ಲುವಂತಾಯಿತು : ನಂದಳಿಕೆ ಶ್ರೀಕಾಂತ್ ಭಟ್

Posted On: 29-11-2023 07:04PM

ಕಾಪು : ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಕಾಪು ಮಾರಿಯಮ್ಮನ ದಿವ್ಯ ಸಾನಿಧ್ಯವಾದ ಕಾಪು ಹೊಸ ಮಾರಿಗುಡಿ ದೇವಳದಲ್ಲಿ ನವೆಂಬರ್ 28 ಮತ್ತು 29 ರಂದು ಕಾಲಾವಧಿ ಜಾರ್ದೆ ಮಾರಿ ಪೂಜೆಯು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ನಡೆಯಿತು.

ಬೆಂಗಳೂರು ಕಂಬಳ ಸಮಿತಿಯ ಗೌರವಾದ್ಯಕ್ಷರು ಮತ್ತು ಕಾಪು ಹೊಸ ಮಾರಿಗುಡಿ ದೇವಸ್ಥಾನದ ಗೌರವಾಧ್ಯಕ್ಷರಾದ ಎಮ್. ಆರ್.ಜಿ ಗ್ರೂಪ್ ನ ಆಡಳಿತ ನಿರ್ದೇಶಕರಾದ ಉದ್ಯಮಿ ಕೊರಂಗ್ರಪಾಡಿ ದೊಡ್ಡಮನೆ ಪ್ರಕಾಶ್ ಶೆಟ್ಟಿ ಹಾಗೂ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆದ ಬೆಂಗಳೂರು ಕಂಬಳ ನಮ್ಮ ಕಂಬಳದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕವನ್ನು ಹೆಗಲಿಗೆರಿಸಿಕೊಂಡ ನಂದಳಿಕೆ ಶ್ರೀಕಾಂತ್ ಭಟ್ ಅವರು ದೇವಸ್ಥಾನಕ್ಕೆ ಭೇಟಿಕೊಟ್ಟು ಭರದಿಂದ ಸಾಗುತ್ತಿರುವ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿ ಶ್ರೀದೇವಿಯ ದರುಶನವನ್ನು ಪಡೆದು ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಇವರಿಂದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರ ಸಮ್ಮುಖದಲ್ಲಿ ಅಮ್ಮನ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಉದ್ಯಾನ ನಗರಿ, ರಾಜ್ಯ ರಾಜಧಾನಿಯಲ್ಲಿ ನಡೆದ ಪ್ರಥಮ ಕಂಬಳದಲ್ಲಿ ಪ್ರಥಮ ಬಹುಮಾನ ಕಾಪುವಿನ ಅಮ್ಮನ ದಯೆಯಿಂದ ನಮಗೆ ಬಂದಿದೆ. ಪ್ರತೀ ಕಂಬಳಕ್ಕೂ ಹೊರಡುವ ಮುನ್ನ ಅಮ್ಮನ ಪ್ರಸಾದ ಹಿಡಿದುಕೊಂಡೆ ನಾನು ಇಲ್ಲಿಂದ ಹೊರಡುವುದು, ಈ ಬಾರಿಯೂ ಅಮ್ಮನ ಪ್ರಸಾದವನ್ನು ಕೋಣಗಳಿಗೆ ಹಾಕಿ ಕಂಬಳದ ಕರೆಗೆ ಇಳಿಸಿದ್ದೆ. ನನಗೆ ಏನೇ ಗೌರವ ಬಂದಿದ್ದರೂ ಅದು ಅಮ್ಮನ ಆಶೀರ್ವಾದ ಎಂದು ನಾನು ನಂಬುತ್ತೇನೆ, ಈ ದೇಗುಲ ಜೀರ್ಣೋದ್ಧಾರಗೊಳ್ಳುತ್ತಿದ್ದು ಇಲ್ಲಿನ ಒಂದೊಂದು ಸ್ತಂಭಗಳನ್ನು ನೋಡುವಾಗ ಮೈ ರೋಮಾಂಚನಗೊಳ್ಳುತ್ತಿದೆ. ಕೇವಲ ಭಕ್ತರ ನೆರವಿನಿಂದ ಇಷ್ಟು ದೊಡ್ಡ ದೇವಸ್ಥಾನ ನಿರ್ಮಾಣ ಆಗುತ್ತಿರುವುದು ಅಮ್ಮನ ದಯೆಯೇ ಹೊರತು ಬೇರೇನೂ ಅಲ್ಲ. ಅಧ್ಯಕ್ಷರಾದ ವಾಸುದೇವ ಶೆಟ್ರು ಮತ್ತು ಸಮಿತಿಯವರು ಅಮ್ಮನ ಪ್ರೇರಣೆಯಿಂದ ಈ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಕೆಲಸ ಒಬ್ಬರಿಂದ ಆಗುವಂತದ್ದಲ್ಲ ಲಕ್ಷಾಂತರ ಭಕ್ತರ ನೆರವಿನಿಂದ ಆಗುತ್ತಿದೆ, ಇದಕ್ಕಾಗಿ "ಕಾಪುವಿನ ಅಮ್ಮನ ಮಕ್ಕಳು" ಎಂಬ ತಂಡವೊಂದನ್ನು ರಚಿಸಲಾಗಿದೆ 9 ಶಿಲೆಯ ಬಾಬ್ತು ರೂಪಾಯಿ 9,999 ನೀಡಿದ್ದಲ್ಲಿ ಈ ತಂಡಕ್ಕೆ ಸೇರ್ಪಡೆಯಾಗಬಹು, ಊರ ಪರವೂರ, ದೇಶ ವಿದೇಶಗಳ ಭಕ್ತರನ್ನು ಸೇರಿಸಿ ಆರ್ಥಿಕ ಕ್ರೋಡಿಕರಣ ಆಗುತ್ತಿದೆ. ನಾವು ಕೂಡಾ ನಮ್ಮಿಂದ ಆಗುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಈವರೆಗೆ ಜೂನಿಯರ್ ವಿಭಾಗದಲ್ಲಿ 167 ಪದಕ, ಸೀನಿಯರ್ ವಿಭಾಗದಲ್ಲಿ 59 ಪದಕ ಗಳಿಸಿದ್ದೇನೆ. ಪಾಂಡು 203 ಪದಕ ಗಳಿಸಿದೆ. ಬೆಂಗಳೂರಿನಲ್ಲಿ ಲಕ್ಷಾಂತರ ಜನರ ಮುಂದೆ ಪಾಂಡುವಿಗೆ ಆದ ಸನ್ಮಾನ ನನಗೆ ಬಹಳಷ್ಟು ಖುಷಿ ಕೊಟ್ಟಿದೆ. ಕಂಬಳದ ಆರಂಭದಿಂದ ಕಂಬಳ ಮುಗಿದು ಲಾರಿ ಹತ್ತುವವರೆಗೂ ಪಾಂಡುವಿನೊಂದಿಗೆ ಸೆಲ್ಫಿಗಾಗಿ ಜನರು ಮುಗಿಬೀಳುತ್ತಿದ್ದರು. ಕಾಪು ಮಾರಿಯಮ್ಮನ ದೇಗುಲ ನಿರ್ಮಾಣಕ್ಕೆ ಎಲ್ಲ ಭಕ್ತರ ತನು ಮನ ಧನದ ಸಹಕಾರವಿರಲಿ ಎಂದರು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಮಾಜಿ ಅಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ರತ್ನಾಕರ ಶೆಟ್ಟಿ ನಡಿಕೆರೆ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಕಾಶಿನಾಥ್ ಶೆಣೈ, ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.